Advertisement

ಉಡುಪಿಗೆ ಒಳಚರಂಡಿ ವ್ಯವಸ್ಥೆ ಬೇಕೇಬೇಕು; ಇಂದ್ರಾಣಿ ಶುದ್ಧವಾಗಲೇಬೇಕು!

05:52 PM Mar 20, 2023 | Team Udayavani |

ಉಡುಪಿ: ಸ್ವಚ್ಛತೆ, ಆರೋಗ್ಯ, ಶಿಕ್ಷಣದಲ್ಲಿ ಉಡುಪಿ ನಗರವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾದರಿ. ಮಲ ಹೊರುವ ಪದ್ಧತಿ ನಿಷೇಧಿಸುವ ಮೂಲಕ ದೇಶದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದೂ ಇದೇ ನಗರ. ಹಾಗೇ ಇಲ್ಲಿನ ಒಳ ಚರಂಡಿ ವ್ಯವಸ್ಥೆಗೆ ಆದ್ಯತೆ ಕೊಡದೇ ನಿರ್ಲಕ್ಷಿಸಿದ ಪರಿಣಾಮ ಜೀವನದಿಯೊಂದು ಸಂಪೂರ್ಣ ಕಲಷಿತವಾಗಿದೆ.

Advertisement

ನದಿಗೆ ಪುನರ್‌ ಜೀವನ ನೀಡುವ ಒತ್ತಾಯ ದಿನೇ ದಿನೆ ಹೆಚ್ಚಿದೆ. ದಶಕಗಳಿಂದ ಕಾಯಕಲ್ಪದ ಮಾತು ಕಡತದಲ್ಲೇ ಕಾಣಲಾಗುತ್ತಿದೆ. ನಗರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದಂತೆ ಅದಕ್ಕೆ ತಕ್ಕಂತೆ ಒಳಚರಂಡಿ ವ್ಯವಸ್ಥೆ ನಿಗದಿತ ಕಾಲಾವಧಿಯಲ್ಲಿ ಜಾರಿಯಾಗದ ಪರಿಣಾಮ ಉಡುಪಿಯಂಥ ಪುಟ್ಟ ಊರಿನಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ಇಂದ್ರಾಣಿ ನದಿ ಪ್ರಸ್ತುತ ತನ್ನ ಅಸ್ತಿತ್ವವನ್ನೆ ಕಳೆದುಕೊಂಡು ತ್ಯಾಜ್ಯ ಹರಿಯುವ ತೋಡು ಆಗಿ ಮಾರ್ಪಟ್ಟಿದೆ.

ಯುಜಿಡಿ ಅಭಿವೃದ್ಧಿ ದೂರ ದೃಷ್ಟಿ ಕೊರತೆಯಿಂದ ಅಮೂಲ್ಯ ನೈಸರ್ಗಿಕ ಸಂಪತ್ತನ್ನು ಕಳೆದು ಕೊಂಡಂತಾಗಿದೆ. ಸಮರ್ಪಕವಾದ ಒಳ ಚರಂಡಿ (ಯುಜಿಡಿ) ವ್ಯವಸ್ಥೆಗೆ ಇನ್ನೂ ಆದ್ಯತೆ ನೀಡದ ಕಾರಣ ಸುತ್ತಲಿನ ಪ್ರದೇಶ ಹಾಗೂ ಜಲಮೂಲಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ನಗರಸಭೆ ಅನುದಾನ ದಿಂದ ಹಲವೆಡೆ ಯುಜಿಡಿ ಯನ್ನು ಮೇಲ್ದಜೇìಗೇರಿಸುವ ಕಾಮಗಾರಿ ನಡೆಯುತ್ತಿದ್ದರೂ ಇಂದ್ರಾಣಿ ನದಿಗೆ ಕಲುಷಿತ ಸೇರು ವುದು ತಡೆಯಲಾಗಿಲ್ಲ. ಒಳಚರಂಡಿ ವ್ಯವಸ್ಥೆ ಕಲ್ಪಿ
ಸಲು 330 ಕೋಟಿ ರೂ. ವೆಚ್ಚದ ಹೊಸ ಪ್ರಸ್ತಾವನೆ ಯನ್ನು ಸರಕಾರಕ್ಕೆ ಸಲ್ಲಿಸಿದೆ. ಸರಕಾರದಿಂದ ಪೂರ್ಣ ಪ್ರಮಾಣದಲ್ಲಿ ಹಸುರು ನಿಶಾನೆ ಸಿಕ್ಕಿಲ್ಲ.

ಈ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸುವುದು. ಪ್ರತೀ 30 ಮೀ. ಗೆ ಒಂದರಂತೆ 5,600 ಮ್ಯಾನ್‌ ಹೋಲ್‌, 5 ವೆಟ್‌ ವೆಲ್‌ಗ‌ಳನ್ನು ನಿರ್ಮಿಸುವ ಉದ್ದೇಶವಿದೆ. ಆದರೆ ಪ್ರತೀ ವರ್ಷ ಆಯವ್ಯಯದಲ್ಲಿ ಯೋಜನೆಗೆ ಅನುದಾನ ಸಿಗಬಹುದು ಎಂಬುದನ್ನು ಕಾದು ನೋಡಿದ್ದೆ ಬಂತು. ಸರಕಾರಕ್ಕೆ ನಮ್ಮ ಅಗತ್ಯವನ್ನು ಮನವರಿಕೆ ಮಾಡಿ ಯೋಜನೆಗೆ ಒಪ್ಪಿಗೆ ಪಡೆದು ಜಾರಿಗೊಳಿಸುವಲ್ಲಿ ಈ ಬಾರಿಯೂ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಯಶಸ್ವಿಯಾ ಗಿಲ್ಲ. ಹಾಗಾಗಿ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿಲ್ಲ, ಇಂದ್ರಾಣಿಗೆ ಕೊಳಚೆ ಹರಿಯುವುದು ನಿಂತಿಲ್ಲ.

ನಗರಸಭೆ ವ್ಯಾಪ್ತಿಯ ಶೇ. 17ರಷ್ಟು ಪ್ರದೇಶದಲ್ಲಿ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಒಳ ಚರಂಡಿ ವ್ಯವಸ್ಥೆ ಇದ್ದರೂ, ಅದರ ಆರೋಗ್ಯ ಕೆಟ್ಟಿದೆ. ಆಗಿನ ಜನಸಂಖ್ಯೆಯನುಸಾರ ನಿರ್ಮಿಸಲಾಗಿದ್ದ ಒಳ ಚರಂಡಿಗಳು, ನಗರ ಬೆಳೆದಂತೆ ಒತ್ತಡ ಹೆಚ್ಚಾಗಿ ಪ್ರಯೋಜನಕ್ಕೆ ಬಾರದಂತಾಗಿವೆ. ಮೂರ್ನಾಲ್ಕು ಹಂತಗಳಲ್ಲಿ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೇರಿದರೂ ದೊಡ್ಡ ಪ್ರಯೋಜನವಾಗಿಲ್ಲ. ಅಲ್ಲಲ್ಲಿ ಪೈಪುಗಳು ಒಡೆಯುವುದು, ತ್ಯಾಜ್ಯದ ಹೆಚ್ಚಿನ ಒತ್ತಡ ಸಹಿಸಲಾಗದೆ ನೇರವಾಗಿ ಇಂದ್ರಾಣಿಗೆ ಬಿಡುವ ಇತ್ಯಾದಿ ಸಮಸ್ಯೆಗಳು ಪುನರಾವರ್ತನೆಯಾಗುತ್ತಲೇ ಇವೆ.

Advertisement

ಮಣಿಪಾಲದಲ್ಲಿ ಬಹುತೇಕ ಕಡೆಗಳಿಂದ ಯುಜಿಡಿ ವ್ಯವಸ್ಥೆ ಇಲ್ಲದೆ ಎಲ್ಲವೂ ಮಳೆ ನೀರು ಹರಿಯುವ ಚರಂಡಿಗೆ ಪೈಪ್‌ ಮೂಲಕ ಬಿಡಲಾಗುತ್ತದೆ. ಇದು ಸಣ್ಣಸಣ್ಣ ತೋಡು ಚರಂಡಿಯ ಮೂಲಕ ನೇರವಾಗಿ ಇಂದ್ರಾಣಿ ನದಿಗೆ ಸೇರುತ್ತಿದೆ. ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಕಲ್ಮಾಡಿವರೆಗೂ ಪರಿಸ್ಥಿತಿ ಈಗಲು ಭೀಕರವಾಗಿದೆ. ಇಲ್ಲಿನ ನೀರಿನ ಬಣ್ಣ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ನಿಟ್ಟೂರು ಎಸ್‌ಟಿಪಿ ಘಟಕವೂ ದುರಸ್ತಿಯಾಗದೆ ಶುದ್ಧೀಕರಣ ಸರಿಯಾಗಿ ನಡೆಯದೆ ಕೊಳಚೆ ನೀರು ನದಿಗೆ ಸೇರುತ್ತಿದೆ.

ಅಸ್ತಿತ್ವ ಕಳೆದುಕೊಂಡ ಜಲಮೂಲಗಳು
ಶಿರಿಬೀಡು, ಮಠದಬೆಟ್ಟು, ಬೈಲಕೆರೆ, ಕಲ್ಸಂಕ, ಕಲ್ಮಾಡಿ, ಕೊಡಂಕೂರು, ಮೂಡು ಬೆಟ್ಟು, ನಿಟ್ಟೂರು ಈ ಭಾಗದಲ್ಲಿ ಸಾವಿರಾರು ಮನೆಯ ಬಾವಿಗಳು ಸಂಪೂರ್ಣ ಕಲುಷಿತಗೊಂಡು ಜಲಮೂಲದ ಅಸ್ತಿತ್ವವನ್ನೇ ಕಳೆದುಕೊಂಡು ಬಿಟ್ಟಿದೆ. ಬಾವಿ ನೀರು ಕಪ್ಪನೆ ಬಣ್ಣ, ದುರ್ವಾಸನೆಯಿಂದ ಕೂಡಿದ್ದು, ಒಂದು ಕಾಲದಲ್ಲಿ ಸಮೃದ್ದ ನೀರುಣಿಸುತ್ತಿದ್ದ ಬಾವಿಗಳು ಇಂದು ಪಾಳು ಬಿದ್ದಿವೆ. ಇದೆಲ್ಲವೂ ನಗರದ ಯುಜಿಡಿ ಅವ್ಯವಸ್ಥೆಯ ಕಾರಣದಿಂದ. ಇದೆಲ್ಲದಕ್ಕೂ ಜೀವ ಜಲವೇ ಆಧಾರ. ಹೀಗಾಗಿ ಇಂದ್ರಾಣಿಗೆ ಜೀವ ತುಂಬುವ ಕೆಲಸ ಆಗಬೇಕು. ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಇದಕ್ಕೆ ಪ್ರಧಾನ ಆದ್ಯತೆ ಸಿಗಬೇಕು.

ಅವಿನ್‌ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next