ಉಡುಪಿ: ಆತ್ರಾಡಿ, ಮದಗದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದ ಹೋಂ ನರ್ಸ್‌ಳನ್ನು ಪೊಲೀಸರು ಬಂಧಿಸಿದ್ದಾರೆ.
ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿಯ ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಳ್ಳಿಯನ್ನು ಹೋಂ ನರ್ಸ್ ಆಗಿ ನೇಮಿಸಿದ್ದರು.
ಅ. 20ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡುತ್ತಿದ್ದರು. ನ. 21ರಂದು ಸಂಜೆ ಸರಸ್ವತಿ ಅವರ ಸರವನ್ನು ಕಳವು ಮಾಡಿ ಯಾರಿಗೂ ಹೇಳದೆ ಮನೆಯಿಂದ ಪರಾರಿಯಾಗಿದ್ದಳು. ನ. 24ರಂದು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪುತ್ರ ವಸಂತ ಶೆಟ್ಟಿ ಅವರು ದೂರು ದಾಖಲಿಸಿದ್ದು, ತನಿಖೆ ನಡೆಸಿದ ಪೊಲೀಸರು ಅದೇ ದಿನ ಉಡುಪಿಯಲ್ಲಿ ರೇಖಾ ಹೆಬ್ಬಳ್ಳಿಯನ್ನು ಬಂಧಿಸಿದ್ದು, ಕಳವು ಮಾಡಿದ ಸರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಸ್‌ಪಿ ಅಕ್ಷಯ ಎಂ., ಎಎಸ್‌ಪಿ ಸಿದ್ದಲಿಂಗಪ್ಪ, ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುಧಾಕರ್ ನಾಯ್ಕ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣೆ ಪಿಎಸ್‌ಐ ಅನಿಲ್ ಬಿ.ಎಂ., ಸಿಬಂದಿ ಎಎಸ್‌ಐ ಜಯಂತ, ಸುಂದರ್, ಎಚ್.ಸಿ. ದಯಾನಂದ ಪ್ರಭು, ರಘು, ರಾಘವೇಂದ್ರ, ಕಾಮತ್, ಪಿ.ಸಿ. ಆದರ್ಶ್, ಭೀಮಪ್ಪ, ನಿತಿನ್, ನಬಿ, ಕಾರ್ತಿಕ್, ರಾಜೇಶ್ವರಿ, ಸುರೇಖಾ, ಜ್ಯೋತಿ ನಾಗರತ್ನಾ, ಸುಮಲತಾ, ಜಯಲಕ್ಷ್ಮೀ ಅವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪೂರ್ವಾಪರ ಮಾಹಿತಿ ಪಡೆದುಕೊಳ್ಳಿ
ಹೋಂ ನರ್ಸಿಂಗ್ ಏಜೆನ್ಸಿಗಳು ಕೆಲಸಕ್ಕೆ ನೇಮಿಸುವರ ಬಗ್ಗೆ ಪೂರ್ವಾಪರ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆದರೆ ಏಜೆನ್ಸಿಯವರು ನಿರ್ಲಕ್ಷ್ಯತನದಿಂದ ಸಿಬಂದಿ ನೇಮಿಸಿಕೊಳ್ಳುವುದರಿಂದ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎಂದು ಪೊಲೀಸ್ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಏಜೆನ್ಸಿ ನೇಮಿಸಿದ ಸಿಬಂದಿ ಇಂತಹ ಕೃತ್ಯಗಳನ್ನು ನಡೆಸುವುದರಿಂದ ಏಜೆನ್ಸಿಯವರ ಹೆಸರು ಕೂಡ ಹಾಳಾಗುತ್ತದೆ. ಹೀಗಾಗಿ ಈ ಕುರಿತು ನಿಗಾ ವಹಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.