Advertisement

Udupi: ಕೆರೆಗೆ ಬಿದ್ದು ಸಾವು ಪ್ರಕರಣದ ಹಿಂದೆ ಹಲವಾರು ಅನುಮಾನ

09:34 PM Aug 27, 2024 | Team Udayavani |

ಉಡುಪಿ: ಕರಂಬಳ್ಳಿಯ ಕೆರೆಗೆ ಬಿದ್ದು ವಿದ್ಯಾರ್ಥಿ ಲಕ್ಷ್ಮೀಂದ್ರನಗರದ ನಿವಾಸಿ ಸಿದ್ಧಾರ್ಥ್ ಶೆಟ್ಟಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹಲವಾರು ರೀತಿಯ ಅನುಮಾನಗಳು ಹುಟ್ಟುಕೊಂಡಿದ್ದು, ಆತನೊಂದಿಗಿದ್ದ ಸ್ನೇಹಿತರೇ ಈ ಕೃತ್ಯ ಎಸಗಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟತೊಡಗಿವೆ.

Advertisement

ಮಣಿಪಾಲದ ಆಟೋಮೊಬೈಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿಕೊಂಡಿದ್ದ ಸಿದ್ಧಾರ್ಥ್ ಶೆಟ್ಟಿ. ಇಲ್ಲಿ ವ್ಯಾಸಂಗ ಮುಗಿಸಿ ಜರ್ಮನಿಯಲ್ಲಿ ಆಟೋಮೊಬೈಲ್‌ನಲ್ಲಿ ಸ್ವಾತಕೋತ್ತರ ಮುಂದುವರಿಸಬೇಕೆಂಬ ಕನಸು ಕಂಡಿದ್ದು ಮಾತ್ರವಲ್ಲದೇ ಕಾರುಗಳ ವಿನ್ಯಾಸ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಆಸೆಯನ್ನು ಹೊಂದಿದ್ದ. ಇಲ್ಲಿಗೆ ವ್ಯಾಸಂಗಕ್ಕೆ ಬಂದಿರುವ ಮಹಾರಾಷ್ಟ್ರ ಸಹಿತ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಸಿದ್ಧಾರ್ಥ ಕನ್ನಡಿಗನಾಗಿ ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ಹಲವು ವಿಷಯಗಳಲ್ಲಿ ಸಮನ್ವಯ ಸಾಧಿಸುತ್ತಿದ್ದ. ಹೀಗಾಗಿಯೇ ಕಾಲೇಜಿನಲ್ಲಿ ಸ್ನೇಹ ಜೀವಿಯಾಗಿದ್ದ.

ಸ್ನೇಹಿತರೇ ಮುಳುವಾದರೇ?

ಘಟನೆ ನಡೆದ ದಿನ ಆತನೊಂದಿಗಿದ್ದ ಸ್ನೇಹಿತರಾದ ಶಾಶ್ವತ್‌ ಶೆಟ್ಟಿ (18), ಹಾರ್ದಿಕ್‌ ಶೆಟ್ಟಿ (18), ದರ್ಶನ್‌ ಪೂಜಾರಿ (19) ಅವರ ಮೇಲೆ ಅನುಮಾನ ಮೂಡತೊಡಗಿದೆ. ಈ ಪೈಕಿ ಶಾಶ್ವತ್‌ ಶೆಟ್ಟಿ ಈಗಾಗಲೇ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಶಾಶ್ವತ್‌ ಶೆಟ್ಟಿ ವಿರುದ್ಧ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ವಾಹನ ಚಾಲನೆ ಸಂಬಂಧ ಪ್ರಕರಣ ದಾಖಲಾಗಿದೆ. ಹಾರ್ದಿಕ್‌ ಶೆಟ್ಟಿ ಹಾಗೂ ದರ್ಶನ್‌ ಪೂಜಾರಿ ಕೂಡ ಬೇರೆ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾರೆ. ಈ ಮೂವರು ಸಿದ್ಧಾರ್ಥ್ನ ಆತ್ಮೀಯ ಸ್ನೇಹಿತರಲ್ಲ. ಆದರೂ ಅಂದು ದರ್ಶನ್‌ ಪೂಜಾರಿ ಜತೆ ಸ್ಕೂಟರ್‌ನಲ್ಲಿ ಸಿದ್ಧಾರ್ಥ್ ಹೋಗಿದ್ದರೂ, ಅವನಿಗೆ ಎಲ್ಲಿಗೆ ಹೋಗುತ್ತಿದ್ದಾನೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಅಲ್ಲದೆ, ಸಿದ್ಧಾರ್ಥ್ಗೆ ಈಜು ಬರುವುದಿಲ್ಲ ಎಂಬುದು ಶಾಶ್ವತ್‌ ಶೆಟ್ಟಿಗೆ ಸ್ಪಷ್ಟವಾಗಿ ತಿಳಿದಿದ್ದರೂ, ಈಜಲು ಕರೆದುಕೊಂಡು ಹೋಗಿದ್ದಾರೆ. ಸಂಜೆ 6 ಗಂಟೆಯ ಮೇಲೆ ಈ ಘಟನೆ ನಡೆದಿದೆಯಾದರೂ ಅವರ ಸ್ನೇಹಿತರು ರಕ್ಷಿಸುವ ಕೆಲಸವನ್ನೂ ಮಾಡಿಲ್ಲ. ಹೀಗಾಗಿಯೇ ಈ ಪ್ರಕರಣದಲ್ಲಿ ಶಾಶ್ವತ್‌ ಶೆಟ್ಟಿ ಕೈವಾಡದ ಶಂಕೆಯನ್ನು ಕುಟುಂಬದ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಪೋಷಕರೇ ಎಚ್ಚರಿಕೆ ಅಗತ್ಯ

Advertisement

ಪೋಷಕರು ತಮ್ಮ ಮಕ್ಕಳನ್ನು ಸ್ನೇಹಿತರೊಂದಿಗೆ ಪ್ರವಾಸ, ಸುತ್ತಾಟಕ್ಕೆ ಕಳುಹಿಸುವ ಮುನ್ನ ಅವರ ಪೂರ್ವಾಪರ ತಿಳಿದುಕೊಳ್ಳುವುದು ಉತ್ತಮ. ಸ್ನೇಹಿತರಾಗಿದ್ದರೂ, ಅವರೊಳಗೆ ಸಣ್ಣಪುಟ್ಟ ದ್ವೇಷಗಳು ಇದ್ದರೆ ಅದಕ್ಕೆ ಪ್ರತೀಕಾರ ತೋರಿಸುವ ಸಾಧ್ಯತೆಗಳೂ ಇರುತ್ತವೆ. ಈಗಾಗಲೇ ವಿವಿಧ ಕಡೆಗಳಲ್ಲಿ ಪ್ರವಾಸ ಹೋದ ಹಲವಾರು ಮಂದಿ ಸಾವನ್ನಪ್ಪಿದ್ದು, ಅಸಹಜ ಸಾವು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಅವರೊಂದಿಗೆ ಹೋದವರೇ ಕೃತ್ಯ ಎಸಗಿದ್ದಾರೆಯೇ ಅಥವಾ ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಬೇರೆಯವರಿಂದ ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆಯೇ ಎಂಬ ಬಗ್ಗೆ ಯಾವುದೇ ತನಿಖೆಯೂ ನಡೆಯುತ್ತಿಲ್ಲ. ಪ್ರಸ್ತುತ ಈ ಪ್ರಕರಣದಲ್ಲಿ ಸಿದ್ಧಾರ್ಥ್ ಶೆಟ್ಟಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.