Advertisement
`ಉತ್ಸವ ಪ್ರಿಯಾ ಖಲು ಮನುಷ್ಯಾಃ’ ಎಂಬಂತೆ ಉತ್ಸವ, ಸಂಭ್ರಮ ಪ್ರಿಯಾರಾದ ನಾವು ನಿತ್ಯ ಜೀವನದ ಜಂಜಾಟದ ನಡುವೆಯೇ ಸ್ವಲ್ಪ ಬಿಡುವು ಮಾಡಿಕೊಂಡು ಹಬ್ಬಗಳನ್ನು ಆಚರಿಸಿ ನವೋತ್ಸಾಹದಿಂದ ಮುಂದುವರಿಯುತ್ತೇವೆ. ಈ ರೀತಿ ರೂಪಿತವಾದ ಒಂದೊಂದು ಹಬ್ಬಕ್ಕೂ ತನ್ನದೇ ಆದ ಚಾರಿತ್ರಿಕ, ಪೌರಾಣಿಕ ಮತ್ತುಸಾಮಾಜಿಕ ಹಿನ್ನೆಲೆ, ಸಂದರ್ಭ ಹಾಗೂ ಸಂದೇಶಗಳು ಇವೆ. ಹಬ್ಬಗಳಿಲ್ಲದೆ ನಾವು ಇರಲಾರೆವು, ಬಾಳಲಾರೆವು ಎಂಬಷ್ಟು ಮಟ್ಟಿಗೆ ಹಬ್ಬ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿದೆ.
Related Articles
Advertisement
ನೈಸರ್ಗಿಕ, ಐತಿಹಾಸಿಕ, ಆಧ್ಯಾತ್ಮಿಕ ಕಾರಣಗಳನ್ನೊಳಗೊಂಡ ಚೈತ್ರ ಶುದ್ಧ ಪ್ರತಿಪದೆಯನ್ನು ವರ್ಷಾರಂಭದ ದಿನವೆಂದು ಪ್ರಕೃತಿಯೇ ಒಪ್ಪಿಕೊಂಡಿದೆ.
ನೈಸರ್ಗಿಕವಾಗಿ ಚೈತ್ರ ಶುದ್ಧ ಪಾಡ್ಯದಂದು ಸೂರ್ಯನು ವಸಂತ ಸಂಪಾತದ ಮೇಲೆ ಬರುತ್ತಾನೆ ಆಗ ವಸಂತ ಋತು ಆರಂಭವಾಗಿ ಪ್ರಕೃತಿ ಹಳೆ ಬಟ್ಟೆ ಕಳಚಿ ಹೊಸ ಬಟ್ಟೆ ತೊಟ್ಟು ಮೆರೆಯುತ್ತಾಳೆ. ತರು ಲತೆಗಳು ಹೊಸ ಚಿಗುರಿನಿಂದ ಕಂಗೊಳಿಸುತ್ತವೆ. ಈ ಕಾಲದಲ್ಲಿ ಉಷ್ಣಶೀತಗಳು ಸಮವಾಗಿದ್ದು, ಉತ್ಸಾಹದಾಯಕವಾಗಿ, ಆಹ್ಲಾದದಾಯಕ ಹವಾಗುಣವಿರುವುದರಿಂದ ಚೈತನ್ಯ ಶಕ್ತಿ ಹೆಚ್ಚಿನ ಮಟ್ಟದಲ್ಲಿರುತ್ತದೆ.
ಹಿಂದೆ ಶಾಲಿವಾಹನನೆಂಬ ಚಕ್ರವರ್ತಿ ನಮ್ಮ ದೇಶದ ಮೇಲೆ ದಾಳಿ ಮಾಡಿದ ಶಕರೆಂಬ ಪರಕೀಯರನ್ನು ಸೋಲಿಸಿ ಹೊರಗಟ್ಟಿ ತನ್ನ ವಿಜಯದ ಸಂಕೇತವಾಗಿ ಈ ದಿನದಂದೇ ಶಾಲಿವಾಹನ ಶಕೆ ಆರಂಭಿಸಿದ. ಬ್ರಹ್ಮದೇವನು ಇದೇ ದಿನ ಸೃಷ್ಟಿಯನ್ನು ನಿರ್ಮಿಸಿ ಸತ್ಯಯುಗ ಪ್ರಾರಂಭಿಸಿದ್ದರಿಂದಲೂ ಈ ದಿನವನ್ನು ವರ್ಷದ ಆರಂಭವೆಂದು ಹೇಳಲಾಗಿದೆ.
ಓದಿ : ಮಂಗಳೂರು ಆಳಸಮುದ್ರದಲ್ಲಿ ಮೀನುಗಾರಿಕಾ ಬೋಟ್ ದುರಂತ: ಮೂವರು ಸಾವು, 6 ಮಂದಿ ನಾಪತ್ತೆ
ಪ್ರಕೃತಿಯು ಹೊಸ ಹೂ ಚಿಗುರು ಹೊತ್ತು ನಳನಳಿಸುತ್ತಿರುವ ಹಾಗೆ ನಾವು ಕೂಡ ಹೊಸಬಟ್ಟೆ ತೊಟ್ಟು ದೇವತಾ ಪೂಜೆಯನ್ನು ಮಾಡಿ ಗುರು-ಹಿರಿಯರಿಗೆ ನಮಸ್ಕರಿಸಿ ಅವರಿಂದ ಆರ್ಶಿವಾದ ಸ್ವೀಕರಿಸಬೇಕು. ಆನಂತರ ಬೇವು ಬೆಲ್ಲದ ಮಿಶ್ರಣ ತಿನ್ನಬೇಕು. ಈ ಬೇವು-ಬೆಲ್ಲ ಯುಗಾದಿಯಂದೇ ಏಕೆ ಬೇಕು? ಎಂಬುದಕ್ಕೆ ಆಯುರ್ವೇದವು ಹೇಳುವಂತೆ ವಸಂತ ಋತುವಿನಲ್ಲಿ ತಲೆದೋರುವ ಶಾರೀರಿಕ ವಿಕಾರಗಳಿಗೆ ಬೇವು ಒಳ್ಳೆಯ ಔಷಧ. ಬಹುಕಾಲ ಬಾಳುವ ಗಟ್ಟಿಮುಟ್ಟಾದ ದೇಹ, ಎಲ್ಲ ರೀತಿಯ ರೋಗಗಳ ನಾಶ, ಆರೋಗ್ಯ ಸಂಪತ್ತಿನ ಪ್ರಾಪ್ತಿಗಾಗಿ ಈ ಬೇವು-ಬೆಲ್ಲದ ಸೇವನೆ. ನಮ್ಮ ಬಾಳಿನಲ್ಲಿ ನಾವು ಕಹಿಯನ್ನೆಂದೂ ಬಯಸುವುದಿಲ್ಲ, ಯಾವಾಗಲೂ ಸಿಹಿಯೇ ಇರಲೆಂದು ಅಪೇಕ್ಷೆ ಪಡುವೆವಾದರೂ,ವಾಸ್ತವದಲ್ಲಿ ಜೀವನವು ಸುಖ-ದುಃಖಗಳ, ಲಾಭ-ನಷ್ಟಗಳ, ನಿಂದೆ-ಹೊಗಳಿಕೆಗಳ, ಜಯ-ಅಪಜಯಗಳ ಮಿಶ್ರಣವಾಗಿದೆ. ಸಿಹಿಯಾದ ಸುಖಕ್ಕೆ ಹಿಗ್ಗದೆ, ಕಹಿಯಾದ ಕಷ್ಟಕ್ಕೆ ಕುಗ್ಗದೆ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದೇ ಬೇವು-ಬೆಲ್ಲದ ಸಂಕೇತ. ಹಳೆಯ ತಗಾದೆಗಳೆಲ್ಲ ಅಳಿದು, ಹೊಸತು ಉಳಿದು ಬೆಳೆಯಲಿ ಈ ಯುಗಾದಿ ವಿಶ್ವದ ಜೀವಕೋಟಿಗೆ ಶುಭ ತರಲಿ.