ಉಡುಪಿ: ಶ್ರೀ ಕೃಷ್ಣಮಠದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸುವರ್ಣ ಗೋಪುರ ಸಮರ್ಪಣೆ ಪ್ರಯುಕ್ತ ಶನಿವಾರ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ವಿಷ್ಣುಮೂರ್ತಿ ಮತ್ತು ವನದುರ್ಗಾ ಸೇವಾ ಸಮಿತಿ ನೇತೃತ್ವದಲ್ಲಿ ಸುವರ್ಣ ಶಿಖರ ಮತ್ತು ರಜತ ಕಲಶದ ಅದ್ಧೂರಿ ಐತಿಹಾಸಿಕ ಕ್ಷಣಗಳ ಮೆರವಣಿಗೆಯು ‘ನ ಭೂತೋ’ ಎಂಬಂತೆ ಸಾಗಿ ಬಂದಿದ್ದು, ಶ್ರೀ ಕೃಷ್ಣ ಮುಖ್ಯಪ್ರಾಣ ಭಕ್ತರು ಸಂಭ್ರಮದಲ್ಲಿ ಮೈ ಮರೆತರು.
ಶ್ರೀ ಕೃಷ್ಣಮಠದ ಮೂರು ರಥಗಳ ಪತಾಕೆಯನ್ನು 1008 ಬೆಳ್ಳಿಯ ಕಲಶಗಳನ್ನು ಬಳಸಿ ಮಾಡಲಾದ ಅತ್ಯಾಕರ್ಷಕ ಸ್ತಬ್ಧಚಿತ್ರ, ಶ್ರೀ ಕೃಷ್ಣಮಠದ ಗರ್ಭಗುಡಿಯನ್ನು ಹೋಲುವ ತದ್ರೂಪಿ ಕಲಾಕೃತಿ ಮೆರವಣಿಗೆಗೆ ರಂಗು ತಂದಿತು.
ಮೆರವಣಿಗೆಗೆ ಕಳೆ ತಂದ ಟ್ಯಾಬ್ಲೋಗಳು
ವಾದಿರಾಜ ಸ್ವಾಮೀಜಿಗಳ ನೇತೃತ್ವದಲ್ಲಿ ರಚಿತವಾದ ಸಂಪೂರ್ಣ ಚಿನ್ನದ ಹೊದಿಕೆಯನ್ನು ಮಾಡಲಾದ 6 ಅಡಿಯ ಒಂದು, 4 ಅಡಿಯ 2 ಶಿಖರಗಳಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಸುಭದ್ರೆ, ಸಿಡಿ ಮದ್ದುಗಳ ಸದ್ದು, 20 ಮಂದಿಯ ಡೊಳ್ಳು, ಬಿರುದು ಬಾವಲಿ, ತಟ್ಟಿರಾಯ, ಘಟೋತ್ಕಚ, ಬೆಂಗಳೂರು ಇಸ್ಕಾನ್ ಸಂಸ್ಥೆ ಭಜನ ತಂಡದ ಭಜನೆ, ಗಣಪತಿ ಸ್ತಬ್ಧಚಿತ್ರ, ರಾಧೇಕೃಷ್ಣ ಟ್ಯಾಬ್ಲೋ, ಆಂಜನೇಯ ಟ್ಯಾಬ್ಲೋ, ಬ್ಯಾಂಡ್‌ಸೆಟ್, 30 ಮಂದಿಯ ಕರಂಬಳ್ಳಿ ಚಂಡೆ, 25 ಮಂದಿಯ ಮಾರ್ಪಳ್ಳಿ ಚೆಂಡೆ, 18 ಮಂದಿಯ ಬೆದ್ರ ಚೆಂಡೆ, 65 ಮಂದಿಯ ಕೇರಳ ಚೆಂಡೆ, 12 ಮಂದಿ ಪಂಚವಾದ್ಯ, 20 ಮಂದಿ ನಾಗಸ್ವರ, 20 ಮಂದಿ ಸ್ಯಾಕ್ಸೋಫೋನ್ ವಾದನ, ಕಪ್ಪೆಟ್ಟು ತಂಡದ ವೇಷಧಾರಿಗಳು, ಸಾಯಿ ಚೆಂಡೆ ಕಪ್ಪೆಟ್ಟು, ಕಕ್ಕುಂಜೆ ಬ್ಯಾಂಡ್‌ಸೆಟ್, ಶಿವ ಟ್ಯಾಬ್ಲೋ, ಭೀಮನ ರಥ ಟ್ಯಾಬ್ಲೋ, ಕುಡಿಯುವ ನೀರಿನ ಟೆಂಪೋ, ಕ್ಲೀನಿಂಗ್ ಟೆಂಪೋ, ಜಿಲ್ಲಾ ಭಜನ ಒಕ್ಕೂಟದ ಸುಮಾರು 2,000 ಪುರುಷ-ಮಹಿಳೆಯರ ಭಜನ ತಂಡದಿಂದ ಭಜನೆ, ಕಿದಿಯೂರಿನ 600 ಮಂದಿ ಪೂರ್ಣಕುಂಭ ಹಿಡಿದ ಮಹಿಳೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿಯ 1,500 ಮಹಿಳೆಯರು, ಪುರುಷರು ಪಾಲ್ಗೊಂಡಿದ್ದು, ಸ್ಥಳೀಯ ಸಾಂಸ್ಕೃತಿಕ ತಂಡಗಳಿಂದ ವಿವಿಧ ಕಲಾಪ್ರಕಾರಗಳ ನೃತ್ಯ ಪ್ರಕಾರ ಜರಗಿತು.
Advertisement
ಕಣ್ಮನ ಸೆಳೆದ 1008 ಬೆಳ್ಳಿಯ ಕಲಶಗಳ ಪತಾಕೆಯ 3 ರಥಗಳು
Related Articles
Advertisement
ಜನಸಾಗರದ ನಡುವೆ ಮೆರವಣಿಗೆ
ಯುವಕ, ಯುವತಿಯರು, ಚಿಣ್ಣರು ಆಕರ್ಷಕ ಟ್ಯಾಬ್ಲೋಗಳು ಮತ್ತು ಕೃಷ್ಣಾರ್ಜುನ, ಭೀಮ ಪಾತ್ರಗಳನ್ನು ತಮ್ಮ ಮೊಬೈಲ್ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಜೋಡುಕಟ್ಟೆಯಿಂದ ಕಲ್ಸಂಕದ ವರೆಗಿನ ಮುಖ್ಯ ರಸ್ತೆಯ ಇಕ್ಕೆಡೆಗಳಲ್ಲಿ ಜನರು ನಿಂತು, ಕುಳಿತುಕೊಂಡು ಮೆರವಣಿಗೆ ವೀಕ್ಷಿಸಿ ಸಂಭ್ರಮಿಸಿದರು. ಮೆರವಣಿಗೆ ಸುಗಮವಾಗಿ ಸಾಗಲು ಆರಕ್ಷಕರು ರಸ್ತೆಯ ಉದ್ದಗಲಕ್ಕೂ ಕರ್ತವ್ಯದಲ್ಲಿ ತೊಡಗಿದ್ದರು.