Advertisement

ಯುಜಿಡಿ: ಅಧಿಕಾರಿ ಕಾರ್ಯಶೈಲಿ ಬದಲು, ಜನ ಸಹಕಾರವೇ ಪರಿಹಾರ

09:14 AM Mar 05, 2020 | mahesh |

ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಸೇರಿ ಸಮಸ್ಯೆ ತೀವ್ರಗೊಳ್ಳುವಲ್ಲಿ ಹಲವು ಕಾರಣಗಳಿವೆ. ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆಯೋ ಅಷ್ಟೇ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಹಾಗೂ ಸಮಸ್ಯೆಯ ಗಂಭೀರತೆಯನ್ನು ಮೊದಲೇ ಗ್ರಹಿಸಿ ಶಾಶ್ವತ ಪರಿಹಾರಕ್ಕೆ ಕಾರ್ಯೋನ್ಮುಖವಾಗುವುದರಲ್ಲೂ ಕೊಂಚ ಎಡವಿರುವುದು ಸ್ಪಷ್ಟ. ವಿಧಾನಸಭೆಯಲ್ಲಿ ಸಮಸ್ಯೆಯ ಪ್ರಸ್ತಾವ, ಯೋಜನೆಗಳ ರೂಪಣೆ ಇತ್ಯಾದಿ ನಿರಂತರವಾಗಿ ಆಗುವಂಥವು. ಆದರೆ, ಸಮಸ್ಯೆಯ ಗಂಭೀರತೆಯನ್ನು ರಾಜ್ಯ ಸರಕಾರಕ್ಕೆ ಅರ್ಥೈಸಿ, ವಿವಿಧ ರೀತಿಯಲ್ಲಿ ಅನುದಾನ ತಂದು, ಕಾಲಮಿತಿಯೊಳಗೆ ಜಾರಿಗೊಳಿಸುವ ಉಮೇದು ಇನ್ನಷ್ಟು ಹೆಚ್ಚಿರಬೇಕಿತ್ತು. ಬಹುಶಃ ಸಮಸ್ಯೆ ಇಷ್ಟೊಂದು ಗಂಭೀರತೆ ಪಡೆಯಲಾರದೆಂದು ಎಣಿಸಿದ್ದಿರಲೂಬಹುದು. ಇಲ್ಲಿ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಸಮಸ್ಯೆಯನ್ನು ನಿರ್ವಹಿಸಲು ಹಾಗೂ ನಿವಾರಿಸಲು ಪಟ್ಟ ಪ್ರಯತ್ನವನ್ನು ವಿವರಿಸಿದ್ದಾರೆ. ಜನಪ್ರತಿನಿಧಿಗಳ ಅಭಿಪ್ರಾಯದ ಕುರಿತ ಪ್ರಾಮಾಣಿಕತೆಯನ್ನು ನಾವು ಪ್ರಶ್ನಿಸುವುದಿಲ್ಲ. ಅದನ್ನು ಉಡುಪಿ ನಗರದ ನಾಗರಿಕರೇ ಅಳೆದು ತೂಗಿ ನಿರ್ಧರಿಸಬೇಕು.

Advertisement

ಎಸ್‌ಟಿಪಿ, ವೆಟ್‌ವೆಲ್‌ಗ‌ಳ ಸಮರ್ಪಕ ನಿರ್ವಹಣೆ ತುರ್ತಾಗಿ ಆಗಬೇಕು
– ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌

 ನಿಮ್ಮ ಅವಧಿಯಲ್ಲಿ ಈ ಸಮಸ್ಯೆಗೆ ಕೊಟ್ಟ ಗಮನವೆಷ್ಟು?
- ನಾನು ಮಂತ್ರಿಯಾಗಿದ್ದಾಗ ಎಡಿಬಿ ಯೋಜನೆಯಲ್ಲಿ ಸರಕಾರ ದಿಂದ 320 ಕೋಟಿ ರೂ. ಮಂಜೂರಾತಿಗೊಳಿಸಿದ್ದೆ. ಅದರಲ್ಲಿ 290 ಕೋಟಿ ರೂ. ಕುಡಿಯುವ ನೀರಿನ ಯೋಜನೆಗೆ, 30 ಕೋ.ರೂ ಒಳಚರಂಡಿ (ಯುಜಿಡಿ) ಗೆ ಯೋಜನೆಗೆ ಬಳಸಲು ಮೀಸಲಿರಿಸಿದ್ದೆ. ಆ 30 ಕೋಟಿ ಯಲ್ಲಿ ನಿಟ್ಟೂರು ಎಸ್‌ಟಿಪಿ ಮೇಲ್ದರ್ಜೆಗೆ ಏರಿಸುವುದು, ನೀರಿನ ಮರು ಶುದ್ಧೀಕರಣ, ಕೆಟ್ಟು ಹೋದ ಹಳೆ ಒಳಚರಂಡಿಗಳ ದುರಸ್ತಿ ಸೇರಿವೆ. ಅಧಿಕಾರ ಕಳೆದುಕೊಂಡ ಮೇಲೆ ಏನಾಗಿದೆಯೋ ಗೊತ್ತಿಲ್ಲ.

 ನೀವೂ ಸಹ ಸಮಸ್ಯೆಗೆ ಕೇವಲ ತಾತ್ಕಾಲಿಕ ಪರಿಹಾರ ಕೈಗೊಳ್ಳು ವಲ್ಲಿಯೇ ನಿರತರಾದಿರಿ. ಯಾಕೆ ಶಾಶ್ವತ ಯೋಜನೆಯತ್ತ ಗಮನಹರಿಸಲಿಲ್ಲ?
- ಎಡಿಬಿ ಯೋಜನೆಯನ್ನು ಜಾರಿಗೆ ತಂದಾಗ ಅದರಲ್ಲಿ ಕಲ್ಯಾಣಪುರ ಈ ಭಾಗದಲ್ಲಿ ಕಟ್ಟಡಗಳು ಹೆಚ್ಚಿದ್ದವು. ಅಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆಗಳಿಲ್ಲ. ಹಾಗಾಗಿ ಅಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಅಂತ ಯೋಜಿಸಲಾಗಿತ್ತು. ಅದಕ್ಕೆಂದೇ ಹೆಚ್ಚು ಹಣ ಮೀಸಲಿರಿಸಿದ್ದೆವು. ಮಲ್ಪೆಯ ಕೊಡವೂರು, ಬೈಲೂರು. ಶಿವಳ್ಳಿ, ಪುತ್ತೂರು ಈ ನಾಲ್ಕು ಗ್ರಾಮ ಗಳನ್ನು ಸೇರಿಸಿ ಹೊಸದಾಗಿ ಒಳಚರಂಡಿ ಮಾಡಬೇಕು ಎಂಬ ಚಿಂತನೆಯಿತ್ತು. ಶಾಶ್ವತ ಪರಿಹಾರದತ್ತ ಯೋಚಿಸಿದ್ದೆವು.

 ಒಳಚರಂಡಿಗೆ ಬಂದ ಎಡಿಬಿ ಹಣವನ್ನು ವಾರಾಹಿಗೆ ಬದಲಿಸಿದ್ದೇಕೆ?
- ಎಡಿಬಿ ಯೋಜನೆಯಲ್ಲಿ 200 ಕೋ ರೂ. ಒಳಚರಂಡಿಗೆ, 100 ಕೋ. ರೂ. ಕುಡಿಯುವ ನೀರು ಸರಬರಾಜಿಗೆ ಎಂದು ಆರಂಭದಲ್ಲಿ ಯೋಜನೆ ರೂಪಿಸಿದ್ದೆವು. ಎಸ್‌ಟಿಪಿಯನ್ನು ಮಲ್ಪೆ ಮತ್ತು ಇಂದ್ರಾಳಿ ಈ ಎರಡು ಕಡೆ ಮಾಡಬೇಕು ಅನ್ನುವುದು ನಮ್ಮ ಉದ್ದೇಶವಾಗಿತ್ತು. ಆಗ‌ ಕೆಲವು ಕಡೆ ವಿರೋಧ ವ್ಯಕ್ತವಾಯಿತು. ಒಳಚರಂಡಿ, ಬೇಡ. ವೆಟ್‌ವೆಲ್‌, ಎಸ್‌ಟಿಪಿ ಬೇಡ ಇತ್ಯಾದಿ ಸಮಸ್ಯೆಗಳು
ಹುಟ್ಟಿಕೊಂಡವು, ಬಹಳಷ್ಟು ಪ್ರತಿಭಟನೆಗಳು ನಡೆದವು. ಹಾಗಾಗಿ ಸುಮ್ಮನಾದೆವು.

Advertisement

 ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ಯಾವುದು ಪ್ರಾಮುಖ್ಯವಾದುದು?
- ಕುಡಿಯುವ ನೀರಿಗೆ ಪೆರಂಪಳ್ಳಿಯಲ್ಲಿ ಒಂದು ಡ್ಯಾಮ್‌ ಕಟ್ಟಿ ಅಲ್ಲಿಂದ ಸ್ವರ್ಣ ನದಿಯ ಮೂರನೇ ಘಟಕಕ್ಕೆ ಚಾಲನೆ ಕೊಡಲಾಗಿತ್ತು. ಸ್ವರ್ಣ ನದಿಯ ಘಟಕದಲ್ಲಿ ನೀರು ಸಂಗ್ರಹ ಕಡಿಮೆ ಎಂದು ವಾರಾಹಿಯಿಂದ ನೀರು ತರಿಸಬೇಕಾಯಿತು. ವಾರಾಹಿಯಿಂದ ನೀರು ತರಬೇಕಾದರೆ 300 ಕೋ.ರೂ ಬೇಕಿತ್ತು. ಹೀಗಾಗಿ ನಿರ್ಧಾರ ಬದಲಿಸಿ, ಹಣ ವರ್ಗಾಯಿಸಲಾಯಿತು.

 ಇಂದ್ರಾಣಿ ಸಮಸ್ಯೆಗೆ ಪರಿಹಾರವೇನು?
- ಈಗ ಮುಖ್ಯವಾಗಿ ಬೇರೆಬೇರೆ ಕಡೆಗಳಲ್ಲಿ ಒಳಚರಂಡಿಯಲ್ಲಿ ಸೋರಿಕೆ ಇದೆ. ಮಠದ ಬೆಟ್ಟು ಇತ್ಯಾದಿ ಕಡೆಗಳ ನೀರು ನದಿಗೆ ಸೇರುತ್ತಿದೆ. ಪರಿಸರದ ಮನೆಯವರು, ಹೊಟೇಲಿನವರು ಎಲ್ಲರೂ ಕೊಳಚೆ ನೀರನ್ನು ನದಿಗೆ ಬಿಡುತ್ತಿದ್ದಾರೆ. ಇದರಿಂದ‌ ಸಮಸ್ಯೆಯಾಗುತ್ತಿದೆ. ಇದನ್ನು ಮೊದಲು ತಡೆಯಬೇಕು. ಅದಕ್ಕೆ ಕೂಡಲೇ ಸಮಗ್ರ ಒಳಚರಂಡಿ ವ್ಯವಸ್ಥೆ ಜಾರಿಯಾಗಬೇಕಿದೆ.

 ವೆಟ್‌ವೆಲ್‌ಗ‌ಳು, ಎಸ್‌ಟಿಪಿ ಮುಂತಾದ ಮೂಲ ಅಗತ್ಯಗಳ ಕಳಪೆ ನಿರ್ವಹಣೆಯೂ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ಇದಕ್ಕೆ ಪರಿಹಾರ ಏನು?
- ನಿಟ್ಟೂರು ಎಸ್‌ಟಿಪಿ ಘಟಕದಲ್ಲಿ ಸಮಸ್ಯೆಗಳಿವೆ. ಘಟಕದಲ್ಲಿ ಮೂರು ಹಂತದಲ್ಲಿ ಶುದ್ಧೀಕರಣ ಆಗಬೇಕು. ಈಗ ಮೊದಲ ಎರಡು ಹಂತ ದಲ್ಲಿ ಮಾತ್ರ ಆಗುತ್ತಿದೆ. ಅದನ್ನೂ ಸರಿಯಾಗಿ ಮಾಡುತ್ತಿಲ್ಲ. ಸರಿಯಾಗಿ ರಾಸಾಯನಿಕ ಇತ್ಯಾದಿ ಬಳಸುತ್ತಿಲ್ಲ. ಉಳಿತಾಯ ಮಾಡುತ್ತಾರೋ ಅವ್ಯವಹಾರ ನಡೆಸು ತ್ತಿದ್ದಾರೋ ನನಗೆ ಗೊತ್ತಿಲ್ಲ. ಅಂತೂ ನಿರ್ವಹಣೆ ಸರಿ ಮಾಡುತ್ತಿಲ್ಲ. ನಿಟ್ಟೂರು ಎಸ್‌ಟಿಪಿ ಘಟಕದಲ್ಲಿ 3ರಿಂದ 4 ಕೋಟಿ ರೂ. ಹೆಚ್ಚುವರಿ ಖರ್ಚನ್ನು ನೀರಿನ ಮರುಬಳಕೆ ವಿಧಾನಕ್ಕೆ ಖರ್ಚು ಮಾಡಿದರೆ, ಆ ನೀರನ್ನು ಕೈಗಾರಿಕೆಗಳಿಗೆ, ಕೃಷಿಗೆ ಉಪಯೋಗಿಸಬಹುದು. ನದಿಗೆ ಅಥವಾ ಸಮುದ್ರಕ್ಕೆ ಬಿಡುವ ಅಗತ್ಯವಿರುವುದಿಲ್ಲ.

 ಸದ್ಯಕ್ಕೆ ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ತೆಗೆದುಕೊಳ್ಳಬಹುದು?
- ಈಗ ಕೆಟ್ಟುಹೋಗಿರುವ ಒಳಚರಂಡಿಗಳನ್ನು ಸರಿಪಡಿಸಬೇಕು. ಹೊಟೇಲ್‌, ಮನೆಯವರು ನೀರು ಬಿಡುವುದನ್ನು ತಡೆಯಲು ಸಮಗ್ರ ಒಳಚರಂಡಿ ಯೋಜನೆ ಜಾರಿಯಾಗಬೇಕು. ನಿಟ್ಟೂರಿನ ಎಸ್‌ಟಿಪಿ ಅನ್ನು ಮೇಲ್ದರ್ಜೆಗೇರಿಸಿ, ಶುದ್ಧೀಕರಿಸಿ ಆ ನೀರಿನ ಮರು ಬಳಕೆಗೆ ಕ್ರಮ ವಹಿಸಿದಲ್ಲಿ. ಘಟಕದಿಂದ ನೀರನ್ನು ಹೊರಗೆ ಬಿಡಬೇಕಿಲ್ಲ. ಇವೆಲ್ಲವೂ ನಡೆದಲ್ಲಿ ಇಂದ್ರಾಣಿ ನದಿ ಸಮಸ್ಯೆ ಬಗೆಹರಿಯುತ್ತದೆ.

ಕಾರ್ಯವೈಖರಿ ಬದಲಾಗಬೇಕು; ನಾಗರಿಕರ ಸಹಕಾರವೂ ಬೇಕು
– ಮಾಜಿ ಶಾಸಕ ಯು.ಆರ್‌. ಸಭಾಪತಿ

 ನಿಮ್ಮ ಸಂದರ್ಭದಲ್ಲಿ ಸಮಸ್ಯೆ ಇನ್ನೂ ಸಣ್ಣ ಸ್ವರೂಪದಲ್ಲಿತ್ತು. ಏಕೆ ಆಗಲೇ ಹೆಚ್ಚು ಗಮನ ಕೊಟ್ಟು ಸರಿಪಡಿಸಲು ಪ್ರಯತ್ನಿಸಲಿಲ್ಲ?
- ಹಿಂದೆ ನದಿಯು ತೋಡಿನಂತೆ ಹರಿಯುತ್ತಿತ್ತು. ಕಲ್ಸಂಕ ಮಲ್ಪೆ, ಕಲ್ಮಾಡಿಯಾಗಿ ನೀರು ಹರಿಯುತ್ತಿತ್ತು. ನಮ್ಮ ಅವಧಿಯಲ್ಲಿ ಸಮಸ್ಯೆ ಈ ರೀತಿಯಲ್ಲಿ ಇರಲಿಲ್ಲ.

 ಸಮಸ್ಯೆಯ ಗಂಭೀರತೆ ಅರಿತೂ ಪ್ರಮುಖವಾಗಿ ಪರಿಗಣಿಸದಿದ್ದಕ್ಕೆ ಕಾರಣವೇನು? ಅದರ ತೀವ್ರ ಸ್ವರೂಪವನ್ನು ಅಳೆಯುವಲ್ಲಿ ಸೋತಿರಾ?
- ನದಿಯ ಅಗಲೀಕರಣ, ಹೂಳು ತೆಗೆಯುವ ಕೆಲಸ ಹಿಂದೆ ನಮ್ಮ ಅವಧಿಯಲ್ಲಿ ನಡೆದಿದೆ. ಆಗ ಸಮಸ್ಯೆ ತೀವ್ರ ಸ್ವರೂಪ ದಲ್ಲಿರದ ಕಾರಣ, ಆಗಿನ ಕೆಲಸಕ್ಕೆ ಗಮನ ಕೊಡ ಲಾಗಿತ್ತು,

 ನಿಮ್ಮ ಅವಧಿಯಲ್ಲಿ ಇಂದ್ರಾಣಿ ನದಿ ಕಲುಷಿತ ವಾಗ ದಂತೆ ತಡೆಯಲು ಏನೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಿ?
- 1994 ಇಸವಿಯಲ್ಲಿ ಶಾಸಕ ರಾಗಿದ್ದಾಗ ಈ ಭಾಗದಲ್ಲಿ ನೀರು ಸಹಜ ವಾಗಿಯೇ ಹರಿಯುತ್ತಿತ್ತು. ಈಗಾಗಲೇ ಹೇಳಿ ದಂತೆ ಸಮಸ್ಯೆ ಇಷ್ಟೊಂದು ಭೀಕರತೆ ಪಡೆದಿರಲಿಲ್ಲ.

 ಎಷ್ಟು ಬಾರಿ ಈ ಸಮಸ್ಯೆಯನ್ನು (ಒಳಚರಂಡಿ ವ್ಯವಸ್ಥೆಗಾಗಿ ಕೋಟ್ಯಂತರ ರೂ.ಗಳು ಬೇಕಾದ ಕಾರಣ) ವಿಧಾನಸಭೆಯಲ್ಲಿ ಪ್ರಸ್ತಾವಿಸಿದ್ದೀರಿ? ಅದರ ಪರಿಣಾಮವೇನು?
- ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ಅನುದಾನ ಮಾತ್ರ ಸಿಕ್ಕಿರಲಿಲ್ಲ. ಬಹಳ ಬಾರಿ ಪ್ರಯತ್ನಿಸಿದ್ದೆ.

 ನಿಮ್ಮೆಲ್ಲಾ ಪ್ರಯತ್ನದಿಂದ ನಿಮ್ಮ ಅವಧಿಯಲ್ಲಿ ಇಂದ್ರಾಣಿ ನದಿ ಶುದ್ಧೀಕರಣ ಸಂಬಂಧ ಯಾವುದಾದರೂ ಯೋಜನೆ ರೂಪಿಸಲಾಗಿತ್ತೇ?
- ಆ ಸಮಯದಲ್ಲಿ ಸಮಸ್ಯೆಗಳ ಉದ್ಭವ ಆಗಿರಲಿಲ್ಲ. ಬಳಿಕ ಸ್ಥಳೀಯರು ಕಸಕಡ್ಡಿಗಳನ್ನು ಸುರಿಯುವ ಮೂಲಕ ಸಮಸ್ಯೆಯನ್ನು ಹೆಚ್ಚಿಸಿದರು. ಅಧಿಕಾರಿಗಳು ಇದನ್ನು ನಿಯಂತ್ರಿಸಬೇಕಿತ್ತು.

 ನಗರಸಭೆ ಅಧಿಕಾರಿಗಳು ಕನಿಷ್ಠ ವೆಟ್‌ವೆಲ್‌ ನಿರ್ವಹಣೆಗೂ ಗಮನಿಸದಿದ್ದಾಗ ನೀವೇಕೆ ಸುಮ್ಮನಿದ್ದಿರಿ? ಅವರ ನಿಷ್ಕ್ರಿಯತೆಗೆ ಯಾವ ರೀತಿಯ ಮದ್ದು ಕೊಡಲು ಪ್ರಯತ್ನಿಸಿದ್ದೀರಿ?
- ಹಿಂದಿನಿಂದಲೂ ಒಳ ಚರಂಡಿ ಮಂಡಳಿ ಯಾವುದಕ್ಕೂ ಬಾರದ ಮಂಡಳಿ ಯಾಗಿಯೇ ಕಾರ್ಯ  ನಿರ್ವಹಿಸುತ್ತಿತ್ತು. ಎಂಜಿ ನಿಯರ್‌, ಮೇಲಧಿ ಕಾರಿಗಳ ಈ ಬಗ್ಗೆ ಗಮನಕ್ಕೂ ತರಲಾಗಿತ್ತು. ಆದರೆ ಪ್ರಯೋಜನ ಕಾಣುತ್ತಿರಲಿಲ್ಲ. ಹಿಂದಿ ನಿಂದಲೂ ಹೀಗೇ ಇದೆ. ಈಗಲೂ ಹಾಗೆಯೇ ಇದೆ. ಅವರ ಕಾರ್ಯ ವೈಖರಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

 ನಿಮ್ಮ ದೃಷ್ಟಿಯಲ್ಲಿ ಸರಿಯಾದ ಪರಿಹಾರವಿದ್ದರೆ ತಿಳಿಸಿ.
- ಜನರು ಕಸಗಳನ್ನು ತಂದು ಸುರಿಯುವಂತ, ಒಳಚರಂಡಿ ನೀರು ನದಿಗೆ ಬಿಡುವ, ಹೊಟೇಲ್‌ಗ‌ಳಿಂದ ಕಸ ಮೊದಲಾದ ತ್ಯಾಜ್ಯಗಳನ್ನು ಸುರಿಯುವ ಕೆಲಸಕ್ಕೆ ಮೊದಲು ಕಡಿವಾಣ ಹಾಕಬೇಕು. ಅಧಿಕಾರಿಗಳು ಸರಿಯಾದ ಕ್ರಮ ಕೈಗೊಂಡು, ಜನರೂ ಸ್ವಚ್ಛತೆಗೆ ಬೆಂಬಲ ನೀಡಿ ಸಹಕರಿಸಿದರೆ ಪರಿಹಾರ ಕಾಣಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next