Advertisement
ಮಾಜಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರು 2008ರ ಜೂ. 10ರಂದು ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ಭಟ್ ಮನೆಯಿಂದ ಪದ್ಮಪ್ರಿಯಾ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕುಂಜಾರುಗಿರಿ ದಾರಿ ಮಧ್ಯೆ ಕಾರು ನಿಲ್ಲಿಸಿ ಮತ್ತು ಅದರ ಒಳಗೆ ಬಳೆ ಚೂರು, ರಕ್ತದ ಕಲೆ ಮಾಡಿ ಅಪಹರಣದ ನಾಟಕ ಮಾಡಲಾಗಿತ್ತು ಎಂದು ದೂರಲಾಗಿದೆ. ಕಾರನ್ನು ಅಲ್ಲೇ ಬಿಟ್ಟ ಅತುಲ್ ತನ್ನ ಕಾರಿನಲ್ಲಿ ಪದ್ಮಪ್ರಿಯಾ ಅವರನ್ನು ಕುಮಟಾದವರೆಗೆ ಕರೆದೊಯ್ದಿದ್ದ.
ಜೂ. 10ರಂದು ದಿಲ್ಲಿಗೆ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದು, ಅಲ್ಲಿಂದ ಜೂ. 12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜತೆ ಪದ್ಮಪ್ರಿಯಾ ಅವರನ್ನು ಹುಡುಕುವ ನಾಟಕ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ರಘುಪತಿ ಭಟ್ ಅವರು 2008ರ ಜೂ. 19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಒಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಒಡಿ ಪೊಲೀಸರು 2008ರ ಆ. 22ರಂದು ಪ್ರಾರಂಭಿಕ ಮತ್ತು 2009ರ ಜು. 29ರಂದು ಅಂತಿಮ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರುಪಡಿಸಿ ದುರುಪಯೋಗಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು. ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಒಡಿ ಅಧಿಕಾರಿಗಳು ಕೈಬಿಟ್ಟಿದ್ದರು.
Related Articles
Advertisement