Advertisement
ಹೈಕೋರ್ಟ್ ನಿರ್ದೇಶನದಂತೆ ಕೆಎಸ್‌ಒಯು ಅಧಿಕಾರಿಗಳು ದಿಲ್ಲಿಯಲ್ಲಿರುವ ಯುಜಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಇದಾದ ಬಳಿಕ ಪತ್ರವನ್ನೂ ಬರೆದಿದ್ದಾರೆ. ಆದರೆ ಯುಜಿಸಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Related Articles
Advertisement
ಆತಂಕದಲ್ಲಿ ಅಭ್ಯರ್ಥಿಗಳು: 2012-13ನೇ ಶೈಕ್ಷಣಿಕ ವರ್ಷದ ಅನಂತರ ಕೆಎಸ್‌ಒಯು ತನ್ನ ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣ ಸಹಿತ ಸಾಮಾನ್ಯ ಕೋರ್ಸ್‌ಗಳ ನವೀಕರಣ ಮಾಡಿಸಿಕೊಂಡಿಲ್ಲ ಎಂದು ಯುಜಿಸಿ ತಿಳಿಸಿತ್ತು. ಈ ಕುರಿತು ಯಜಿಸಿ ಕಾರಣ ಕೇಳಿ ಕೆಎಸ್‌ಒಯುಗೆ ನೋಟಿಸ್ ಜಾರಿ ಮಾಡಿತ್ತು. ವಿವಿಯ ಅಧಿಕಾರಿಗಳ ಉತ್ತರ ಆಲಿಸಿದ ಯುಜಿಸಿ ಮಾನ್ಯತೆ ನವೀಕರಿಸದೇ ಇರಲು ನಿರ್ಧರಿಸಿತ್ತು. ಇದಾದ ಬಳಿಕವೂ ಕೆಎಸ್‌ಒಯು ಕೆಲವು ಕೋರ್ಸ್ ಗಳಿಗೆ ನಿಯಮ ಉಲ್ಲಂಘಸಿ ವಿದ್ಯಾರ್ಥಿ ಗಳನ್ನು ದಾಖಲೆ ಮಾಡಿಕೊಂಡಿತ್ತು. 2012-13ರ ಅನಂತರ ರಾಜ್ಯ ಮುಕ್ತ ವಿವಿಯಲ್ಲಿ ಪದವಿ ಪಡೆದ ಲಕ್ಷಾಂತರ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ.
2 ವಾರಗಳ ಕಾಲಾವಕಾಶ: 2017-18ನೇ ಸಾಲಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಯುಜಿಸಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ಹೈಕೋರ್ಟ್, ಎರಡು ವಾರದೊಳಗೆ ಪ್ರಸಕ್ತ ಸಾಲಿಗೆ ಮಾನ್ಯತೆ ನೀಡುವಂತೆ ಸೂಚಿಸಿತ್ತು. ಡಿ.27ಕ್ಕೆ ಎರಡು ವಾರದ ಗಡುವು ಮುಗಿಯುತ್ತದೆ. ಆದರೆ ಡಿ. 26ರ ಸಂಜೆಯವರೆಗೂ ಯುಜಿಸಿಯಿಂದ ಮಾನ್ಯತೆಗೆ ಸಂಬಂಧಿಸಿದ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಂದನೆ ಬಂದಿಲ್ಲ ಎಂದು ಕೆಎಸ್‌ಒಯುನ ಹಿರಿಯ ಅಧಿಕಾರಿ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಕೆಎಸ್‌ಒಯುಗೆ ಪ್ರಸಕ್ತ ಸಾಲಿಗೆ ವಿದ್ಯಾರ್ಥಿ ಗಳನ್ನು ದಾಖಲಿಸುವ ಸಂಬಂಧ ಯುಜಿಸಿ ಮಂಡಳಿಯ ಸಭೆಯಲ್ಲಿ ತೀರ್ಮಾನವಾಗಬೇಕು. ಯುಜಿಸಿಯಿಂದ ಯಾವುದೇ ಮಾಹಿತಿ ಇಲ್ಲದೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಯುಜಿಸಿ ಹಸಿರು ನಿಶಾನೆ ತೋರಿದ ತತ್‌ಕ್ಷಣವೇ ಪ್ರವೇಶ ಪ್ರಕ್ರಿಯೆ ಆರಂಭಿಸುತ್ತೇವೆ. ಯುಜಿಸಿ ಮಂಡಳಿ ಸಭೆಯ ನಿರ್ಧಾರವೇ ಅಂತಿಮ ವಾಗಿರುತ್ತದೆ ಎಂಬ ಮಾಹಿತಿ ನೀಡಿದರು.
ಹೈಕೋರ್ಟ್ ಆದೇಶದಂತೆ ಪತ್ರ ಬರೆದಿದ್ದೇವೆ ಹಾಗೂ ದಿಲ್ಲಿಗೆ ಹೋಗಿ ಯುಜಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ಯುಜಿಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡಿ.27ಕ್ಕೆ ನ್ಯಾಯಾಲಯ ನೀಡಿದ 2 ವಾರಗಳ ಕಾಲಾವಕಾಶ ಪೂರ್ಣಗೊಳ್ಳಲಿದೆ.-ಡಾ| ಕೆ.ಜಿ.ಚಂದ್ರಶೇಖರ್, ಕುಲಸಚಿವ, ಕೆಎಸ್‌ಒಯು – ರಾಜು ಖಾರ್ವಿ ಕೊಡೇರಿ/ಗಿರೀಶ್ ಹುಣಸೂರು