ಬೆಂಗಳೂರು : ಬೇವು ಬೆಲ್ಲ ಸುಖ ದುಃಖದ ಸಂಕೇತ. ಕಳೆದ ಬಾಋಇ ಯುಗಾದಿಗೆ ಕೋವಿಡ್ ಮಹಾಮಾರಿಯ ಕರಿ ನೆರಳು ಬಿದ್ದಿತ್ತು. ಈ ಬಾರಿಯೂ ಅದರ ರೂಪಾಂತರಿ ಅಲೆ ಸಡಗರ, ಸಂಭ್ರಮದ ಯುಗಾದಿಗೆ ಸ್ವಲ್ಪ ಮಟ್ಟಿಗೆ ತಡೆಯೊಡ್ಡಿದೆ. ಆದರೂ ಹಬ್ಬದ ವಾತಾವರಣಕ್ಕೇನೂ ಕಡಿಮೆಯಿಲ್ಲ. ದೇಶದಾದ್ಯಂತ ಯುಗಾದಿಯ ಸಂಭ್ರಮ ಮನೆ ಮಾಡಿದೆ.
ಬೇವು ಬೆಲ್ಲವನ್ನು ಕಷ್ಟ ಸುಖಕ್ಕೆ ಹೋಲಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ‘ಯುಗಾದಿ’ ಸಂವತ್ಸರ ಬದಲಾಗುವ ಮುಖ್ಯ ಕಾಲಘಟ್ಟ. ಸಂವತ್ಸರ ಬದಲಾಗುವುದರ ಜೊತೆಗೆ ಸಾಕಷ್ಟು ಪ್ರಾಕೃತಿಕ ಬದಲಾವಣೆಗಳನ್ನೂ ತರುವ ವಿಶೇಷ ಸಂದರ್ಭ ಯುಗಾದಿಯ ಹೊಸ್ತಿಲಲ್ಲಿ ಎಲ್ಲರಲ್ಲೂ ಖುಷಿ ತರಲಿದೆ ಎಂಬ ನಂಬಿಕೆಯೊಂದಿಗೆ ಪ್ಲವ ನಾಮ ಸಂವತ್ಸರ ಆರಂಭವಾಗಿದೆ.
ಓದಿ : ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ
ಈ ಹಬ್ಬಕ್ಕೆ ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ.
ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ನಿಮಗೆಲ್ಲರಿಗೂ ಯುಗಾದಿಯ ಶುಭ ಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಘೂ ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗೂ ಸಂತೋಷ ಪಸರಿಸಲಿ ಎಂದು ಅವರು ಹಾರೈಸಿದ್ದಾರೆ.
ಶುಭಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಯುಗಾದಿ ಹಬ್ಬದ ಈ ಸಮಯದಲ್ಲಿ ಕರ್ನಾಟಕದ ನಮ್ಮ ಸಹೋದರ, ಸಹೋದರಿಯರಿಗೆ ಹಾಗೂ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ ಶುಭಾಶಯಗಳು ಮತ್ತು ಶುಭಹಾರೈಕೆಗಳು. ಈ ಶುಭ ಸಂದರ್ಭವು ಎಲ್ಲರಿಗೂ ಒಳ್ಳೆಯ ಆರೋಗ್ಯ, ನೆಮ್ಮದಿ ಹಾಗು ಸಮೃದ್ಧತೆ ತರಲಿ ಎಂದು ಬರೆದುಕೊಂಡಿದ್ದಾರೆ.
ಇನ್ನು, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ‘ನಾಡಿನ ಸಮಸ್ತ ಜನತೆಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ನೂತನ ಪ್ಲವ ಸಂವತ್ಸರವು ಎಲ್ಲರ ಬಾಳಿನಲ್ಲಿ ಆರೋಗ್ಯ, ಸುಖ, ಸಮೃದ್ಧಿ, ಯಶಸ್ಸನ್ನು ಹೊತ್ತು ತರಲಿ, ಸಾಂಕ್ರಾಮಿಕ ರೋಗದ ಪಿಡುಗು ನಾಡಿನಿಂದ ತೊಲಗಲಿ. ನಾವೂ ಸುರಕ್ಷಿತರಾಗಿದ್ದು, ಇತರರೂ ಸುರಕ್ಷಿತರಾಗಿರುವಂತೆ, ಎಲ್ಲ ಮುನ್ನೆಚ್ಚರಿಕೆ ವಹಿಸಿ ಹಬ್ಬ ಆಚರಿಸೋಣ’ ಎಂದಿದ್ದಾರೆ.
ಓ ಯುಗಾದಿಯೇ, ಹೊಸ ಕಾಲದ ಆದಿಯೇ, ಲೋಕದ ಜನರ ಕಷ್ಟಗಳ ನೀಗುತ್ತಾ ಬಾ… ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ… ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ. ನಾಡಿನ ಎಲ್ಲ ನನ್ನ ಪ್ರೀತಿಯ ಬಂಧುಗಳಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು. ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ನಲ್ಲಿ ಶುಭ ಕೋರಿದ್ದಾರೆ.
ಓದಿ : ಯುಗಾದಿ ಅಂದರೇ, ಆರಂಭ ಅಷ್ಟೇ ಅಲ್ಲ..! ಹೊಸ ಶಕ್ತಿ ತುಂಬಿಸುವ ಸೂಚ್ಯ ದಿನ