ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನೆ ಮನೆಗೂ ಯುಗಾದಿ ಹಬ್ಬದ ಉಡುಗೊರೆ ಹಂಚಲು ಮುಂದಾಗಿದ್ದ ಆಕಾಂಕ್ಷಿಗಳ ಉಡುಗೊರೆ ವಿತರಣೆಗೆ ಬ್ರೇಕ್ ಬಿದ್ದಿದ್ದು, ಬಿಜೆಪಿ ಮುಖಂಡರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ದಿನಸಿ ಕಿಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಪಾತಾಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಮುನಿರಾಜು ಭಾವಚಿತ್ರವುಳ್ಳ ದಿನಸಿ ಕಿಟ್ ಬ್ಯಾಗ್‌ಗಳನ್ನು ತುಂಬಿಸಿಕೊಂಡು ಬಾಗೇಪಲ್ಲಿ ಕಡೆಯಿಂದ ಬಿಳ್ಳೂರು, ತೊಳ್ಳಪಲ್ಲಿ ಗ್ರಾಪಂ ಮಾರ್ಗದ ಕಡೆ ಹೊರಟಿದ್ದ ವಾಹನಗಳನ್ನು ದೇವರಾಜುಪಲ್ಲಿ ಕ್ರಾಸ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮಧುಸೀತಪ್ಪ ಭಾವಚಿತ್ರವುಳ್ಳ ಮೂರು ವಾಹನಗಳಲ್ಲಿ ಪಕ್ಷದ ಚಿಹ್ನೆಯುಳ್ಳ ಪೊರಕೆ ವಿತರಿಸುತ್ತಿದ್ದ ವೇಳೆ ಗೊಂದಿಪಲ್ಲಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದು ವಾಹನ ಚಾಲಕರ ಮತ್ತು ಕಾರ್ಯಕ್ರಮದ ಅಯೋಜಕರ ವಿರುದ್ಧ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದ ಸ್ಥಳೀಯ ಶಾಸಕರ ದ್ವೇಷದ ರಾಜಕಾರಣ ಪ್ರಾರಂಭವಾಗಿದ್ದು, ಶಾಸಕರ ಒತ್ತಡದಿಂದ ಪೊಲೀಸರು ಬಿಜೆಪಿ ಮುಖಂಡರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಆಕಾಂಕ್ಷಿ ಅಭ್ಯರ್ಥಿಗಳಿಗೆ ಚುನಾವಣೆ ನೀತಿ ಸಂಹಿತೆ ಕುರಿತು ಇದುವರೆಗೂ ಯಾವುದೇ ರೀತಿಯ ಮುನ್ನಚ್ಚರಿಕೆ ಸೂಚನೆ ಕೊಟ್ಟಿಲ್ಲ. ಹಬ್ಬಕ್ಕೆಂದು ಬಡವರಿಗೆ ಹಂಚುತ್ತಿದ್ದ ದಿನಸಿ ಕಿಟ್ ಹಂಚದಂತೆ ಅಡ್ಡಿ ಮಾಡಿ ಬಡವರಿಗೆ ಅನ್ಯಾಯ ಮಾಡಿದಂತಾಗಿದೆ. – ಆರ್.ವೆಂಕಟೇಶ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರು, ಬಾಗೇಪಲ್ಲಿ.