Advertisement

ಉದ್ಯಾವರ : ತುಂಡಾದ ಕಾಂಕ್ರೀಟ್‌ ರಸ್ತೆಯ ಪಾರ್ಶ್ವ

09:35 PM Nov 24, 2021 | Team Udayavani |

ಕಟಪಾಡಿ: ಉದ್ಘಾಟನೆ ಆಗುವ ಮುನ್ನವೇ ಉದ್ಯಾವರ ಪೇಟೆಯಿಂದ ಪಿತ್ರೋಡಿ ಸಂಪರ್ಕದ ಮುಖ್ಯ ರಸ್ತೆಯಲ್ಲಿನ ಕಾಂಕ್ರೀಟ್‌ಗೊಂಡ ರಸ್ತೆ ತುಂಡಾಗಿ ಇಲ್ಲಿ ಸಂಚರಿಸುವವರಿಗೆ ಸಂಕಷ್ಟ ತಂದೊಡಿದ್ದು ರಸ್ತೆಯ ಧಾರಣ ಸಾಮರ್ಥ್ಯ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

1.5 ಕೋಟಿ ರೂ. ಅನುದಾನ ಬಳಸಿಕೊಂಡು ಈ ಮೀನುಗಾರಿಕಾ ಇಲಾಖೆಯ ರಸ್ತೆಯು ಒನ್‌ ಟೈಮ್‌ ಟೇಕ್‌ ಒವರ್‌ ಯೋಜನೆಯಡಿ ಲೋಕೋಪ ಯೋಗಿ ಇಲಾಖೆಯು ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದೆ. ಸುಮಾರು 2 ಕಡೆಗಳಲ್ಲಿ ಸೇತುವೆ (ಕಲ್ವರ್ಟ್‌) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ರಿಟೈನಿಂಗ್‌ ವಾಲ್‌ ಕಾಮಗಾರಿ ನಡೆದಿದ್ದು, ಬಣ್ಣ ಬಳಿದು ಕಂಗೊಳಿಸುತ್ತಿದೆ. ಆದರೆ ಇನ್ನುಳಿದಂತೆ 350 ಮೀಟರ್‌ ರಸ್ತೆಯ ಡಾಮರು ಕಾಮಗಾರಿ ಇನ್ನಷ್ಟೇ ನಡೆಯಬೇಕಿದ್ದು, ಸೇತುವೆಯ ಭಾಗದಲ್ಲಿ ಅಪ್ರೋಚಿಂಗ್‌ ರಸ್ತೆಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಈಗಾಗಲೇ ಪೂರ್ಣಗೊಂಡಿರುವ 200 ಮೀ. ಕಾಂಕ್ರೀಟ್‌ ರಸ್ತೆ ಒಂದು ಭಾಗದಲ್ಲಿ ಕಾಂಕ್ರೀಟ್‌ ರಸ್ತೆ ತುಂಡಾಗಿದೆ. ಸದಾ ವಾಹನ ದಟ್ಟಣೆ, ಜನನಿಬಿಡವಾಗಿರುವ ಈ ರಸ್ತೆ ನಿರ್ಮಾಣಗೊಂಡ ಕೆಲವೇ ತಿಂಗಳಲ್ಲಿ ಇಂತಹ ಪರಿಸ್ಥಿತಿ ಕಂಡುಬಂದಿದೆೆ. ಅಧಿಕ ಭಾರದ, ದೊಡ್ಡ ಗಾತ್ರದ ಲಾರಿಗಳು ಸಂಚರಿಸುವ ಈ ರಸ್ತೆಗೆ ಈಗಲೇ ಈ ಗತಿ ಬಂದೊದಗಿದರೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಂಡ ಬಳಿಕ ಇನ್ನೇನು ಸ್ಥಿತಿ ಎಂಬ ಸಂಶಯ ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಕಳೆದ 3-4 ತಿಂಗಳಿನಿಂದ ಕಾಮಗಾರಿ
ಪೂರ್ಣಗೊಳಿಸದೆ‌ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಕಾಂಕ್ರೀಟ್‌ ರಸ್ತೆ ಸಮರ್ಪಕವಾಗಿಲ್ಲದೆ ಇದ್ದಲ್ಲಿ ಗುತ್ತಿಗೆದಾರರಿಗೆ ಸೂಚಿಸಿ ಸರಿಪಡಿಸಲಾಗುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ರಸ್ತೆಯನ್ನು ಸುಸ್ಥಿತಿಗೆ ತರಲಾಗುವುದು.
-ಜಗದೀಶ್‌ ಭಟ್‌,
ಎ.ಇ.ಇ. ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next