Advertisement

ಉಡುಪಿ ನಗರ ಯುಜಿಡಿ ಅಭಿವೃದ್ಧಿ; ಇನ್ನೂ ಬಾರದ ನಿರೀಕ್ಷಿತ ಅನುದಾನ

10:49 AM Nov 11, 2022 | Team Udayavani |

ಉಡುಪಿ: ನಗರದಲ್ಲಿ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ (ಯುಜಿಡಿ) ರೂಪುಗೊಳ್ಳಲು ಇನ್ನೆಷ್ಟು ವರ್ಷ ಕಾಯಬೇಕು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈಗಾಗಲೆ ಉಡುಪಿ ನಗರದ ಒಳಚರಂಡಿ ಅವ್ಯವಸ್ಥೆಯಿಂದ ಅಂತರ್ಜಲ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದೆ. ಇಂದ್ರಾಣಿ ನದಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ.

Advertisement

ಸಮರ್ಪಕವಾದ ಯುಜಿಡಿ ವ್ಯವಸ್ಥೆ ಇರದಿರುವುದು ಸುತ್ತಲಿನ ಪ್ರದೇಶ ಹಾಗೂ ಜಲಮೂಲಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ನಗರದ ಯುಜಿಡಿ ವ್ಯವಸ್ಥೆ ಮರುಸ್ಥಾಪನೆಗೆ 330 ಕೋಟಿ ರೂ. ವೆಚ್ಚದ ಯೋಜನೆಯನ್ನು ನಗರಸಭೆ ಸರಕಾರಕ್ಕೆ ಸಲ್ಲಿಸಿ ವರ್ಷ ಕಳೆದಿದೆ. ಅನುದಾನ ಬಿಡುಗಡೆಗೆ ಸರಕಾರ ಮೀನಮೇಷ ಎಣಿಸುತ್ತಿದ್ದು, ಈ ಯೋಜನೆ ನನೆಗುದಿಗೆ ಬೀಳದಂತೆ ಜನ ಪ್ರತಿನಿಧಿಗಳು ಎಚ್ಚರವಹಿಸಬೇಕಿದೆ.

ಬೆಳೆದ ನಗರ, ಹೆಚ್ಚಿದ ಒತ್ತಡ ನಗರಸಭೆ ವ್ಯಾಪ್ತಿಯ ಶೇ. 17ರಷ್ಟು ಪ್ರದೇಶದಲ್ಲಿ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಒಳ ಚರಂಡಿ ವ್ಯವಸ್ಥೆ ಇದ್ದರೂ, ಅದರ ಆರೋಗ್ಯ ಕೆಟ್ಟಿದೆ. ಆಗಿನ ಜನಸಂಖ್ಯೆಯನುಸಾರ ನಿರ್ಮಿಸಲಾಗಿದ್ದ ಒಳ ಚರಂಡಿಗಳು, ನಗರ ಬೆಳೆದಂತೆ ಒತ್ತಡ ಹೆಚ್ಚಾಗಿ ಪ್ರಯೋಜನಕ್ಕೆ ಬಾರದಾಗಿವೆ. ಎರಡು ಹಂತಗಳಲ್ಲಿ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೇರಿದರೂ ವ್ಯವಸ್ಥಿತಗೊಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸದಾ ಒಳಚರಂಡಿ ಸಮಸ್ಯೆ ನಾಗರಿಕರನ್ನು ಕಾಡತೊಡಗಿದೆ. ಅಲ್ಲಲ್ಲಿ ಪೈಪ್‌ಗಳು ಒಡೆಯುತ್ತಿದೆ. ಎಲ್ಲ ತ್ಯಾಜ್ಯವು ಇಂದ್ರಾಣಿ ನದಿಯ ಒಡಲು ಸೇರಿ ಕಲುಷಿತವಾಗಿದ್ದು, ಇಂದ್ರಾಣಿ ನದಿಯನ್ನು ಪುನಶ್ಚೇತನಗೊಳಿಸಬೇಕಿದೆ. ಇಂದ್ರಾಳಿಯಿಂದ ಕಲ್ಮಾಡಿವರೆಗೂ ನಗರದ ಒಳ ಚರಂಡಿಯ ತ್ಯಾಜ್ಯ ನೀರು ಮಳೆ ನೀರಿನ ಚರಂಡಿ ಮೂಲಕ ಇಂದ್ರಾಳಿಯನ್ನು ಸೇರುತ್ತಿದೆ.

ಹೊಸ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸಲಾಗಿದೆ. ಪ್ರತೀ 30 ಮೀಟರ್‌ಗೆ ಒಂದರಂತೆ 5,600 ಮ್ಯಾನ್‌ ಹೋಲ್‌, 5 ವೆಟ್‌ವೆಲ್‌ಗ‌ಳು ನಿರ್ಮಾಣವಾಗಲಿವೆ. ಸರಕಾರ ಶೀಘ್ರ ಅನುದಾನ ಒದಗಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

ಏನಿದು ಯುಜಿಡಿ?

Advertisement

ಮನೆ (ಅಪಾರ್ಟ್‌ಮೆಂಟ್‌ ಸಹಿತ), ಕೈಗಾರಿಕೆ, ಹೊಟೇಲ್‌, ರೆಸ್ಟೋರೆಂಟ್‌, ವಾಣಿಜ್ಯ ಮಳಿಗೆಗಳಿಂದ ಹೊರ ಬರುವ ಕೊಳಚೆ ನೀರು ವ್ಯವಸ್ಥಿತವಾಗಿ ಭೂಮಿಯ ಒಳಗೆ ಹರಿಯುವ ವ್ಯವಸ್ಥೆಯೇ ಒಳಚರಂಡಿ (ಯುಜಿಡಿ: ಅಂಡರ್‌ ಗ್ರೌಂಡ್‌ ಡ್ರೈನೇಜ್‌). ಇದರ ಮೂಲಕ ಹರಿದ ನೀರನ್ನು ಶುದ್ಧೀಕರಣ ಘಟಕಗಳಿಗೆ ಹರಿಸಿ ಅಲ್ಲಿ ಶುದ್ಧೀಕರಿಸಿ ಮರುಬಳಕೆಗೆ ಯುಕ್ತಗೊಳಿಸುವ ವ್ಯವಸ್ಥೆಯೇ ಕೊಳಚೆ ನೀರು ನಿರ್ವಹಣೆ ಮತ್ತು ಶುದ್ಧೀರಣ ವ್ಯವಸ್ಥೆ.

ಇಂದ್ರಾಣಿ ನದಿ ಪುನಶ್ಚೇತನ ಅಗತ್ಯ

ಇಂದ್ರಾಣಿ ನದಿ ಪುನಶ್ಚೇತನಕ್ಕೆ ಈ ಯೋಜನೆ ಅಗತ್ಯವಾಗಿ ಅನುಷ್ಠಾನಗೊಳ್ಳಬೇಕಿದೆ. ಪ್ರಸ್ತುತ ನಗರದ ಎಲ್ಲ ತ್ಯಾಜ್ಯವು ಇಂದ್ರಾಣಿ ನದಿಯ ಒಡಲು ಸೇರಿ ಕಲುಷಿತವಾಗಿದೆ. ಇಂದ್ರಾಳಿಯಿಂದ ಕಲ್ಮಾಡಿವರೆಗೂ ನಗರದ ಒಳಚರಂಡಿಯ ತ್ಯಾಜ್ಯ ನೀರು ಮಳೆ ನೀರಿನ ಚರಂಡಿ ಮೂಲಕ ಇಂದ್ರಾಳಿಯನ್ನು ಸೇರುತ್ತಿದೆ. ಇಲ್ಲಿನ ನೀರು ಬಣ್ಣ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿ, ಹಲವೆಡೆ ಪರಿಸರ ದುರ್ವಾಸನೆಯಿಂದ ಕೂಡಿರುತ್ತದೆ. ನಗರ ಭಾಗದಲ್ಲಿ 800ಕ್ಕೂ ಅಧಿಕ ಬಾವಿಗಳು ಸಂಪೂರ್ಣ ಹದಗೆಟ್ಟಿವೆ.

ಸರಕಾರ ಅನುಮೋದನೆ: ನಗರಸಭೆ ವ್ಯವಸ್ಥಿತ ಯುಜಿಡಿ ರೂಪಿಸಲು ಸಲ್ಲಿಸಿದ ಯೋಜನಾ ವರದಿಗೆ ಸರಕಾರ ಅನುಮೋದನೆ ನೀಡಿದ್ದು, ಅನುದಾನ ಬಿಡುಗಡೆಗಾಗಿ ಶಾಸಕ ರಘುಪತಿ ಭಟ್‌ ಅವರ ನೇತೃತ್ವದಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಸಿಎಂ ಅವರು ಉಡುಪಿಗೆ ಆಗಮಿಸಿದ್ದಾಗಲೂ ಈ ಬಗ್ಗೆ ಚರ್ಚೆ ನಡೆದಿದೆ. ಸದ್ಯದ ಮಟ್ಟಿಗೆ ನಾಗರಿಕರಿಗೆ ಸಮಸ್ಯೆಯಾಗದಂತೆ ಒಳಚರಂಡಿಯ ತುರ್ತು ಕಾಮಗಾರಿಗಳನ್ನು ನಗರಸಭೆ ಅನುದಾನದಿಂದ ಹಂತಹಂತವಾಗಿ ನಡೆಸಲಾಗುತ್ತಿದೆ. ಕಲ್ಸಂಕ ವೆಟ್‌ ವೆಲ್‌, ಕಿನ್ನಿಮೂಲ್ಕಿ, ಶಾರದಾ ಹೊಟೇಲ್‌ ಬಳಿ ಕಾಮಗಾರಿ ನಿರ್ವಹಿಸಲಾಗಿದೆ. – ಸುಮಿತ್ರಾ ನಾಯಕ್‌, ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next