ದಾಂಡೇಲಿ : ಪಟೇಲನಗರದಲ್ಲಿ ಯುಜಿಡಿ ಕಾಮಗಾರಿಯಿಂದಾಗಿ ರಸ್ತೆ ತೀರ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗತೊಡಗಿದೆ. ಪಟೇಲನಗರದ ರಸ್ತೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಹೊಂಡ ಗುಂಡಿಗಳಾಗಿ ವಾಹನಗಳು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಸಂಚರಿಸಲಾಗದ ಸ್ಥಿತಿಯಿಂದಾಗಿ ರೋಗಿಯೊಬ್ಬರನ್ನು ಸ್ಟ್ರಕ್ಚರ್ ಮೂಲಕ ಕೊಂಡೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಪೈಪ್ ಜೋಡಿಸಿದ ಬಳಿಕ ಅಗೆದ ರಸ್ತೆಯನ್ನು ಮುಚ್ಚಲಾಗಿದ್ದರೂ ಸಮರ್ಪಕವಾಗಿ ದುರಸ್ತಿ ಮಾಡದಿರುವುದು ಮತ್ತು ಮಳೆಗಾಲದ ಸಮಯದಲ್ಲಿ ರಸ್ತೆಯನ್ನು ಅಗೆದಿರುವುದರಿಂದ ಸಮಸ್ಯೆ ಎದುರಾಗಿದೆ. ಮಳೆಗಾಲ ನಂತರ ಯುಜಿಡಿ ಕಾಮಗಾರಿ ಪ್ರಾರಂಭಿಸುತ್ತಿದ್ದಲ್ಲಿ ಈ ರೀತಿ ಸಮಸ್ಯೆಯಾಗುತ್ತಿರಲಿಲ್ಲ ಎಂಬ ಮಾತು ಸ್ಥಳೀಯರಿಂದ ಕೇಳಿಬರುತ್ತಿದೆ.
ಇದನ್ನೂ ಓದಿ : ಶೀಘ್ರ ಕಾಮಗಾರಿ ಪೂರ್ಣಕ್ಕೆ ತಾಕೀತು: ಅಧಿಕಾರಿಗಳ ಜತೆ ಗೌರವ್ ಗುಪ್ತ ಮಾತುಕತೆ
ಇಂದು (ಶುಕ್ರವಾರ, ಆಗಸ್ಟ್ 13) ಬೆಳ್ಳಂ ಬೆಳಗ್ಗೆ ಪಟೇಲನಗರದ ನಿವಾಸಿ ಲಾಲ್ ಸಾಬ ನದಾಫ್ ಅವರು ರಕ್ತದ ಒತ್ತಡಕ್ಕೊಳಗಾಗಿ ಬಿದ್ದು ತೀವ್ರ ಅನಾರೋಗ್ಯಗೊಂಡಿದ್ದು, ಇಲ್ಲಿ ವಾಹನ ಬರಲು ಸಾಧ್ಯವಾಗದೇ ಇದ್ದಾಗ, ಕೊನೆಗೆ ನಗರದ ಅಂಜುಮನ್ ಅಹಲೆ ಸುನ್ನತ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ನಗರದ ನೂರ್ ಇಸ್ಲಾಂ ಟ್ರಸ್ಟ್ ಅಧ್ಯಕ್ಷ ಇಕ್ಬಾಲ್ ಶೇಖ ಅವರು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ರಾಜೇಶಪ್ರಸಾದ ಅವರ ಜೊತೆ ಮಾತುಕತೆ ನಡೆಸಿ, ಸಾರ್ವಜನಿಕ ಆಸ್ಪತ್ರೆಯಿಂದ ಸ್ಟ್ರಕ್ಚರನ್ನು ಕಳುಹಿಸಿ, ಅದರ ಮೂಲಕ ಮನೆಯಿಂದ ಸ್ವಲ್ಪ ದೂರದ ವರೆಗೆ ಕರೆ ತಂದು ಆನಂತರ ವಾಹನದ ಮೂಲಕ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪಟೇಲನಗರದಲ್ಲಿ ತುರ್ತು ಸಂದರ್ಭದಲ್ಲಿ ಜನರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಸಂಬಂಧಪಟ್ಟ ಯುಜಿಡಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ : ಅಫ್ಘಾನ್ ನಲ್ಲಿ ಭಾರತೀಯರ ಅಪಹರಣ ಸಾಧ್ಯತೆ? ತಾಲಿಬಾನ್ ಉಗ್ರರಿಂದ ಬಲವಂತದ ವಿವಾಹ!