Advertisement

ಯುಗಾದಿ 2023- ಹಬ್ಬದ ಸ್ಪೆಷಲ್ ಸಿಹಿ ಖಾದ್ಯಗಳು!

05:47 PM Mar 21, 2023 | ಶ್ರೀರಾಮ್ ನಾಯಕ್ |

ಬದುಕೆಂಬುವುದು ಬೇವು ಬೆಲ್ಲದಂತೆ… ಸುಖವೂ ಇರುತ್ತದೆ, ದುಃಖವೂ ಇರುತ್ತದೆ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಬಾಳ್ವೆ ನಡೆಸಬೇಕು…ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ ಎನ್ನುತ್ತಾ ಉದಯವಾಣಿ ಓದುಗರಿಗೆ ಯುಗಾದಿಯ ಶುಭಾಶಯಗಳು…

Advertisement

ಹಬ್ಬ ಎಂದರೆ ಮೊದಲಿಗೆ ನೆನಪಿಗೆ ಬರುವುದೆ ಸಿಹಿ ಖಾದ್ಯಗಳು ಅಂದರೆ ಹೋಳಿಗೆ, ಲಡ್ಡು, ಕಜ್ಜಾಯ, ಪಾಯಸ, ಇನ್ನಿತರ ಸಿಹಿ ತಿನಿಸುಗಳು… ಈ ಬಾರಿಯ ಯುಗಾದಿಗೆ ನೀವೂ ಕೂಡಾ ಮನೆಯಲ್ಲಿ ಸಿಹಿ ಮಾಡಬೇಕೆಂದುಕೊಂಡಿದ್ದೀರಾ ಹಾಗಾದರೆ ನಾವು ನಿಮಗಾಗಿ ಕೆಲವೊಂದು ರೆಸಿಪಿಗಳನ್ನು ಮಾಡುವುದು ಹೇಗೆ ಎಂಬುದನ್ನು ವಿವರವಾಗಿ ಹೇಳಿಕೊಡುತ್ತೇವೆ. ಅದರಂತೆ ನೀವು ಮನೆಯಲ್ಲಿ ಸಿಹಿ ತಯಾರಿಸಿ ಮನೆಮಂದಿಯೊಂದಿಗೆ ಯುಗಾದಿ ಹಬ್ಬ ಆಚರಿಸಿ ಸಂಭ್ರಮಿಸಿರಿ…

ಕಡ್ಲೆಬೇಳೆ ಹೋಳಿಗೆ (ಒಬ್ಬಟ್ಟು)
ಬೇಕಾಗುವ ಸಾಮಗ್ರಿಗಳು
ಕಡ್ಲೆಬೇಳೆ -2ಕಪ್‌, ಮೈದಾಹಿಟ್ಟು-1ಕಪ್‌, ಅರಿಶಿನ ಪುಡಿ-ಅರ್ಧ ಚಮಚ, ಏಲಕ್ಕಿ ಪುಡಿ-ಸ್ವಲ್ಪ, ಬೆಲ್ಲ-1ಕಪ್‌, ಎಣ್ಣೆ, ತುಪ್ಪ, ಉಪ್ಪು-ಸ್ವಲ್ಪ.

ತಯಾರಿಸುವ ವಿಧಾನ
-ಮೊದಲಿಗೆ ಕಡ್ಲೆಬೇಳೆಯನ್ನು ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ನಂತರ ಬೇಯಿಸಿದ ಬೇಳೆಯ ನೀರನ್ನು ಬಸಿದು ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
– ನಂತರ ನೀರು ಮುಟ್ಟಿಸದೆ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಹೂರ್ಣ ಮಾಡಿಕೊಳ್ಳಿ.
– ಆಮೇಲೆ ಜರಡಿ ಹಿಡಿದಿಟ್ಟ ಮೈದಾಹಿಟ್ಟಿಗೆ ಅರಿಶಿನ ಪುಡಿ,ಸ್ವಲ್ಪ ಉಪ್ಪು ಮತ್ತು ಎಣ್ಣೆ ಹಾಕಿ ಚೆನ್ನಾಗಿ ಕಲಸಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ.
-ತದನಂತರ ಚಿಕ್ಕ ಗಾತ್ರದ ಹೂರಣದುಂಡೆಗಳನ್ನೂ ಅಷ್ಟೇ ಗಾತ್ರದ ಮೈದಾಹಿಟ್ಟಿನ (ಕಣಕ)ಉಂಡೆಗಳನ್ನು ಮಾಡಿಕೊಳ್ಳಿ.
-ಕಣಕದ ಉಂಡೆಯನ್ನು ಪೂರಿಯ ಹದಕ್ಕೆ ಲಟ್ಟಿಸಿಕೊಂಡು ಅಥವಾ ಕೈಯಲ್ಲೇ ತಟ್ಟಿ ಅದರೊಳಗೆ ಮಾಡಿಟ್ಟ ಹೂರಣವನ್ನು ಇಟ್ಟು ಲಟ್ಟಿಸಿಕೊಳ್ಳಿ.
-ಒಂದು ತವಾಗೆ ಎಣ್ಣೆ ಅಥವಾ ತುಪ್ಪ ಹಾಕಿ ಕಾದಮೇಲೆ ಹೋಳಿಗೆ ಹಾಕಿ ಎರಡೂ ಬದಿಗಳನ್ನು ಹದವಾಗಿ ಕಾಯಿಸಿದರೆ ಬಿಸಿ-ಬಿಸಿಯಾದ ಕಡ್ಲೆಬೇಳೆ ಹೋಳಿಗೆ /ಒಬ್ಬಟ್ಟು ಸವಿಯಲು ಸಿದ್ಧ.
ಇದನ್ನು ತುಪ್ಪ ಜೊತೆಗೆ ತಿನ್ನಲು ಬಹಳ ರುಚಿಯಾಗಿರುತ್ತದೆ.

ಸುಕ್ರುಂಡೆ /ಸುಕ್ಕಿನುಂಡೆ
ಬೇಕಾಗುವ ಸಾಮಗ್ರಿಗಳು
ಕಡ್ಲೆಬೇಳೆ-1ಕಪ್‌, ಬೆಲ್ಲ-ಅರ್ಧ ಕಪ್‌, ಏಲಕ್ಕಿ ಪುಡಿ-ಸ್ವಲ್ಪ, ಮೈದಾ ಹಿಟ್ಟು- ಅರ್ಧ ಕಪ್‌, ಬೆಳ್ತಿಗೆ ಅಕ್ಕಿ-ಅರ್ಧ ಕಪ್‌, ಅರಿಶಿನ ಪುಡಿ-ಅರ್ಧ ಟೀಸ್ಪೂನ್‌, ಉಪ್ಪು-ಸ್ವಲ್ಪ, ಕರಿಯಲು ಎಣ್ಣೆ .

Advertisement

ತಯಾರಿಸುವ ವಿಧಾನ
-ಕಡ್ಲೆಬೇಳೆಯನ್ನು ತೊಳೆದು ಬೇಯಿಸಿರಿ. ಚೆನ್ನಾಗಿ ಬೆಂದ ಮೇಲೆ ಇದರಲ್ಲಿರುವ ನೀರನ್ನು ಬಸಿದುಕೊಳ್ಳಿ.
-ಬೆಂದ ಬೇಳೆಗೆ ಬೆಲ್ಲ ಹಾಕಿ, ಚೆನ್ನಾಗಿ ಮುದ್ದೆಗಟ್ಟುವವರೆಗೆ ಮಗುಚುತ್ತಾ ಇರಬೇಕು. ಆಮೇಲೆ ಬೇಳೆ ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ನೀರು ಮುಚ್ಚಿಸದೆ ನುಣ್ಣಗೆ ರುಬ್ಬಿರಿ ಇಟ್ಟುಕೊಳ್ಳಿ.
-ನಂತರ ಅರ್ಧ ಕಪ್‌ ಅಕ್ಕಿ, ಸ್ವಲ್ಪ ಉಪ್ಪು,ಅರಿಶಿನ ಪುಡಿ,ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ ಸರಿಯಾಗಿ ಮಿಕ್ಸ್‌ ಮಾಡಿಕೊಳ್ಳಿ.
– ಕಡ್ಲೆಬೇಳೆ ಮಿಶ್ರಣವನ್ನು ಉಂಡೆಗಳಾಗಿ ಮಾಡಿಕೊಳ್ಳಿ.
– ನಂತರ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಒಂದೊಂದೇ ಉಂಡೆಯನ್ನು ಕಲಸಿಟ್ಟ ಅಕ್ಕಿ ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಗೆ ಹಾಕಿ ಗರಿ-ಗರಿಯಾಗುವವರೆಗೆ ಸಣ್ಣ ಉರಿಯಲ್ಲಿ ಕರಿದು ತೆಗೆದರೆ ರುಚಿಕರವಾದ ಸುಕ್ರುಂಡೆ /ಸುಕ್ಕಿನುಂಡೆ ಸವಿಯಲು ಸಿದ್ಧ.

ಕಜ್ಜಾಯ
ಬೇಕಾಗುವ ಸಾಮಗ್ರಿಗಳು
ಬೆಳ್ತಿಗೆ ಅಕ್ಕಿ-2ಕಪ್‌, ಬೆಲ್ಲ-1ಕಪ್‌, ಏಲಕ್ಕಿ -ಸ್ವಲ್ಪ, ಬಿಳಿ ಎಳ್ಳು-1ಚಮಚ, ಗಸಗಸೆ-1 ಚಮಚ, ತೆಂಗಿನ ತುರಿ(ಕೊಬ್ಬರಿ)-4 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ
-ಮೊದಲಿಗೆ ಅಕ್ಕಿಯನ್ನು ಸುಮಾರು 8ರಿಂದ 10ಗಂಟೆಗಳ ಕಾಲ ನೆನೆಸಿರಿ. ಪ್ರತಿ ಗಂಟೆಗಳಿಗೊಮ್ಮೆ ನೀರನ್ನು ಬದಲಾಯಿಸಿರಿ(ರಾತ್ರಿಯಿಡೀ ನೆನೆಸಿದರೆ ಉತ್ತಮ).
-ನಂತರ ಮರುದಿನ ನೀರನ್ನು ತೆಗೆದು ಕಾಟನ್‌ ಬಟ್ಟೆಯ ಮೇಲೆ ಅಕ್ಕಿಯನ್ನು ಹರಡಿ ನೀರಿನಾಂಶ ಒಣಗಿಸಲು ಬಿಡಿ. ಆ ಬಳಿಕ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ.ನಂತರ ಜರಡಿ ಸಹಾಯದಿಂದ ಅಕ್ಕಿ ಹಿಟ್ಟನ್ನು ಸೋಸಿಕೊಳ್ಳಿ.
-ತದನಂತರ ಒಂದು ತವಾಕ್ಕೆ ಬಿಳಿ ಎಳ್ಳು ಮತ್ತು ಗಸಗಸೆ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
-ನಂತರ ಮಿಕ್ಸಿ ಜಾರಿಗೆ ಕೊಬ್ಬರಿ ತುರಿ ಹಾಗೂ ಏಲಕ್ಕಿ ಹಾಕಿ ಪುಡಿ ಮಾಡಿಕೊಳ್ಳಿ.
-ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಬೆಲ್ಲ ಮತ್ತು ನೀರನ್ನು ಹಾಕಿ ಬೆಲ್ಲ ಕರಗುವವರೆಗೂ ಕೈಯಾಡಿಸಿ ಬೆಲ್ಲದ ಪಾಕವನ್ನು 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.
-ನಂತರ ನಿಧಾನಗತಿಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿ ಉಂಡೆಗಳಿಲ್ಲದಂತೆ ಕೈಯಾಡಿಸಿಕೊಳ್ಳಿ. ಆ ಬಳಿಕ ಹುರಿದಿಟ್ಟ ಎಳ್ಳು ,ಗಸಗಸೆ ಮತ್ತು ಪುಡಿ ಮಾಡಿಟ್ಟ ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
-ಅಕ್ಕಿ ಹಿಟ್ಟಿನಲ್ಲಿ ತೇವಾಂಶ ಇರುವುದರಿಂದ ಮಿಶ್ರಣ ನೀರಾಗಿರುತ್ತದೆ.ಈ ಮಿಶ್ರಣವು ಒಂದು ರಾತ್ರಿ ಹಾಗೇ ಬಿಡಿ, ನಿಧಾನಗತಿಯಲ್ಲಿ ಮಿಶ್ರಣ ಗಟ್ಟಿಯಾಗುತ್ತದೆ.
– ಮರುದಿನ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದಮೇಲೆ ಒಂದೊಂದೇ ಉಂಡೆಗಳನ್ನಾಗಿ ಮಾಡಿ ಕಜ್ಜಾಯದ ಆಕಾರದಲ್ಲಿ ತಟ್ಟಿ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲೂ ಚಿನ್ನದ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಕಜ್ಜಾಯ ಸವಿಯಲು ಸಿದ್ಧ.

-ಶ್ರೀರಾಮ್ ಜಿ . ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next