Advertisement

ಉಡುಪಿ ಶ್ರೀಕೃಷ್ಣನಿಗೆ ಸುವರ್ಣ ಗೋಪುರ ಸಮರ್ಪಣೋತ್ಸವ

03:58 PM May 30, 2019 | sudhir |

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ಮಠದ ಗೋಪುರಕ್ಕೆ ಸ್ವರ್ಣ ಕವಚ ಸಮರ್ಪಣೋತ್ಸವ ಮೇ 31ರಿಂದ ಜೂ.10ರ ವರೆಗೆ ನೆರವೇರಲಿದೆ.

Advertisement

ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಬಳಿಕ ಮಾತನಾಡಿದ ಶ್ರೀಗಳು, ಮೇ 31ರಂದು ಬೆಳಗ್ಗೆ 9ಕ್ಕೆ ಸಮರ್ಪಣೋತ್ಸವದ ಉದ್ಘಾಟನೆ ಸಮಾರಂಭ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ಜರಗಲಿದೆ. ಶ್ರೀ ಉತ್ತರಾಧಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜೂ.1: ಶೋಭಾಯಾತ್ರೆ

ಬ್ರಹ್ಮಕಲಶೋತ್ಸವ ಪ್ರಯುಕ್ತ ಸುವರ್ಣ ಶಿಖರ, ರಜತ ಕಲಶ ಶೋಭಾಯಾತ್ರೆ ಜೂ.1ರಂದು ಸಂಜೆ 5 ಗಂಟೆಗೆ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠದ ವರೆಗೆ ನಡೆಯಲಿದೆ. ಜೂ.2ರಂದು ಬೆಳಗ್ಗೆ 9.30ಕ್ಕೆ ರಥಬೀದಿಯಲ್ಲಿ ಭಾರತೀಯ ಗೋತಳಿಗಳ ಸಮ್ಮಿಲನ ನಡೆಯಲಿದೆ. ಜೂ.3ರಂದು ಶ್ರೀಕೃಷ್ಣ ಚಿಣ್ಣರ ಸಂತರ್ಪಣೆ ಫ‌ಲಾನುಭವಿ ಮಕ್ಕಳ ಕಾರ್ಯಕ್ರಮ ನೆರವೇರಲಿದೆ. ಜೂ.4ರಂದು ಸಾಯಂಕಾಲ ವಿವಿಧ ದೇವಸ್ಥಾನಗಳ ಸಹಕಾರದೊಂದಿಗೆ ಭಕ್ತರಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನೆರವೇರಲಿದೆ.

ಸುವರ್ಣ ಗೋಪುರ ಶಿಖರ ಪ್ರತಿಷ್ಠೆ

Advertisement

ಜೂ.6ರಂದು ಸುವರ್ಣಗೋಪುರ ಶಿಖರ ಪ್ರತಿಷ್ಠೆ, ಅಷ್ಟಮಠಾಧೀಶರಿಂದ ಸಹಸ್ರ ರಜತ ಕಲಶಾಭಿಷೇಕ ನೆರವೇರಲಿದೆ. ಜೂ.9ರಂದು ಶ್ರೀಕೃಷ್ಣದೇವರಿಗೆ ಅಷ್ಟಮಠಾಧೀಶರಿಂದ ಬ್ರಹ್ಮಕಲಶಾಭಿಷೇಕ, ಜೂ.10ರಂದು ಶ್ರೀಕೃಷ್ಣ ದೇವರಿಗೆ ಸುವರ್ಣೋತ್ಸವ-ಅವಭೃಥ ಜರಗಲಿದೆ. ಈ ಭಾಗದಲ್ಲಿ ಗೋಪುರಕ್ಕೆ ಸಾವಿರ ಕಲಶಾಭಿಷೇಕ ನಡೆಯುತ್ತಿರುವುದು, ಅದು ಕೂಡ ಅಷ್ಟಮಠಾಧೀಶರಿಂದಲೇ ನಡೆಯುತ್ತಿರುವುದು ಇದೇ ಮೊದಲು ಎಂದು ಶ್ರೀಗಳು ತಿಳಿಸಿದರು.

ನಿತ್ಯ ಧಾರ್ಮಿಕ, ಸಾಹಿತ್ಯಿಕ ಸಂಭ್ರಮ

ಸಮರ್ಪಣೋತ್ಸವ ಪ್ರಯುಕ್ತ ಮೇ 31ರಿಂದ ಜೂ.10ರ ವರೆಗೆ ಪ್ರತಿದಿನ ವಿವಿಧ ಧಾರ್ಮಿಕ, ಸಾಹಿತ್ಯಿಕ ಗೋಷ್ಠಿ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ಮಂತ್ರ ಗೋಪುರಮ್‌(ಗೋಷ್ಠಿ), ಸಂಸ್ಕೃತ ಗೋಪುರಮ್‌, ಶ್ರೀಕೃಷ್ಣ ಕಾವ್ಯ ಗೋಪುರಮ್‌, ಧರ್ಮ ಗೋಪುರಮ್‌, ಸಸ್ಯ ಗೋಪುರಮ್‌, ದಾಸ ಸಾಹಿತ್ಯ ಗೋಪುರಮ್‌, ರಾಷ್ಟ್ರ ಗೋಪುರಮ್‌, ಮಾಧ್ಯಮ ಗೋಪುರಮ್‌, ಶಾಸ್ತ್ರ ಗೋಪುರಮ್‌,ಜ್ಞಾನ ವಿಜ್ಞಾನ ಗೋಪುರಮ್‌, ಬಾಲಗೋಪುರಮ್‌ ಮಾನವೀಯ ಸಂಪದಭಿವೃದ್ಧಿ ಮತ್ತು ವೇದಾಂತ ಚಿಂತನೆ ನಡೆಯಲಿವೆ.

ಅಷ್ಟಮಠಾಧೀಶರಲ್ಲದೆ ಇತರ ಮಠಾಧೀಶರು, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಮಹಾರಾಜ ಯದುವೀರಕೃಷ್ಣದತ್ತ ಚಾಮರಾಜ ಒಡೆಯರು, ತಿರುವನಂತಪುರಮ್‌ನ ತಿರುವಾಂಕೂರು ಮಹಾರಾಜರ ಸಹಿತ ದೇಶದ ವಿವಿಧ ರಾಜರು, ರಾಜವಂಶಸ್ಥರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಪಾದರು ತಿಳಿಸಿದರು.

ಎನ್‌ಐಟಿಕೆ ಪ್ರಮಾಣಪತ್ರ

ಗೋಪುರಕ್ಕೆ ಚಿನ್ನವನ್ನು ಮಡಾಯಿಸುವ ಮೊದಲು ಅದರಲ್ಲಿರುವ ಚಿನ್ನದ ಪ್ರಮಾಣವನ್ನು ಎನ್‌ಐಟಿಕೆ ತಜ್ಞರು ಪ್ರಮಾಣೀಕರಿಸಿದ್ದಾರೆ. ಭಕ್ತರು ನೀಡಿದ ಚಿನ್ನವನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳಲಾಗಿದೆ. ತಗಡಿನ ಒಳಭಾಗದಲ್ಲಿಯೇ ಮೊಳೆ ಜೋಡಿಸಲಾಗಿದೆ. ಇದರಿಂದಾಗಿ ಸ್ವಲ್ಪವೂ ಮಳೆನೀರು ಒಳಬರುವುದು ಅಸಾಧ್ಯ ಎಂದು ಶ್ರೀಗಳು ಹೇಳಿದರು.

ಭಕ್ತರಿಗೆ ಸಕಲ ವ್ಯವಸ್ಥೆ

ಉಡುಪಿಯಲ್ಲಿ ನೀರಿನ ಕೊರತೆ ಇದ್ದರೂ ಕೂಡ ಭಕ್ತರಿಗೆ ಎಲ್ಲ ಅವಶ್ಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹಾಗಾಗಿ ಶ್ರೀಕೃಷ್ಣ ಮಠಕ್ಕೆ ಬರಲು ಹಿಂಜರಿಕೆ ಬೇಡ. ಅಷ್ಟರೊಳಗೆ ಮಳೆಯೂ ಸುರಿಯಲಿದೆ ಎಂದು ಶ್ರೀಗಳು ಹೇಳಿದರು.

ಡಿಸಿ ಹೆಪ್ಸಿಬಾರಾಣಿ ಕೊರ್ಲಪಾಟಿ ಆಮಂತ್ರಣಪತ್ರಿಕೆ ಅನಾವರಣಗೊಳಿಸಿದರು. ಎಸ್‌ಪಿ ನಿಶಾ ಜೇಮ್ಸ್‌, ಮಠದ ದಿವಾನರಾದ ಶಿಬರೂರುವೇದವ್ಯಾಸ ತಂತ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್ ಕೊಡವೂರು, ವಿದ್ವಾನ್‌ ಕೊರ್ಲಹಳ್ಳಿ ವೆಂಕಟೇಶಾಚಾರ್ಯ, ರಾಮಚಂದ್ರ ಉಪಾಧ್ಯಾಯ, ವಿಷ್ಣುಪ್ರಸಾದ್‌ ಪಾಡಿಗಾರ್‌, ಚಿನ್ನದ ಕೆಲಸದ ನಿರ್ವಾಹಕರಾದ ವೆಂಕಟೇಶ್‌ ಶೇಟ್ ಮತ್ತು ಯಶವಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next