Advertisement

ಉಡುಪಿ ನರ್ಮ್ ಬಸ್‌ ನಿಲ್ದಾಣ: ವರ್ಷದೊಳಗೆ ಪೂರ್ಣ

06:10 AM Sep 09, 2017 | |

ಉಡುಪಿ : ಉಡುಪಿ ಜಿಲ್ಲೆಯಲ್ಲಿ ನರ್ಮ್ ಬಸ್‌ಗಳು ಆರಂಭವಾಗಿ ಒಂದು ವರ್ಷವಾದರೂ ಸರಿಯಾದ ಬಸ್‌ ನಿಲ್ದಾಣವಿಲ್ಲ ಎನ್ನುವ ಕೊರಗು ಇನ್ನು ನೀಗಲಿದೆ. ಮುಂದಿನ ಒಂದು ವರ್ಷದೊಳಗೆ ಉಡುಪಿ ನಗರದ ಕೇಂದ್ರ ಸ್ಥಾನದಲ್ಲಿ ಸುಸಜ್ಜಿತ ನರ್ಮ್ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. 

Advertisement

ಸೆ. 10ಕ್ಕೆ ಗುದ್ದಲಿಪೂಜೆ
ಉಡುಪಿ ನಗರದ ಸಿಟಿ ಬಸ್‌ ನಿಲ್ದಾಣ ಬಳಿಯ ಶಿಕ್ಷಣ ಇಲಾಖೆ ಜಾಗದಲ್ಲಿ ಈ ಹೊಸ ಬಸ್‌ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಸೆ. 10 ರ ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ಪಾಲ್ಗೊಳ್ಳಲಿದ್ದಾರೆ. 

ಐದು ಬಸ್‌ ನಿಲ್ದಾಣ
ಉಡುಪಿಯ ಬನ್ನಂಜೆಯಲ್ಲಿ 35 ಕೋ.ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಜಿಲ್ಲಾ ಬಸ್‌ ನಿಲ್ದಾಣ, ಉಡುಪಿಯಲ್ಲಿ 5 ಕೋ.ರೂ. ವೆಚ್ಚದ ಸಿಟಿ ಬಸ್‌ ನಿಲ್ದಾಣ (ಖಾಸಗಿ), 4 ಕೋ. ರೂ. ವೆಚ್ಚದ ನರ್ಮ್ ಬಸ್‌ ನಿಲ್ದಾಣ (ಸರಕಾರಿ), ಮಲ್ಪೆಯಲ್ಲಿ 3 ಕೋ.ರೂ., ಮಣಿಪಾಲದಲ್ಲಿ 2.5 ಕೋ.ರೂ. ವೆಚ್ಚದ ಬಸ್‌ ನಿಲ್ದಾಣ ಹೀಗೆ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಶೀಘ್ರ ಐದು ಹೊಸ ಸುಸಜ್ಜಿತ ಬಸ್‌ ನಿಲ್ದಾಣಗಳು ನಿರ್ಮಾಣವಾಗಲಿವೆ.

“ಬಸ್‌ ನಿಲ್ದಾಣ ಅಗತ್ಯವಿತ್ತು’
ಬೆಳೆಯುತ್ತಿರುವ ಉಡುಪಿ ನಗರದಲ್ಲಿ ಸುಸಜ್ಜಿತ ಸರಕಾರಿ ಬಸ್‌ ನಿಲ್ದಾಣದ ಅಗತ್ಯತೆಯನ್ನು ಮನಗಂಡು ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ದೂರದೃಷ್ಠಿತ್ವದ ಚಿಂತನೆಯಿಂದ ಸೆ. 10 ರಂದು ಬಸ್‌ ನಿಲ್ದಾಣಕ್ಕೆ ಶಂಕುಸ್ಥಾಪನೆಯಾಗಲಿದ್ದು, ಆದಷ್ಟು ಬೇಗ ಜನರ ಸೇವೆಗೆ ಲಭ್ಯವಾಗಲಿದೆ. ನರ್ಮ್ ಬಸ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಸ್‌ ನಿಲ್ದಾಣ ನಿರ್ಮಾಣದಿಂದ ಜನರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ ಹೇಳಿದ್ದಾರೆ. 

ಉಡುಪಿ ನಗರದಾದ್ಯಂತ ಸಂಚರಿಸುತ್ತಿರುವ ನರ್ಮ್ ಬಸ್‌ಗಳಿಗೆ ಜನರಿಂದ ಉತ್ತಮ ಸ್ಪಂದನೆ ಕೂಡ ವ್ಯಕ್ತವಾಗಿದ್ದು, ಇನ್ನು ನರ್ಮ್ ಬಸ್‌ ನಿಲ್ದಾಣ ಸಹ ನಿರ್ಮಾಣವಾದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚುವುದರ ಜತೆಗೆ ಜನರಿಗೂ ಅನುಕೂಲಕರವಾಗಲಿದೆ.

Advertisement

ಹೀಗಿರಲಿದೆ ವಿನ್ಯಾಸ
4 ಕೋ.ರೂ. ವೆಚ್ಚದಲ್ಲಿ ಸಿಟಿ ಬಸ್‌ ನಿಲ್ದಾಣದ ಎದುರಿನ ಶಿಕ್ಷಣ ಇಲಾಖೆಯ ಹೆಸರಲ್ಲಿದ್ದ ಹಳೆ ಡಿಡಿಪಿಐ ಕಚೇರಿಯ 41 ಸೆಂಟ್ಸ್‌ ಜಾಗದಲ್ಲಿ ನರ್ಮ್ ಬಸ್‌ ನಿಲ್ದಾಣ ನಿರ್ಮಾಣವಾಗುತ್ತಿದ್ದು, 3 ಅಂತಸ್ತಿನಲ್ಲಿ ನಿರ್ಮಾಣವಾಗಲಿದೆ. ಅಂಡರ್‌ಗ್ರೌಂಡ್‌ನ‌ಲ್ಲಿ ಇತರೆ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯಿದ್ದರೆ, ಗ್ರೌಂಡ್‌ ಫ್ಲೋರ್‌ನಲ್ಲಿ ಬಸ್‌ಗಳಿಗೆ ನಿಲುಗಡೆ ವ್ಯವಸ್ಥೆ, ಮೊದಲ ಫ್ಲೋರ್‌ನಲ್ಲಿ ಕಮರ್ಶಿಯಲ್‌ ಕಾಂಪ್ಲೆಕ್ಸ್‌ಗಳು ಇರಲಿದೆ. ಒಮ್ಮೆಗೆ 10 ಬಸ್‌ಗಳು ನಿಲ್ಲುವ ಸೌಕರ್ಯ ಇರಲಿದೆ.

ಶಿಕ್ಷಣ ಇಲಾಖೆಯ ಸುಪರ್ದಿಯಲ್ಲಿದ್ದ ಜಾಗವನ್ನು ಕೆಎಸ್‌ಆರ್‌ಟಿಸಿಗೆ ವರ್ಗಾಯಿಸಿದ್ದೇನೆ. 4 ಕೋ. ರೂ. ವೆಚ್ಚದಲ್ಲಿ ನಗರೋತ್ಥಾನ ನಿಧಿಯಿಂದ ಬಸ್‌ ನಿಲ್ದಾಣಕ್ಕೆ ಹಣ ಮಂಜೂರಾಗಿದ್ದು, 41 ಸೆಂಟ್ಸ್‌  ಜಾಗದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗಲಿದೆ. ಈ ಮೂಲಕ ಜನರ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಮುಂದಿನ ಒಂದು ವರ್ಷದೊಳಗೆ ಈ ನಿಲ್ದಾಣ ಪೂರ್ಣಗೊಳ್ಳಲಿದೆ. ನರ್ಮ್ ಬಸ್‌ಗಳ ಪರವಾನಿಗೆ ವಿಚಾರ ನ್ಯಾಯಾಲುಯದಲ್ಲಿದ್ದು, ಅದು ಇತ್ಯರ್ಥಗೊಂಡ ಬಳಿಕ ಉಡುಪಿಗೆ ಮತ್ತಷ್ಟು ಸರಕಾರಿ ಬಸ್‌ಗಳಿಗಾಗಿ ಬೇಡಿಕೆ ಸಲ್ಲಿಸಲಾಗುವುದು.                – ಪ್ರಮೋದ್‌ ಮಧ್ವರಾಜ್‌, ಸಚಿವ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next