Advertisement

ಬೀದಿ ನಾಯಿಗಳ ಶಸ್ತ್ರಚಿಕಿತ್ಸೆಗೆ ಮುಂದಾದ ಉಡುಪಿ ನಗರಸಭೆ

09:14 AM Jul 11, 2019 | sudhir |

ಉಡುಪಿ: ಉಡುಪಿ ನಗರದಲ್ಲಿ ಉಂಟಾಗಿರುವ ಬೀದಿ ನಾಯಿಗಳ ಸಮಸ್ಯೆಯನ್ನು ನಿಯಂತ್ರಿಸಲು ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಲು ಉಡುಪಿ ನಗರಸಭೆ ಮುಂದಾಗಿದೆ. ನಗರಸಭೆ ವ್ಯಾಪ್ತಿಯೊಳಗೆ ಸರಿಸುಮಾರು 1,500 ರಷ್ಟು ಬೀದಿನಾಯಿಗಳು ಇರಬಹುದು ಎಂಬ ಲೆಕ್ಕಾಚಾರಗಳಿವೆ. ಆ ಎಲ್ಲ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವಾದರೂ ಶೇ.80ರಷ್ಟಾದರೂ ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಉದ್ದೇಶ ನಗರಸಭೆಯದ್ದು. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾರ್ಯಾದೇಶ ನೀಡಲಾಗಿದೆ.

Advertisement

ಒಂದು ನಾಯಿಗೆ 1,500 ರೂ.ವೆಚ್ಚ?

ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಯುವ ಮುನ್ನ ನಾಯಿಗಳ ಸಮೀಕ್ಷೆ ನಡೆಯಲಿದೆ. ಅನಂತರ ಶಸ್ತ್ರಚಿಕಿತ್ಸೆ ನಡೆಸಿ ಆ್ಯಂಟಿ ರೇಬಿಸ್‌ ಲಸಿಕೆ ಕೂಡ ಹಾಕಲಾಗುತ್ತದೆ. ಇದರಿಂದಾಗಿ ನಾಯಿಗಳ ನಿಯಂತ್ರಣದ ಜತೆಗೆ ಹುಚ್ಚು ನಾಯಿ ಕಡಿತದ ಅಪಾಯದಿಂದಲೂ ಪಾರಾಗಬಹುದು. ಈ ಹಿಂದೆಯೂ ನಗರಸಭೆ ಈ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಡೆಸಿರಲಿಲ್ಲ. ಈಗ ಶಸ್ತ್ರಚಿಕಿತ್ಸೆ ಮತ್ತು ಆ್ಯಂಟಿರೇಬಿಸ್‌ ಲಸಿಕೆ, ಔಷಧಿ ಸೇರಿ ಒಂದು ನಾಯಿಗೆ 1,400ರಿಂದ 1,500ರೂ.ವರೆಗೆ ವೆಚ್ಚ ಅಂದಾಜಿಸಲಾಗಿದೆ. ಕಳೆದ ವರ್ಷ ಶಸ್ತ್ರಚಿಕಿತ್ಸೆಗಾಗಿ 5 ಬಾರಿ ಟೆಂಡರ್‌ ಕರೆಯಲಾಗಿತ್ತಾದರೂ ಅಂತಿಮ ಒಪ್ಪಿಗೆ ನೀಡಿರಲಿಲ್ಲ.

ಪ್ರತಿ ವರ್ಷ ರೇಬಿಸ್‌ ಲಸಿಕೆ

ಶಸ್ತ್ರಚಿಕಿತ್ಸೆಯನ್ನು ಒಂದು ಬಾರಿ ಮಾಡಿದರೆ ಸಾಕು. ಆದರೆ ರೇಬಿಸ್‌ ಲಸಿಕೆಯನ್ನು ಪ್ರತಿ ವರ್ಷ ನೀಡಬೇಕಾಗುತ್ತದೆ. ಒಮ್ಮೆ ಶಸ್ತ್ರಚಿಕಿತ್ಸೆ ಮಾಡುವಾಗ ಜತೆಯಲ್ಲಿ ಲಸಿಕೆ ಕೂಡ ನೀಡಲಾಗುತ್ತದೆ. ಆದರೆ ಅನಂತರ ಪ್ರತಿ ವರ್ಷ ನೀಡಬೇಕಾದರೆ ಅದಕ್ಕೆ ಪ್ರತ್ಯೇಕವಾಗಿ ಟೆಂಡರ್‌ ಕರೆಯಬೇಕಾಗುತ್ತದೆ ಎಂದು ವಿನಯ್‌ ತಿಳಿಸಿದ್ದಾರೆ.

Advertisement

ಡಾಗ್‌ಕೇರ್‌ ಸೆಂಟರ್‌ ಯೋಜನೆ ನನೆಗುದಿಗೆ

ನಗರಸಭೆ ವತಿಯಿಂದ ಸರಕಾರೇತರ ಸಂಸ್ಥೆಯ ಸಹಭಾಗಿತ್ವದಲ್ಲಿ ನಗರದಲ್ಲಿ ಡಾಗ್‌ಕೇರ್‌ ಸೆಂಟರ್‌ ಸ್ಥಾಪಿಸಿ ಅಲ್ಲಿ ಬೀದಿನಾಯಿಗಳನ್ನು ಸಾಕುವ ಯೋಜನೆ ಒಂದೊಮ್ಮೆ ಪ್ರಸ್ತಾವವಾಗಿತ್ತು. ಆದರೆ ಅನಂತರ ಆ ಯೋಜನೆ ನನೆಗುದಿಗೆ ಬಿತ್ತು.

ಗಂಭೀರವಾಗುತ್ತಿದೆ

ಉಡುಪಿ ನಗರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲವೆಡೆ ಬೀದಿ ನಾಯಿಗಳ ಕಡಿತ ಪ್ರಕರಣಗಳು ವರದಿಯಾಗಿದ್ದವು. ಈ ನಡುವೆ 10 ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನಗರಸಭೆ ಬೀದಿನಾಯಿಗಳ ನಿಯಂತ್ರಣಕ್ಕೆ ವಿಶೇಷ ಗಮನ ಹರಿಸುತ್ತಿದೆ. ಮಲ್ಪೆಯ ಮಧ್ವರಾಜ್‌ ಅನಿಮಲ್ ಕೇರ್‌ ಟ್ರಸ್ಟ್‌ನ ವತಿಯಿಂದ ಇತ್ತೀಚೆಗೆ ಮಲ್ಪೆಯಲ್ಲಿ 100 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ವಾರದಲ್ಲಿ ಆರಂಭ ನಿರೀಕ್ಷೆ

ಬೀದಿನಾಯಿಗಳ ಸಮೀಕ್ಷೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಈ ವಾರದಲ್ಲಿ ಚಿಕ್ಕಬಳ್ಳಾಪುರದ ತಂಡ ಉಡುಪಿಗೆ ಬರುವ ನಿರೀಕ್ಷೆ ಇದೆ.
– ರಾಘವೇಂದ್ರ,ಪರಿಸರ ಎಂಜಿನಿಯರ್‌, ಉಡುಪಿ ನಗರಸಭೆ
ಪ್ರತಿ ವರ್ಷವೂ ರೇಬಿಸ್‌ ಲಸಿಕೆ

ನಾಯಿಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ನಿಯಂತ್ರಿಸಬಹುದು. ಇಂಥ ನಾಯಿಗಳ ಪಾಲನೆಗೆ ಡಾಗ್‌ ಕೇರ್‌ ಸೆಂಟರ್‌ಗಳಿದ್ದರೆ ಇನ್ನೂ ಅನುಕೂಲ. ಬೆಂಗಳೂರು ಮಹಾನಗರದಲ್ಲಿ ಪ್ರತಿ ವರ್ಷವೂ ರೇಬಿಸ್‌ ಲಸಿಕೆ ಕೂಡ ಹಾಕಲಾಗುತ್ತಿದೆ. ಇತರೆ ನಗರ ಸ್ಥಳೀಯ ಸಂಸ್ಥೆಗಳು ಕೂಡ ಈ ಬಗ್ಗೆ ಗಮನ ಹರಿಸಿದರೆ ಹುಚ್ಚು ನಾಯಿಗಳ ಅಪಾಯದಿಂದಲೂ ದೂರವಾಗಬಹುದು.
– ವಿನಯ್‌,ಆಸ್ರಾ ಟ್ರಸ್ಟ್‌, ಚಿಕ್ಕಬಳ್ಳಾಪುರ
– ಸಂತೋಷ್ ಬೊಳ್ಳೆಟ್ಟು
Advertisement

Udayavani is now on Telegram. Click here to join our channel and stay updated with the latest news.

Next