Advertisement

ರಜತಪೀಠಪುರವಾಸಿಯಾದ ದ್ವಾರಕಾಪುರ ವಾಸಿ

10:34 PM Jan 04, 2020 | Sriram |

ಉಡುಪಿ: ಸುಮಾರು 1240ರ ಆಸುಪಾಸು ಉಡುಪಿ ಕ್ಷೇತ್ರದಲ್ಲಿ ಕಡೆಗೋಲು ಶ್ರೀಕೃಷ್ಣನ ವಿಗ್ರಹವನ್ನು ಆಚಾರ್ಯ ಮಧ್ವರು ಪ್ರತಿಷ್ಠೆ ಮಾಡಿದರು. ಶ್ರೀಕೃಷ್ಣ ಅವತಾ ರವೆತ್ತಿದ್ದು ಪ್ರಸಕ್ತ 28ನೆಯ ಯುಗಚಕ್ರದ ಕಲಿಯುಗ ಆರಂಭಕ್ಕೆ ಸುಮಾರು 70 ವರ್ಷಕ್ಕೆ ಮುನ್ನ. ಇದು ಉತ್ತರದ ಮಥುರಾ ಕ್ಷೇತ್ರದಲ್ಲಿ. ಕೃಷ್ಣ ಅವತಾರ ಸಮಾಪನಗೊಳಿಸಿದ್ದು ಪಶ್ಚಿಮ ತೀರದ ದ್ವಾರಕೆಯಲ್ಲಿ. ಸುಮಾರು 5,000 ವರ್ಷಗಳ ಹಿಂದೆ.

Advertisement

ದ್ವಾರಕೆಯ ಸಮುದ್ರದ ದಂಡೆಯಿಂದ ಕಾಣುವ 560 ಮೀ. ಉದ್ದದ ಗೋಡೆ, ಅಲ್ಲಿ ಸಿಕ್ಕಿದ ಮಡಿಕೆ ಕ್ರಿ.ಪೂ. 1528ರದ್ದು, ಈ ಅವಶೇಷಗಳು ಕೃಷ್ಣನ ನೆಲೆಯಾದ ಐತಿಹಾಸಿಕ ದ್ವಾರಕಾ ನಗರ ಎಂದು ಶ್ರೀಕೃಷ್ಣನ ದ್ವಾರಕಾ ಸಂಶೋಧನೆ ನಡೆಸಿದ ಕರ್ನಾಟಕದವರೇ ಆದ ಸಾಗರ ಪುರಾತಣ್ತೀಜ್ಞ ಡಾ|ಎಸ್‌.ಆರ್‌.ರಾವ್‌ (ಶಿಕಾರಿಪುರ ರಂಗನಾಥ ರಾವ್‌) ಅವರು ಪ್ರತಿಪಾದಿಸಿದ್ದರು.

ಪುರಾಣಗಳಲ್ಲಿಯೂ ಕೃಷ್ಣನ ಕಥೆ ಬರುತ್ತದೆ. ಉಡುಪಿಯಲ್ಲಿ ಪ್ರತಿಷ್ಠಾಪನೆಯಾಗುವ ಕೃಷ್ಣವಿಗ್ರಹ ಕುರಿತು ಸ್ಕಾಂದ ಪುರಾಣ ಹೀಗೆ ಹೇಳುತ್ತದೆ. ದ್ವಾರಕೆಯಲ್ಲಿದ್ದ ಕೃಷ್ಣನ ತಾಯಿ ದೇವಕಿಗೆ ಕೃಷ್ಣನ ಬಾಲಲೀಲೆಗಳನ್ನು ನೋಡಬೇಕೆಂಬ ಇಚ್ಛೆಯಾಯಿತು.

“ಯಶೋದೆಯು ನಿನ್ನ ಬಾಲಲೀಲೆಗಳನ್ನು ನೋಡಿದ್ದಾಳೆ. ಆದರೆ ನನಗೆ ನಿನ್ನ ಒಂದು ಲೀಲೆಯನ್ನಾದರೂ ತೋರು’ ಎಂದು ಅವಳು ಕೃಷ್ಣನಲ್ಲಿ ಹೇಳುತ್ತಾಳೆ.

ಕೃಷ್ಣ ಚಿಕ್ಕಮಗುವಾಗಿ ದೇವಕಿ ಬಳಿ ಬಂದನು. ಆಗ ಅವಳು ಮೊಸರು ಕಡೆಯುತ್ತಿದ್ದಳು. ಬಾಲಕೃಷ್ಣ ತೊಡೆಯನ್ನೇರಿ ಬಾಲಲೀಲೆಗಳನ್ನು ತೋರಿಸಿದ. ಮೊಸರು ತುಂಬಿದ ಗಡಿಗೆಯನ್ನು ಒಡೆದು ಬೆಣ್ಣೆ ಮೆದ್ದ, ಮೈತುಂಬಾ ಬೆಣ್ಣೆ ಸವರಿಕೊಂಡ. ಆನಂದದಿಂದ ಕುಣಿದು ಕುಪ್ಪಳಿಸಿ ತಾಯಿ ಕೈಯಲ್ಲಿದ್ದ ಕಡೆಗೋಲು, ಹಗ್ಗ ಕಸಿದುಕೊಂಡ. ರುಕ್ಮಿಣಿ ಅಲ್ಲಿಗೆ ಬಂದು ಬಾಲಲೀಲೆಯನ್ನು ಕಂಡಳು. ರುಕ್ಮಿಣಿಗೆ ಆ ದೃಶ್ಯ ಬಹಳ ಇಷ್ಟವಾಯಿತು. ಆ ಬಾಲರೂಪವನ್ನು ನಿರಂತರ ಪೂಜಿಸುವಂತೆ ಅಂತಹ ಸುಂದರ ರೂಪವನ್ನು ನಿರ್ಮಿಸಿಕೊಡಬೇಕೆಂದಳು. ಹಿಂದೊಮ್ಮೆ ತುಳಸಿಯ ಆಶಯದಂತೆ ಗಂಡಕೀನದಿಯಲ್ಲಿ ಶಾಲಿಗ್ರಾಮ ಕಲ್ಲಿನಲ್ಲಿ ಸನ್ನಿಹಿತನಾದೆ. ಆ ಕಲ್ಲಿನಿಂದ ದೇವಶಿಲ್ಪಿ ವಿಶ್ವಕರ್ಮನಿಂದ ವಿಗ್ರಹ ತಯಾರಿಸುತ್ತೇನೆ ಎಂದ ಕೃಷ್ಣ. ವಿಶ್ವಕರ್ಮ ಸುಂದರವಾದ ಪ್ರತಿಮೆ ನಿರ್ಮಿಸಿದ. ರುಕ್ಮಿಣಿದೇವಿ ಸಾûಾತ್‌ ಆಗಿ ಕೃಷ್ಣನನ್ನು ಪೂಜಿಸುತ್ತಿದ್ದರೂ ಲೋಕವಿಡಂಬನಾರ್ಥ ಪ್ರತಿಮಾಪೂಜೆಯನ್ನೂ ನಡೆಸುತ್ತಿದ್ದಳು. ಕೃಷ್ಣಾವತಾರ ಸಮಾಪ್ತಿಯಾದ ಬಳಿಕ ಅರ್ಜುನ ದ್ವಾರಕಾಪಟ್ಟಣದ ಈ ಪ್ರತಿಮೆಯನ್ನು ರುಕ್ಮಿಣಿವನದಲ್ಲಿ ಸ್ಥಾಪಿಸಿದ. ಕಾಲಾನುಕ್ರಮೇಣ ಅದು ಭೂಗತವಾಯಿತು.

Advertisement

ಆ ವಿಗ್ರಹ 28ನೆಯ ಕಲಿಯುಗದಲ್ಲಿ ದ್ವಾರಕಾ ಮಾರ್ಗವಾಗಿ ಹೋಗುತ್ತಿರುವ ನೌಕಾಯಾತ್ರಿಕರು ಭಾರದ ಸಮತೋಲನಕ್ಕಾಗಿ ಗೋಪಿಚಂದನ ಮೆತ್ತಿದ ಪ್ರತಿಮೆಯನ್ನು ತಂದು ನೌಕೆಯಲ್ಲಿರಿಸಿಕೊಂಡು ಮುನ್ನಡೆಯುವರು. ಹೀಗೆ ದ್ವಾರಕೆಯಿಂದ ಹೊರಟ ಪ್ರತಿಮೆ ಉಡುಪಿ ಹೊರವಲಯದ ಮಲ್ಪೆಯ ಕಡಲತೀರಕ್ಕೆ ಬರುತ್ತದೆ. ತೆರೆಗಳ ಹೊಯ್ದಾಟದಲ್ಲಿ ನೌಕೆ ಮುಳುಗುವಾಗ ಕಡಲತೀರದಲ್ಲಿ ಮಧ್ವಾಚಾರ್ಯರು ಕುಳಿತಿದ್ದರು. ಅವರು ನೌಕೆಯನ್ನು ರಕ್ಷಿಸಿ ಗೋಪಿಚಂದನದ ಹೆಂಟೆಯನ್ನು ಪಡೆಯುತ್ತಾರೆ. ಹೆಂಟೆಯೊಳಗಿದ್ದ ಪ್ರತಿಮೆಯನ್ನು ಮಧ್ವರು ಅನಂತೇಶ್ವರನ ಸಮೀಪ ಸ್ಥಾಪನೆ ಮಾಡುತ್ತಾರೆ.

ಕಲಿ ದೋಷ ನಿವಾರಣೆಗೆ ಕೃಷ್ಣನನ್ನು ಬಹುಕಾಲ ಸ್ವಯಂ ಪೂಜಿಸಿ ಮುಂದಿನ ವ್ಯವಸ್ಥೆಗಾಗಿ ಬಾಲಬ್ರಹ್ಮಚಾರಿಗಳನ್ನು ಸನ್ಯಾಸಿ ಶಿಷ್ಯರಾಗಿ ನೇಮಿಸುವರು. ಕೃಷ್ಣನ ದರ್ಶನ, ಮಾಡುವ ಸೇವೆ, ಮಧ್ವರು ಪ್ರತಿಪಾದಿಸಿದ ವೇದಾಂತ ಚಿಂತನೆಯಿಂದ ಆಗುವ ಲಾಭ ಇತ್ಯಾದಿ ವಿಷಯಗಳನ್ನು ಸ್ಕಾಂದ ಪುರಾಣದಲ್ಲಿ ವಿವರಿಸಲಾಗಿದೆ. ಸ್ಕಾಂದ ಪುರಾಣದ ಪ್ರಾಚೀನ ಪಾಠಗಳಲ್ಲಿ ದೊರಕುವ ಈ ಕಥೆಯ ಉಲ್ಲೇಖವನ್ನು ವಿಜಯದಾಸರು (1682-1755) ಮೂರು ಶತಮಾನಗಳ ಹಿಂದೆ ಹಾಡುಗಳಲ್ಲಿ ದಾಖಲಿಸಿದ್ದಾರೆ. ಶ್ರೀಪಲಿಮಾರು ಮಠದ ಶ್ರೀರಘುವರ್ಯತೀರ್ಥರು (17-18ನೆಯ ಶತಮಾನ) “ದ್ವಾರಕಾಯಾಂ ರುಗ್ಮಿಣೀವನಾಖ್ಯ ಪ್ರದೇಶೆ ಗೋಪೀಚಂದನ ಮಧ್ಯೆ…’ ಎಂಬ ಮೂಲಕ ಸ್ಕಾಂದ ಪುರಾಣದ ಪಾಠವನ್ನು “ಅಣುಮಧ್ವವಿಜಯದ’ ಟೀಕಾಕೃತಿಯಲ್ಲಿ ಬರೆದಿದ್ದಾರೆ.

ವಿಜಯದಾಸರ ಹಾಡುಗಳಲ್ಲಿ ಮುದ್ದುಮುಖದ ಕೃಷ್ಣ ದೇವಕಿಗೆ ಕೃಷ್ಣನ ಬಾಲಲೀಲೆಗಳನ್ನು ನೋಡಲು ಇಚ್ಛೆಯಾಯಿತು ಎಂಬ ಮಾತು ಸ್ಕಾಂದ ಪುರಾಣದಲ್ಲಿ “ಕದಾಚಿದ್‌ ದೇವಕೀದೇವೀ ದ್ವಾರಕಾಯಾಂ ಸುತಂ ಹರಿಮ್‌| ಉವಾಚ ಬಾಲಲೀಲಾನಾಂ ದರ್ಶನೋತ್ಸುಕ ಮಾನಸಾ|| ಎಂದಿದ್ದರೆ. ವಿಜಯದಾಸರು ತ್ರಿವಿಡಿತಾಳದ ಸುಳಾದಿಯಲ್ಲಿ “ಅಂದು ದೇವಕೀದೇವಿ ದ್ವಾರಕಾಪುರದಲ್ಲಿ| ಒಂದು ದಿವಸ ನಿನ್ನ ಮಾಯಾ ಮುಸುಗೇ| ಕಂದ ನೀನಾಗಿ ಗೋಕುಲದಲ್ಲಿ ಗೋಪಿಯಾ| ಮುಂದೆ ಬಾಲಕನಾಗಿ ತೋರಿದಾಟಾ| ಒಂದಾದರು ನೋಡಿ ದಣಿಯಲಿಲ್ಲವು ಮನಸು| ಎಂದು ಬಣ್ಣಿಸಿದ್ದಾರೆ.

ಕೃಷ್ಣನ ವಿಗ್ರಹ ಲಕ್ಷಣವನ್ನು ಪುರಾಣದಲ್ಲಿ “ವಾಮಹಸ್ತೆ ದಾಮಧರಂ ದಕ್ಷೇ ಮಂಥಾನ ಮಂಡಿತಂ| ಶಿಖಾಬಂಧತ್ರಯೋ ಪೇತಂ ಲಂಬಾಲಕ ವಿಭೂಷಿತಂ….’ ಎಂದು ಕೃಷ್ಣಪ್ರತಿಮೆ ಸ್ವೀಕೃತಿಯ ಘಟನೆಯನ್ನು “ಶ್ರೀಕೃಷ್ಣ ಪ್ರತಿಮಾಂ ಶ್ರೇಷ್ಠಾಂ ಗೋಪೀಚಂದನ ರೂಷಿತಾಂ| ಮಹಾನುಭಾವೊ ಲಬಾœ$Ìತಾಮಾನೀಯ ಹಲಿನಾಸಹ|| ನಾಗಾಸನಸ್ಯ ನಿಕಟೇ ವಿಧಿನಾ ಸ್ಥಾಪಯಿಷ್ಯತಿ| ಸಯೋಗೀರಿಶ್ವಾಂಶೊ ಮಧೊÌà ಧ್ವಸ್ತದುರಾಗಮಃ|| ಎಂದು ವಿವರಿಸಲಾಗಿದೆ.

ವಿಜಯದಾಸರು ಇದನ್ನೇ ಹಾಡಿನಲ್ಲಿ “ಒಂದು ಕೈಯಲಿ ಕಡೆಗೋಲು ಪಿಡಿದು ಮ| ತ್ತೂಂದು ಕೈಲಿ ನೇಣು ಧರಿಸಿ ಬಾಲಾ| ನಂದಾದಿ ಇರಲಿತ್ತ ಭೈಷ್ಮಿ ವಿಶ್ವಕರ್ಮಾ|ನಿಂದ ಅದರಂತೆ ರಚಿಸಾ ಪೇಳಿ|…. ಸಿಂಧುವಿನೊಳಗೊಬ್ಬ ಹಡಗದ ವಶಕೆ| ತಂದಿರೆ ತವಕದಿಂದಲಿ ಅಲ್ಲಿಂದ| ನಂದಾತೀರ್ಥರಿಗೊಲಿದ ಉಡುಪಿನ ಶಿರಿಕೃಷ್ಣ| ಕಂದರ್ಪಪಿತ ನಮ್ಮ ವಿಜಯವಿಠಲರೇಯಾ|| ಎಂದು ಬಣ್ಣಿಸಿದ್ದಾರೆ.

ದ್ವಾರಕೆಯ ವಿಗ್ರಹ
ಉಡುಪಿಯಲ್ಲೀಗ ಪರ್ಯಾಯೋತ್ಸವದ ಸಡಗರ ಸಮೀಪಿ ಸುತ್ತಿದೆ. 250ನೆಯ ಪರ್ಯಾಯ ಉತ್ಸವ ಜ. 18ರ ಮುಂಜಾವ ಸಂಪನ್ನಗೊಳ್ಳುತ್ತದೆ. ಇಲ್ಲಿನ ಶ್ರೀಕೃಷ್ಣನ ವಿಗ್ರಹ ದ್ವಾರಕೆಯಿಂದ ಬಂದದ್ದು, ರುಕ್ಮಿàಣಿದೇವಿ ಪೂಜಿಸಿದ್ದು, ವಿಶ್ವಕರ್ಮನಿಂದ ರಚಿತ ವಾದದ್ದು ಎಂದು ಅದರ ಮಹತ್ವವನ್ನು ಪ್ರಾಚೀನ ಗ್ರಂಥಗಳು ಸಾರುತ್ತಿವೆ. 1980ರ ದಶಕದಲ್ಲಿ ಈಗಿನ ದ್ವಾರಕೆಯ ಅಸ್ತಿತ್ವವನ್ನು ಡಾ|ಎಸ್‌.ಆರ್‌.ರಾವ್‌ ಐತಿಹಾಸಿಕ ಸಂಶೋಧನೆಗೆ ಒಳಪಡಿಸಿದ ಕಾರಣ ಪೌರಾಣಿಕ ದ್ವಾರಕೆಯ ಸಂಬಂಧವನ್ನು ತಾಳೆಹಾಕಲು ಸಾಧ್ಯವಾಯಿತು.

ಬಂಧನಗಳನ್ನು ಕಳಚುವವ
ಶ್ರೀಕೃಷ್ಣನ ವಿಗ್ರಹವನ್ನು ಶಿಖಾಬಂಧತ್ರಯೋಪೇತಮ್‌ ಎಂದು ಬಣ್ಣಿಸಲಾಗಿದೆ. ವಾದಿರಾಜರ ಪ್ರಸಿದ್ಧ ಹಾಡು “ನೀರೆ ತೋರಲೆ ನೀರೆ ತೋರಲೆ ನೀಲವರ್ಣನ ಕೃಷ್ಣನಾ ಹಡಗಿನೊಳಗಿಂದ ಬಂದನಾ|’ ಎಂದು ವರ್ಣಿಸಿದ್ದಾರೆ. ಮೂರು ಜಡೆ ವಿಶಿಷ್ಟ ಪ್ರತಿಮಾ ಲಕ್ಷಣವಾಗಿದೆ. ಇಲ್ಲಿ ಮಾತ್ರ ಇಂತಹ ವಿಗ್ರಹ ಸಿಗುವುದು. ಇಲ್ಲಿ ಮೂರು ಜಡೆಯವ ಎನ್ನುವುದು ಮೂರು ವೇದ, ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣ, ಕನಸು, ಎಚ್ಚರ, ನಿದ್ರೆ ಎಂಬ ಮೂರು ಅವಸ್ಥೆ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಂಬ ಮೂರು ಕಾಲಗಳಿಗೆ ಹೋಲಿಸಲಾಗುತ್ತದೆ. ಇವೆಲ್ಲಕ್ಕೂ ಮೀರಿ ಅದನ್ನು ನಿಯಂತ್ರಿಸುವವ ಎಂದರ್ಥ. ಮಧ್ವವಿಜಯದ 9ನೆಯ ಶ್ಲೋಕದಲ್ಲಿ “ಸುಂದರಂ ಸುಂದರಾನನ’ ಎಂದು ಹೇಳಿದ್ದಾರೆ. ಸುಂದರ ಮುಖದವ, ಎಲ್ಲ ಸಂಸಾರಿಗಳ ದೋಷಗಳನ್ನು, ಬಂಧನಗಳನ್ನು ಕಳಚುವವ ಎಂದು ಬಣ್ಣಿತವಾಗಿದೆ.
-ವಿ| ನಾಗೇಂದ್ರಾಚಾರ್ಯ,
ವಿದ್ವಾಂಸರು.

Advertisement

Udayavani is now on Telegram. Click here to join our channel and stay updated with the latest news.

Next