Advertisement

ಗ್ರಾ.ಪಂ. ಹೆಚ್ಚುವರಿ ಕೆಲಸಗಳಿಗೆ ಸಿಬಂದಿ ಕೊರತೆ

04:20 AM Sep 13, 2018 | Team Udayavani |

ಉಡುಪಿ: ಗ್ರಾ.ಪಂ.ಗಳಿಗೆ ನೀಡಿದ ಹೆಚ್ಚುವರಿ ಕೆಲಸಗಳಿಗೆ ಸಿಬಂದಿ ಕೊರತೆ ಇದೆ. ಸಿಬಂದಿ ನೇಮಕಕ್ಕೆ ಆದೇಶವಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಕಾರಣ ತಡೆಯಾಗಿದೆ ಎಂದು ತಾ.ಪಂ. ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ  ಸದಸ್ಯ ದಿನೇಶ್‌ ಕೋಟ್ಯಾನ್‌ ಅವರು ಪಂ.ಗಳಲ್ಲಿ ಆರ್‌ಟಿಸಿ, ಆಧಾರ್‌ ಕಾರ್ಡ್‌ ಮೊದಲಾದ ಸೇವೆಗಳನ್ನು ನೀಡಿ ಹೆಚ್ಚುವರಿ ಹೊರೆಯನ್ನು ನೀಡಲಾಗಿದೆ. ಆದರೆ ಈ ಸೇವೆಗಳ ಅನುಷ್ಠಾನಕ್ಕೆ ಸರಿಯಾದ ಸಿಬಂದಿಯಿಲ್ಲ. ಇದರಿಂದ ಚಿಕ್ಕ ಕೆಲಸಕ್ಕೂ ಒಂದು ವಾರ ಕಾಯಬೇಕಾಗಿದೆ ಎಂದರು. ಇದಕ್ಕೆ ಉತ್ತರಿಸಿದ ತಾ.ಪಂ. ಇಒ ಮೋಹನ್‌ರಾಜ್‌ ಈಗಾಗಲೇ ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಕ್ಕೆ ಸರಕಾರ ಆದೇಶಿಸಿದೆ. ಆದರೆ ಮೆರಿಟ್‌ ಆಧಾರದಲ್ಲಿ ಭರ್ತಿ ಮಾಡುವುದಿತ್ತು. ಈ ಸಂದರ್ಭ ಈ ಹಿಂದೆ ಸೇವೆ ಸಲ್ಲಿಸುತ್ತಿರುವ ಡಿಇಒಗಳ ಉದ್ಯೋಗಕ್ಕೆ ಕುತ್ತು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರಿಂದ ನೇಮಕಾತಿಗೆ ತೊಡಕಾಗಿದೆ ಎಂದರು. ತಾ.ಪಂ ಸದಸ್ಯೆ ಸಂಧ್ಯಾ ಶೆಟ್ಟಿ, ಸಭೆಯ ಕಾರ್ಯಸೂಚಿ ನಿಗದಿತ ಸಮಯದೊಳಗೆ ತಲುಪಿಸದೆ ಇರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮುಂದೆ ರಿಜಿಸ್ಟರ್‌ ಪೋಸ್ಟ್‌ ಮಾಡುವುದಾಗಿ  ಅಧ್ಯಕ್ಷೆ  ತಿಳಿಸಿದರು.

Advertisement

ಮನೆ ಹಾನಿಗೆ ದೊರಕದ ಪರಿಹಾರ 
ಪಾದೂರು ತೈಲ ಸಂಸ್ಕರಣ ಘಟಕದ ಬಂಡೆ ಒಡೆಯುವ ಕಾಮಗಾರಿ ವೇಳೆ ಹಾನಿಯಾಗಿರುವ 150 ಮನೆಗಳಿಗೆ ಇನ್ನೂ ಪರಿಹಾರ ನೀಡದೆ ಇರುವ ಕುರಿತು ಮಜೂರು ಗ್ರಾ.ಪಂ ಅಧ್ಯಕ್ಷ  ಸಭೆಯ ಗಮನಕ್ಕೆ ತಂದರು. ಈ ಕುರಿತು ಪ್ರಧಾನಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ಅವರು ಉತ್ತರ ಕೇಳಿ ಜಿಲ್ಲಾಡಳಿತಕ್ಕೆ ಪತ್ರ ಬರೆಯು ತ್ತಾರೆ, ಆದರೆ ಇಲ್ಲಿ ಮಾತ್ರ ಅದಕ್ಕೆ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಈ ಕುರಿತು ಮಂಗಳವಾರ ನಡೆದ ಜಿ.ಪಂ ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಸಂಬಂಧಪಟ್ಟವರಿಗೆ ಡಿಸಿ ಪುನಃ ಪತ್ರ ಬರೆಯುವಂತೆ ನಿರ್ಧರಿಸಲಾಗಿದೆ ಎಂದರು.

ಪಡಿತರ ಚೀಟಿ ಶುಲ್ಕ ಬಳಸಲು ಸೂಚನೆ
ಪಡಿತರ ಚೀಟಿಗೆ ಫೋಟೊ ತೆಗೆಯುವ ಸಂದರ್ಭ 50 ರೂ.ಗಳನ್ನು ಸಂಗ್ರಹಿಸಲಾಗಿದೆ. ಅದನ್ನು ಪ್ರತ್ಯೇಕವಾಗಿ ಖಾತೆ ತೆರೆದು ಜಮೆ ಮಾಡುವಂತೆ ಸೂಚಿಸಲಾಗಿತ್ತು. ಇತ್ತೀಚಿಗೆ ಒಂದು ಪಂಚಾಯತ್‌ನಲ್ಲಿ ನಾನು ಪರಿಶೀಲಿಸಿದಾಗ 2.5ಲಕ್ಷ ರೂ. ಹಣವಿದೆ. ಅದನ್ನು ಆಹಾರ ಇಲಾಖೆ ತೆಗೆದುಕೊಳ್ಳದೆ ಇರುವುದಾದರೆ ಅದನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಲ್ಲ ಎಂದು ಸದಸ್ಯ ಸುಧೀರ್‌ಕುಮಾರ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌, ಈ ಹಣವನ್ನು ಪಂಚಾಯತ್‌ ಅಭಿವೃದ್ಧಿಗೆ ಬಳಸಿಕೊಳ್ಳಬಹುದೆಂದು ಸರಕಾರ ಈ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ಇದು ಸರಿಯಾಗಿ ಸಂವಹನವಾಗದೇ ಇರುವುದರಿಂದ ಪುನಃ ಸುತ್ತೋಲೆ ಕಳುಹಿಸಲು ತಿಳಿಸಲಾಗುವುದು ಎಂದು ತಿಳಿಸಿದರು.

ವಿದ್ಯಾಸಿರಿ: ಅವಧಿ ವಿಸ್ತರಣೆ
ವಿದ್ಯಾಸಿರಿ ಯೋಜನೆಯಲ್ಲಿ ತಹಶೀಲ್ದಾರ್‌ ಚುನಾವಣೆ ಕರ್ತವ್ಯದಲ್ಲಿದ್ದುದರಿಂದ ಹಲವು ವಿದ್ಯಾರ್ಥಿಗಳಿಗೆ ತೊಡಕಾಗಿದೆ ಇದರ ದಿನಾಂಕವನ್ನು ವಿಸ್ತರಿಸಬೇಕೆಂದು ಸದಸ್ಯರು ಒತ್ತಾಯಿಸಿದರು. ಈ ಕುರಿತು ಜಿ.ಪಂ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಗಿದೆ. ಚುನಾವಣೆ ಹಿನ್ನೆಲೆ ಸೆ.11ರ ತನಕ ದಿನಾಂಕ ವಿಸ್ತರಣೆಯಾಗಿತ್ತು. ಈ ಮಾಹಿತಿ ಜನರಿಗೆ ತಲುಪದ ಕಾರಣ ಪುನಃ ದಿನಾಂಕ ವಿಸ್ತರಿಸಲು ಪತ್ರಬರೆಯುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಬಾರ್ಕೂರು ರಸ್ತೆಯ ಅಪಾಯ
ಬ್ರಹ್ಮಾವರ ಬಾರ್ಕೂರು ರಸ್ತೆಯಲ್ಲಿ ಅಪಾಯಕಾರಿ ತಿರುವುಗಳಿದ್ದು ಈ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಮತ್ತು ಸಾಸ್ತಾನ – ಬಾರ್ಕೂರು ಸಂಪರ್ಕ ರಸ್ತೆಯ ಚರಂಡಿಗಳಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಈ ಕಡೆ ಪಿಡಬ್ಲ್ಯೂಡಿ ಇಲಾಖೆ ಗಮನವನ್ನೇ ಹರಿಸಿಲ್ಲ ಎಂದು ಬಾರ್ಕೂರು ಪಂಚಾಯತ್‌ ಅಧ್ಯಕ್ಷೆ ಸಭೆಗೆ ತಿಳಿಸಿದರು. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಬಾರ್ಕೂರು ಸೇತುವೆ ಬಳಿ ತಡೆಗೋಡೆ ನಿರ್ಮಿಸಲಾಗಿದೆ ಎಂದಾಗ, ಸೇತುವೆ ಬಳಿ ಮಾತ್ರ ಅಳವಡಿಸಲಾಗಿದೆ ಗಣಪತಿ ದೇವಸ್ಥಾನದ ಬಳಿ ಮತ್ತು ಚೌಳಿಕೆರೆ ಬಳಿ ತಡೆಗೋಡೆ ನಿರ್ಮಿಸಬೇಕು ಎಂದರು. ಆಗ ಅಧ್ಯಕ್ಷರು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸ್ಥಳಕ್ಕೆ  ಹೋಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.

Advertisement

ಉಪಾಧ್ಯಕ್ಷ ರಾಜೇಂದ್ರ ಪಿ. ಸ್ಥಾಯಿ ಸಮಿತಿಯ ಭುಜಂಗ ಶೆಟ್ಟಿ, ಬ್ರಹ್ಮಾವರ ವಿಶೇಷ ತಹಶೀಲ್ದಾರ್‌ ಅನೀಲ್‌ ಉಪಸ್ಥಿತರಿದ್ದರು. ನೀತಾ ಗುರುರಾಜ್‌, ಮೈಕೆಲ್‌ ಡಿ’ಸೋಜಾ, ಶಶಿಪ್ರಭಾ ಶೆಟ್ಟಿ, ಸಂಧ್ಯಾ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ಧನಂಜಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next