Advertisement

ಅದಮಾರು ಮಠ ಪರ್ಯಾಯದ ಭತ್ತದ ಮುಹೂರ್ತ  

10:07 AM Dec 07, 2019 | Sriram |

ಉಡುಪಿ: ಶ್ರೀಕೃಷ್ಣಮಠದಲ್ಲಿ ಮುಂದಿನ ಜ. 18ರಂದು ನಡೆಯುವ ಅದಮಾರು ಮಠ ಪರ್ಯಾಯ ಉತ್ಸವದ ಪೂರ್ವಭಾವಿಯಾದ ಭತ್ತದ (ಧಾನ್ಯ) ಮುಹೂರ್ತ ಶುಕ್ರವಾರ ಶ್ರೀಕೃಷ್ಣಮಠದ ಬಡಗುಮಾಳಿಗೆಯಲ್ಲಿ ಜರುಗಿತು.

Advertisement

ಶ್ರೀಅದಮಾರು ಮಠದಿಂದ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಭತ್ತದ ಮುಡಿಗಳನ್ನು ಕೊಂಡೊಯ್ದು ಶ್ರೀಚಂದ್ರೇಶ್ವರ, ಶ್ರೀಅನಂತೇಶ್ವರ ಮತ್ತು ಶ್ರೀಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬಡಗುಮಾಳಿಗೆಯಲ್ಲಿ ಮುಹೂರ್ತ ಮಾಡಲಾಯಿತು. ಚಿನ್ನದ ಪಲ್ಲಕ್ಕಿಯಲ್ಲಿ ಅಲಂಕೃತ ಭತ್ತದ ಮುಡಿಯನ್ನು ಸಾಂಕೇತಿಕವಾಗಿರಿಸಿಕೊಂಡು ಸಾಗಿದರೆ, ಉಳಿದವರು ತಲೆ ಮೇಲೆ ಭತ್ತದ ಮುಡಿಗಳನ್ನು ಹೊತ್ತು ಕೊಂಡೊಯ್ದರು. ಬಡಗುಮಾಳಿಗೆಯಲ್ಲಿ ನವಗ್ರಹ ಪೂಜೆ ಸಲ್ಲಿಸಿ ಏಳು ಮಠಗಳು ಮತ್ತು ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನಗಳ ಪ್ರತಿನಿಧಿಗಳಿಗೆ ನವಗ್ರಹ ದಾನವನ್ನು, ಉಳಿದವರಿಗೆ ಫ‌ಲದಾನ ಕೊಡಲಾಯಿತು.

ಇದಾದ ಬಳಿಕ ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ಮಾಡಲಾಯಿತು. ಹಿಂದಿನ ಬಾರಿ ಕಟ್ಟಿಗೆ ರಥಕ್ಕೆ ಕಟ್ಟಿಗೆ ಮುಹೂರ್ತ ಮಾಡಲಾಗಿತ್ತು.

ಬಾಳೆಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತವಾದ ಬಳಿಕ ಇದು ನಾಲ್ಕನೆಯ ಮುಹೂರ್ತವಾಗಿದೆ. ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಸಂಪ್ರದಾಯದಂತೆ ಇದು ನಡೆಯುತ್ತಿದೆ. ಭತ್ತವನ್ನು ದಾಸ್ತಾನು ಮಾಡುವುದಕ್ಕೆ ಇದು ಮುಹೂರ್ತ ಎಂದು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ವಿದ್ವಾಂಸ ಶಿಬರೂರು ವಾಸುದೇವ ಆಚಾರ್ಯರು ತಿಳಿಸಿದರು.

ಸಾಮಾನ್ಯವಾಗಿ ಭತ್ತದ ಮುಹೂರ್ತದಲ್ಲಿ ಸ್ವಾಮೀಜಿಯವರು ಇರುವುದಿಲ್ಲ. ಆದರೆ ಈ ಬಾರಿ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಕಾರ್ಯಕ್ರಮ ನಡೆದಿದೆ. ಪರ್ಯಾಯಕ್ಕೆ ಸನ್ನಿಹಿತವಾದ ಮುಹೂರ್ತ ಭತ್ತದ ಮುಹೂರ್ತವಾಗಿದೆ. ಮೊದಲ ಮೂರು ಮುಹೂರ್ತಗಳು ಪರ್ಯಾಯ ಮಠದಲ್ಲಿ ನಡೆದರೆ ಕೊನೆಯ ಮುಹೂರ್ತ ಶ್ರೀಕೃಷ್ಣಮಠದ ಉಗ್ರಾಣದಲ್ಲಿ ನಡೆಯುವುದು ವಿಶೇಷ. ನಾಲ್ಕೂ ಮುಹೂರ್ತಗಳು ಅನ್ನದಾನಕ್ಕೆ ಸಂಬಂಧಿಸಿ ನಡೆಯುತ್ತಿರುವುದು ಇನ್ನೊಂದು ವೈಶಿಷ್ಟé. ಇನ್ನು ಮುಂದೆ ಪರ್ಯಾಯ ಚಟುವಟಿಕೆಗಳಿಗೆ ವೇಗ ಹೆಚ್ಚುತ್ತದೆ ಮತ್ತು ಇದು ಶ್ರೀಕೃಷ್ಣಮಠವನ್ನು ಕೇಂದ್ರೀಕರಿಸಿಕೊಂಡು ಇರುತ್ತದೆ ಎಂದು ಅದಮಾರು ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಹೇಳಿದರು.

Advertisement

ಪ್ರಶ್ನೆಗೆ ಉತ್ತರಿಸಿದ ಮುಚ್ಚಿಂತಾಯರು “1988ರಲ್ಲಿ ಶ್ರೀವಿಬುಧೇಶತೀರ್ಥರು ಇದ್ದಾಗ ತಾವು ಆಡಳಿತವನ್ನು ನೋಡಿಕೊಂಡು ಶಿಷ್ಯರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಪರ್ಯಾಯ ಪೂಜೆಯನ್ನು ನಡೆಸಿದರು. ಅನಂತರ 2004ರಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಎರಡನ್ನೂ ಶ್ರೀವಿಶ್ವಪ್ರಿಯತೀರ್ಥರು ನಡೆಸಿದರು. ಈ ಬಾರಿ ಕಿರಿಯ ಶ್ರೀಗಳು ಆಡಳಿತ ನೋಡಿಕೊಂಡು ಹಿರಿಯ ಶ್ರೀಗಳು ಪೂಜೆ ನಡೆಸಬೇಕೆಂಬುದು ನಮ್ಮ ಆಶಯ’ ಎಂದು ತಿಳಿಸಿದರು.

ಶಾಸಕ ಕೆ.ರಘುಪತಿ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಯು.ಆರ್‌.ಸಭಾಪತಿ, ಹಿರಿಯರಾದ ಎ.ಜಿ. ಕೊಡ್ಗಿ, ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ|ಎಂ.ಬಿ.ಪುರಾಣಿಕ್‌, ಉದ್ಯಮಿ ಪ್ರಸಾದರಾಜ ಕಾಂಚನ್‌, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಉಳಿಯ ಸೋಮನಾಥ ಕ್ಷೇತ್ರದ ಅಧ್ಯಕ್ಷ ಜಿ. ರವೀಂದ್ರ ನಾಯಕ್‌, ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್‌, ಮಾಜಿ ಅಧ್ಯಕ್ಷ ಉಮಾನಾಥ ನಾಯಕ್‌, ಬಂಟ್ವಾಳ ತಾಲೂಕು ಕಟ್ಟತ್ತಿಲ ಮಠದ ಅಭಿಮಾನಿಗಳು, ವಿದ್ವಾಂಸರು, ನಗರಸಭಾ ಸದಸ್ಯರು, ಜಿ.ಪಂ. ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಚಿತ್ರಗಳು: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next