Advertisement

ವ್ಯಾಪಾರಕ್ಕೆ ಸಜ್ಜುಗೊಂಡ ಅಂಗಡಿ ಮುಂಗಟ್ಟುಗಳು

01:15 AM Sep 01, 2018 | Team Udayavani |

ಉಡುಪಿ : ಕೃಷ್ಣನ ನಾಡು ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ. ಕಳೆದ ಒಂದು ವಾರದಿಂದ ಜನ್ಮಾಷ್ಟಮಿಗೆ ವಿವಿಧ ರೀತಿಯಲ್ಲಿ ಕೃಷ್ಣ ಮಠ ಮತ್ತು ಮಠದ ಪರಿಸರ ಸಜ್ಜುಗೊಳ್ಳುತ್ತಾ ಬಂದಿದೆ. ಗುರುವಾರ ಚಕ್ಕುಲಿ ತಯಾರಿಕೆಗೆ ಚಾಲನೆ ಸಿಕ್ಕಿದ್ದರೆ ಇಂದು ವಿವಿಧ ಬಗೆಯ ಲಡ್ಡುಗಳ ತಯಾರಿ ಆರಂಭಗೊಂಡಿದೆ. ಲಡ್ಡು, ಚಕ್ಕುಲಿಗೆ ಬೇಕಾದ ಹಿಟ್ಟುಗಳ ಮಾರಾಟವೂ ಮಾರುಕಟ್ಟೆಯಲ್ಲಿ ಭರದಿಂದ ಸಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯ ಎರಡು ದಿನ ಪೂರ್ವದಲ್ಲೇ ಅಂಗಡಿ ಮುಂಗಟ್ಟುಗಳು ರಥಬೀದಿಗೆ ಲಗ್ಗೆ ಇಟ್ಟಿದ್ದು, ವ್ಯಾಪಾರ ಆರಂಭಗೊಂಡಿದೆ.

Advertisement

ಗೊಂದಲಕ್ಕೊಳಗಾದ ಹೂ ವ್ಯಾಪಾರಿಗಳು


ರಥಬೀದಿಯಲ್ಲಿ ಹೂವಿನ ವ್ಯಾಪಾರಕ್ಕೆಂದು ಹಾಸನ ಮೂಲದ ಹೂವಿನ ವ್ಯಾಪಾರಿಗಳು ಶುಕ್ರವಾರವೇ ಬಂದಿದ್ದಾರೆ. ಜನ್ಮಾಷ್ಟಮಿಯ ಒಂದು ದಿನ ಪೂರ್ವದಲ್ಲಿ ಆಗಮಿಸುವ ಇವರು ಜನ್ಮಾಷ್ಟಮಿಯ ದಿನಾಂಕದಲ್ಲಿ ಗೊಂದಲ ಉಂಟಾದ ಕಾರಣ ಎರಡು ದಿನ ಮೊದಲೇ ಬಂದಿದ್ದಾರೆ. ಹೂವು ಖಾಲಿಯಾಗುವ ತನಕ ವ್ಯಾಪಾರ ನಡೆಸಿ ಹೋಗುತ್ತೇವೆ ಎಂದು ತಿಳಿಸಿದರು.

ಭರದಿಂದ ಸಾಗುತ್ತಿರುವ ಸ್ಪರ್ಧೆಗಳು
ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಮಠದಿಂದ ಆಯೋಜಿಸಲಾಗಿದೆ. ಶುಕ್ರವಾರ ವಿದ್ಯಾರ್ಥಿಗಳಿಗೆ ವೇಷರಹಿತ ಹುಲಿ ಕುಣಿತ ಸ್ಪರ್ಧೆ ನಡೆದಿದ್ದು, ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ಕುಣಿತದಲ್ಲಿ ಭಾಗವಹಿಸಿದ್ದರು. ಶನಿವಾರ ಹೂಕಟ್ಟುವ, ರಂಗೋಲಿ ಸ್ಪರ್ಧೆಗಳು ನಡೆಯಲಿವೆ. ಜನ್ಮಾಷ್ಟಮಿ ದಿನ ಮೊಸರು ಕಡೆಯುವ ಸ್ಪರ್ಧೆ, ಶಂಖ ಊದುವ ಸ್ಪರ್ಧೆ, ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ವಿಟ್ಲಪಿಂಡಿಯಂದು ಹುಲಿವೇಷ ಸ್ಪರ್ಧೆ ನಡೆಯಲಿದೆ. 

ಪರೋಪಕಾರಿ ವೇಷಗಳು
ಈ ಬಾರಿ ಜನ್ಮಾಷ್ಟಮಿಗೆ ಹಲವು ಮಂದಿ ಒಂದು ಉತ್ತಮ ಉದ್ದೇಶಕ್ಕಾಗಿ ವೇಷ ಹಾಕುತ್ತಿದ್ದಾರೆ. ಕಟಪಾಡಿಯ ರವಿ ಈ ಬಾರಿ ಅಮೇಝಿಂಗ್‌ ಮೋನ್‌ಸ್ಟಾರ್‌ ವೇಷ ಧರಿಸುತ್ತಿದ್ದು ನಾಲ್ಕು ಜನ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯ ನೀಡುತ್ತಿದ್ದಾರೆ. ರಾಮಾಂಜಿ ಡ್ರಗ್ಸ್‌ ಜಾಗೃತಿ ಕುರಿತು ಡ್ರಗ್ಸ್‌ ಕಾರ್ಕೋಟಕ ವೇಷ ಧರಿಸಿ ಬಂದ ಹಣವನ್ನು ಸದುದ್ದೇಶಕ್ಕಾಗಿ ಬಳಸುತ್ತಿದ್ದಾರೆ. ಗೋಲ್ಡನ್‌ ಟೈಗರ್ ಹುಲಿವೇಷ ತಂಡವು ಎರಡೂ ದಿನ ಹುಲಿ ಕುಣಿತ ನಡೆಸುತ್ತಿದ್ದು, ಬಂದ ಹಣವನ್ನು ಕ್ಯಾನ್ಸರ್‌ ಪೀಡಿತ ಮಕ್ಕಳ ಸಹಾಯಕ್ಕೆ ಬಳಕೆ ಮಾಡುತ್ತಿದ್ದಾರೆ. ಈ ಬಾರಿಯ ವಿಶೇಷ ಆಕರ್ಷಣೆ ವಿದ್ಯಾರ್ಥಿನಿಯರ ಹುಲಿ ಕುಣಿತ. ಅವಿಘ್ನ ವ್ಯಾಘ್ರಾಸ್‌ ಹುಲಿವೇಷ ತಂಡ ಕಟ್ಟಿಕೊಂಡ ವಿದ್ಯಾರ್ಥಿನಿಯರ ತಂಡವೊಂದು ಸೆ.2ರಂದು ಹುಲಿಕುಣಿತ ನಡೆಸಲಿದ್ದು, ಕುಣಿತದಲ್ಲಿ ಬಂದ ಆದಾಯವನ್ನು ಕಡಿಯಾಳಿ ಗಣೇಶೋತ್ಸವದ ಆಸರೆ ಚಾರಿಟೇಬಲ್‌ ಟ್ರಸ್ಟ್‌ಗೆ ನೀಡಲಿದೆ. 

ಪಿಟ್ಲಿಯ ವ್ಯಾಪಾರ ಜೋರು


ವಿಟ್ಲಪಿಂಡಿ ಉತ್ಸವಕ್ಕೆ ಪಿಟ್ಲಿ (ಪೇಟ್ಲಾ) ಇಲ್ಲದಿದ್ದರೆ ಅದಕ್ಕೆ ಗಮ್ಮತ್ತೇ ಇಲ್ಲ. ಈ ಬಾರಿ ಕೃಷ್ಣಾಷ್ಟಮಿಗೆ ಪಿಟ್ಲಿಯ ವ್ಯಾಪಾರ ಕೂಡ ಜೋರಾಗಿತ್ತು. ಕುಂದಾಪುರ ಮೂಲದ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಪಿಟ್ಲೆ ವ್ಯಾಪಾರ ನಡೆಸುತ್ತಿದ್ದಾರೆ. ಇವರ ಪಿಟ್ಲಿ ಶಬ್ದಕ್ಕೆ ಬಹಳಷ್ಟು ಪ್ರಸಿದ್ಧವಾಗಿದ್ದು ಒಂದು ಪಿಟ್ಲಿಗೆ 120 ರೂ.ಗೆ ಮಾರಾಟ ಮಾಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next