ಉಡುಪಿ: ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಹೂಳೆತ್ತುವಿಕೆ ಮುಕ್ತಾಯಗೊಂಡಿದೆ.
ಬುಧವಾರ ಹೂಳೆತ್ತುವಿಕೆ ಮುಕ್ತಾಯ ಗೊಂಡಿದ್ದು, ಗುರುವಾರ ಹೊಸ ನೀರು ಬಿಟ್ಟು ಅಂತಿಮ ಹಂತದ ಕೊಳೆಯನ್ನೂ ರಾತ್ರಿ ತೆಗೆದು ಸಂಪೂರ್ಣಗೊಳಿಸಲಾಯಿತು.
ಒಂದೂವರೆ ಅಡಿ ಆಳದಷ್ಟು ಹೂಳನ್ನು ಎತ್ತಲಾಗಿದ್ದು, ಸುಮಾರು 80 ಲೋಡ್ ಆಗುವಷ್ಟು ಕೆಸರನ್ನು ಎತ್ತಿ ಸಾಗಿಸಲಾಯಿತು. ಇದನ್ನು ಕಲ್ಸಂಕದ ಬಳಿ ಹೊಂಡ ತೋಡಿ ಅದಕ್ಕೆ ಈ ಹೂಳು ಹಾಕಿ ಮುಚ್ಚಲಾಯಿತು. ಒಟ್ಟು ಮೂರು ದೊಡ್ಡ ಯಂತ್ರ ಮತ್ತು ನೀರು ಹೊರಗೆ ತೆಗೆಯಲು ಎರಡು ಯಂತ್ರಗಳನ್ನು ಹರಿಯಪ್ಪ ಕೋಟ್ಯಾನ್ ಅವರು ತಂದು ಕೆಲಸವನ್ನು ನಿರ್ವಹಿಸಿದರು.
ಕೆಲಸ ಆರಂಭಿಸುವ ಮೊದಲು ನೀರಿನಲ್ಲಿದ್ದ ಮೀನು ಮತ್ತು ಆಮೆಗಳನ್ನು ಪ್ರತ್ಯೇಕ ತೊಟ್ಟಿಯಲ್ಲಿರಿಸಲಾಗಿತ್ತು. ಈಗ ಮತ್ತೆ ನೀರಿಗೆ ಬಿಡಲಾಗಿದೆ. ಸುಮಾರು ಒಂದು ಸಾವಿರ ಮೀನು, ಏಳು ಆಮೆಗಳನ್ನು ನೀರಿಗೆ ಬಿಡಲಾಗಿದೆ.
ಮಧ್ವ ಸರೋವರದಲ್ಲಿ ಪಶ್ಚಿಮ ಮತ್ತು ದಕ್ಷಿಣದಲ್ಲಿ ಎರಡು ಸಣ್ಣ ಕೆರೆಗಳಿದ್ದು ಒಂದರಲ್ಲಿರುವ ನೀರಿನಲ್ಲಿ ಸ್ವಾಮೀಜಿಯವರು ಸ್ನಾನ ಮಾಡುತ್ತಿದ್ದಾರೆ.
16 ವರ್ಷಗಳ ಹಿಂದೆ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಮೊದಲ ಪರ್ಯಾಯದಲ್ಲಿ ಸರೋವರದ ಹೂಳನ್ನು ಎತ್ತಿದ್ದರು. ಬಳಿಕ ಈಗ ಮತ್ತೆ ಹೂಳು ಎತ್ತಲಾಗಿದೆ.