Advertisement

ಉಡುಪಿ ನಗರಸಭೆ: ಶೇ. 17ರಷ್ಟೇ ಯುಜಿಡಿ ಅನುಷ್ಠಾನ

06:47 PM Mar 14, 2019 | Harsha Rao |

ಮಣಿಪಾಲ: 69.28 ಚ.ಕೀ.ಮೀ. ವಿಸ್ತೀರ್ಣದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕೇವಲ ಶೇ. 17ರಷ್ಟು ಯುಜಿಡಿ (ಒಳಚರಂಡಿ) ವ್ಯವಸ್ಥೆ ಇದೆ. ಅದೂ ಉಡುಪಿ ಮುಖ್ಯ ರಸ್ತೆಯಲ್ಲಿ ಮಾತ್ರ.

Advertisement

ನಗರ ಬೆಳೆಯುತ್ತಿದ್ದಂತೆ ಕೊಳಚೆ ನೀರು ನಿರ್ವಹಣೆ ಅತೀ ದೊಡ್ಡ ಸಮಸ್ಯೆಯಾಗುತ್ತಿದೆ. ಸೆಪ್ಟಿಕ್‌ ಟ್ಯಾಂಕ್‌ ಮಾಡಲಾಗಿದ್ದರೂ ಮಣ್ಣಿನ ಗುಣಕ್ಕನುಗುಣವಾಗಿ ಪೂರ್ಣವಾಗಿ ನೀರು ಇಂಗುತ್ತಿಲ್ಲ. ಹೆಚ್ಚುವರಿ ಕೊಳಚೆ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡಲಾಗುತ್ತಿದೆ. ಕೊಳಚೆ ನೀರು ಮೇಲ್ಮೆ„ಯಲ್ಲಿ ಇಂಗಿ ಸಮೀಪದ ಜಲ ಮೂಲಗಳು ಕಲುಷಿತವಾಗುವ ಭೀತಿಯೂ ಇದೆ. ಕೆಲವರು ನೇರವಾಗಿ ಚರಂಡಿಗೇ ಕೊಳಚೆ ನೀರು ಬಿಡುವುದರಿಂದ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆ 185 ಕೋಟಿ ರೂ.ನ ಯೋಜನೆ ತಯಾರಿಸಿದ್ದರೂ ಈ ವರೆಗೆ ಕಾಯಕಲ್ಪ ಒದಗಿಸಲು ಸಾಧ್ಯವಾಗಿಲ್ಲ. 

ಯಾಕೆ ವಿಳಂಬ?
ಯುಜಿಡಿ ನಿರ್ಮಾಣಕ್ಕೆ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ಕೇವಲ 12 ಎಕರೆ ಭೂ ಸ್ವಾಧೀನದ ಅಗತ್ಯವಿದೆ. ಆದರೂ ಇದಕ್ಕೆ ಪೂರಕ ಸ್ಪಂದನೆ ದೊರೆತಿಲ್ಲ. ಮುಖ್ಯ ರಸ್ತೆಯಲ್ಲಿ ಯುಜಿಡಿ ರಚನೆಗೆ ಸಮಸ್ಯೆ ಇಲ್ಲದಿದ್ದರೂ, ಉಪ/ಒಳ ರಸ್ತೆಗಳಿಂದ ಮತ್ತು ವಸತಿ ಪ್ರದೇಶಗಳಿಂದ ಯುಜಿಡಿ ನಿರ್ಮಾಣಕ್ಕೆ ತಡೆಯಾಗುತ್ತಿದೆ. 

ಮ್ಯಾನ್‌ಹೋಲ್‌ ಸಮಸ್ಯೆಯಿಲ್ಲ
ಹಿಂದೆ ಇಟ್ಟಿಗೆ ಮೂಲಕ ಮ್ಯಾನ್‌ಹೋಲ್‌ಗ‌ಳನ್ನು ನಿರ್ಮಿಸಲಾಗುತ್ತಿತ್ತು. ಈಗ ಕಾಂಟ್ರಿಟ್‌ನಲ್ಲಿ ನಿರ್ಮಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ. 

“ಅಮೃತ’ ದಕ್ಕಲಿಲ್ಲವೇ?
ಕೇಂದ್ರ ಸರಕಾರದ ಅಮೃತ್‌ ಯೋಜನೆಗೆ ಉಡುಪಿ ನಗರ ಆಯ್ಕೆಯಾಗಿದ್ದು ಇದರಲ್ಲಿ ಯುಜಿಡಿ ಪ್ರಸ್ತಾವವನ್ನೂ ಇರಿಸಲಾಗಿತ್ತು. ಜತೆಗೆ ನಗರಪಾಲಿಕೆ, ರಾಜ್ಯ ಸರಕಾರದ ಅನುದಾನದೊಂದಿಗೆ ಯುಜಿಡಿ ಮತ್ತು ನಿರ್ವಹಣೆ ವ್ಯವಸ್ಥೆ ಅನುಷ್ಠಾನ ಮಾಡಬಹುದಾಗಿತ್ತು. ಆದರೆ ಭೂ ಸ್ವಾಧೀನಕ್ಕೆ ಆಕ್ಷೇಪ ಮತ್ತು ಇತರ ಸಮಸ್ಯೆಗಳಿಂದ ಕೈಗೂಡಿಲ್ಲ. ಹಾಗಾಗಿ ಈ ಅನುದಾನದ ದೊಡ್ಡ ಪಾಲನ್ನು ಆದ್ಯತೆಗನುಗುಣವಾಗಿ ಕುಡಿಯುವ ನೀರಿಗಾಗಿಯೇ ಮೀಸಲಿಡಲಾಗಿದೆ. 

Advertisement

ಶುದ್ಧೀಕರಿಸಿದ‌ ನೀರಿನ ಉಪಯೋಗ
ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ಈ ನೀರನ್ನು ನಿರ್ಮಾಣ ಕಾರ್ಯಕ್ಕೆ, ಹೂ ತೋಟಕ್ಕೆ ಬಿಡಲು, ವಾಹನ ಮತ್ತು ಪಾರ್ಕಿಂಗ್‌ ಪ್ರದೇಶ ತೊಳೆಯಲು, ಸ್ವತ್ಛತಾ ಕಾರ್ಯಕ್ಕೆ ಬಳಸಬಹುದಾಗಿದೆ. ಮಂಗಳೂರಿನ ಸೆಜ್‌ನಲ್ಲಿ ಅವರೇ ಮೂರನೇ ಹಂತದ ಶುದ್ಧೀಕರಣ ಘಟಕ ಅಳವಡಿಸಿಕೊಂಡು ನೀರನ್ನು ಕೈಗಾರಿಕಾ ಚಟುವಟಿಕೆಗೆ ಬಳಸುತ್ತಿದ್ದಾರೆ. ಉಡುಪಿಯಲ್ಲೂ ಗೃಹೇತರ ಬಳಕೆಯ ನೀರಿಗೆ ತುಂಬಾ ಬೇಡಿಕೆ ಇದ್ದು ಇದನ್ನು ಈ ಮೂಲಕ ನೀಗಿಸಬಹುದಾಗಿದೆ. ನೀರಿನ ಪುನರ್‌ಬಳಕೆ ಇಂದಿನ ಅಗತ್ಯವೂ ಹೌದು. ಶುದ್ಧೀಕರಣ ವೇಳೆ ಲಭ್ಯವಾಗುವ ಸ್ಲರಿಯನ್ನು ಗೊಬ್ಬರವನ್ನಾಗಿ ಬಳಕೆ ಮಾಡಬಹುದಾಗಿದೆ.  

ಏನಿದು ಯುಜಿಡಿ?
ಮನೆ (ಅಪಾರ್ಟ್‌ಮೆಂಟ್‌ ಸಹಿತ), ಕೈಗಾರಿಕೆ, ಹೊಟೇಲ್‌, ರೆಸ್ಟಾರೆಂಟ್‌, ವಾಣಿಜ್ಯ ಮಳಿಗೆಗಳಿಂದ ಹೊರ ಬರುವ ಕೊಳಚೆ ನೀರು ವ್ಯವಸ್ಥಿತವಾಗಿ ಭೂಮಿಯ ಒಳಗೆ ಹರಿಯುವ ವ್ಯವಸ್ಥೆಯೇ ಒಳಚರಂಡಿ (ಯುಜಿಡಿ: ಅಂಡರ್‌ ಗ್ರೌಂಡ್‌ ಡ್ರೈನೇಜ್‌). ಇದರ ಮೂಲಕ ಹರಿದ ನೀರನ್ನು ಶುದ್ಧೀಕರಣ ಘಟಕಗಳಿಗೆ ಹರಿಸಿ ಅಲ್ಲಿ ಶುದ್ಧೀಕರಿಸಿ ಮರುಬಳಕೆಗೆ ಯುಕ್ತಗೊಳಿಸುವ ವ್ಯವಸ್ಥೆಯೇ ಕೊಳಚೆ ನೀರು ನಿರ್ವಹಣೆ ಮತ್ತು ಶುದ್ಧೀರಣ ವ್ಯವಸ್ಥೆ. 

ಯೋಜನೆ ಹೇಗಿತ್ತು?
ನಗರಸಭೆ ಈ ಹಿಂದೆ 185 ಕೋಟಿ ರೂ.ಗಳ ಯುಜಿಡಿ ಮತ್ತು ನಿರ್ವಹಣೆ ಯೋಜನೆ ತಯಾರಿಸಿತ್ತು. ಇದರಲ್ಲಿ ಯುಜಿಡಿ, ಮ್ಯಾನ್‌ಹೋಲ್‌, ಪಂಪಿಂಗ್‌ ಕೇಂದ್ರಗಳು ಮತ್ತು ಟ್ರೀಟ್‌ಮೆಂಟ್‌ (ಶುದ್ಧೀಕರಣ) ಘಟಕಗಳನ್ನು ಗುರುತಿಸಲಾಗಿತ್ತು. ಆದರೆ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆ ಕೈಗೂಡಿಲ್ಲ.

ಏನೆಲ್ಲ ಸಮಸ್ಯೆ?
– ಚರಂಡಿ, ರಸ್ತೆಯಲ್ಲಿ ಕೊಳಚೆ ನೀರು
– ಜಲ ಮೂಲ ಮಲಿನ
– ನಗರದ ಸೌಂದರ್ಯಕ್ಕೆ ಧಕ್ಕೆ
– ಸೊಳ್ಳೆ, ಸಾಂಕ್ರಾಮಿಕ ರೋಗ ಭೀತಿ

ತತ್‌ಕ್ಷಣ ಕಾರ್ಯಪ್ರವೃತ್ತ
ಯುಜಿಡಿ ಸಂಬಂಧ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ನಗರಸಭೆ ಚುನಾವಣೆ ಆಗಿದ್ದರೂ ಆಡಳಿತ ರೂಪುಗೊಂಡಿಲ್ಲ. ಆಡಳಿತ ರೂಪುಗೊಂಡ ತತ್‌ಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ.
-ಮಂಜುನಾಥ್‌ ಮಣಿಪಾಲ,  ನಗರಸಭಾ ಸದಸ್ಯ

ಯೋಜನೆ ಸಿದ್ಧ
ಯುಜಿಡಿ ಯೋಜನೆ ಸಿದ್ಧವಿದೆ. ಮುಂದೆ ಸರಕಾರದ ಅನುದಾನ ಪಡೆದು ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.
-ಆನಂದ ಸಿ. ಕಲ್ಲೋಳಿಕರ್‌,  ನಗರಾಯುಕ್ತ 

ಅಂಕಿ-ಅಂಶ 
ವಾಸ್ತವ್ಯ ಕಟ್ಟಡಗಳು:  56,554

ಕೈಗಾರಿಕಾ ಕಟ್ಟಡಗಳು:  244

ವಾಣಿಜ್ಯ ಕಟ್ಟಡಗಳು:  8,496

ಖಾಲಿ ಸ್ಥಳ ಖಾತೆ: 2,562

ಒಟ್ಟು ಜನಸಂಖ್ಯೆ: 1,34,615

ವಾರ್ಡ್‌ ಸಂಖ್ಯೆ: 35

ಒಟ್ಟು ರಸ್ತೆ:  911ಕಿ.ಮೀ. 

Advertisement

Udayavani is now on Telegram. Click here to join our channel and stay updated with the latest news.

Next