Advertisement
ನಗರಸಭೆಯ ಸಾಮಾನ್ಯ ಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
Related Articles
Advertisement
ನಮ್ಮ ವಾರ್ಡ್‌ನಲ್ಲಿ ಈಗಾಗಲೇ ಒಂದು ಬೋರ್‌ವೆಲ್ ಇದ್ದು, ನಿರ್ವಹಣೆ ಇಲ್ಲದಂತಾಗಿದೆ. ಈ ನಡುವೆ ಇನ್ನೊಂದು ಬೋರ್‌ವೆಲ್ ಮಾಡಲಾಗುತ್ತಿದೆ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಕಾಮಗಾರಿ ಮಾಡುವ ಸಂದರ್ಭದಲ್ಲಿ ಸ್ಥಳೀಯ ಸದಸ್ಯರ ಗಮನಕ್ಕೆ ತರಬೇಕು ಎಂಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು. ಪೌರಾಯುಕ್ತ ಡಾ| ಉದಯ ಶೆಟ್ಟಿ, ಭುಜಂಗ ಪಾರ್ಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಚಿಟ್ಟೆ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ನೀರಿನ ಆವಶ್ಯಕತೆ ಇದ್ದು, ಅದಕ್ಕಾಗಿ ಬೋರ್‌ವೆಲ್ ಕೊರೆಯಲಾಗಿದೆ ಎಂದರು. ಇದಕ್ಕೆ ಪಟ್ಟು ಬಿಡದ ಸದಸ್ಯರು ಮೊದಲು ಸಾರ್ವಜನಿಕರಿಗೆ ನೀರು ಒದಗಿಸಿ. ಮೂಲಸೌಕರ್ಯ ಕಲ್ಪಿಸಲು ಸಹಕಾರ ಮಾಡಿ ಎಂದರು. ವಾರಾಹಿ ನೀರು ಬಂದ ಮೇಲೆ ಸಮಸ್ಯೆ ಬಗೆಹರಿಯಲಿದೆ ಎಂದು ಅಧ್ಯಕ್ಷರು ತಿಳಿಸಿದರು. ಅಲ್ಲಿಯವರೆಗೆ ಜನರು ಏನು ಮಾಡಬೇಕು ಎಂದು ಸದಸ್ಯ ರಮೇಶ್ ಕಾಂಚನ್ ಪ್ರಶ್ನಿಸಿದರು.
ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ನಗರಸಭೆಯ ಅನುಮತಿ ಇಲ್ಲದೆ ಅಂಗಡಿಗಳ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಮಾಹಿತಿ ಇದೆಯಾ ಎಂದು ಸದಸ್ಯ ರಮೇಶ್ ಕಾಂಚನ್ ಪ್ರಶ್ನಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಬಯಲು ಶೌಚಾಲಯ ಮುಕ್ತಗೊಳಿಸಿ :
ಕಲ್ಮಾಡಿ ಭಾಗದಲ್ಲಿ 149 ಮನೆಗಳಿಗೆ ಪಿಟ್ ಇಲ್ಲವಾಗಿದೆ. ಇದನ್ನು ನಗರಸಭೆಯ ವತಿಯಿಂದ ನಿರ್ಮಿಸಬೇಕು. ಪಿಟ್‌ಗಳು ಓವರ್‌ಫ್ಲೋ ಆಗಿ ಬಯಲು ಶೌಚಾಲಯಗಳು ಆರಂಭವಾಗಿವೆ ಎಂದು ಸದಸ್ಯ ಸುಂದರ ಜೆ.ಕಲ್ಮಾಡಿ ತಿಳಿಸಿದರು. ನಮ್ಮ ವಾರ್ಡ್‌ನಲ್ಲಿಯೂ ಇದೇ ರೀತಿಯ ಸಮಸ್ಯೆ ಇದೆ ಎಂದು ಸರಳೇಬೆಟ್ಟು ವಾರ್ಡ್ ಸದಸ್ಯ ವಿಜಯಲಕ್ಷ್ಮೀ ಹಾಗೂ ಬನ್ನಂಜೆ ವಾರ್ಡ್ ಸದಸ್ಯೆ ಸವಿತಾ ಹರೀಶ್ ರಾಂ ಭಂಡಾರಿ ತಿಳಿಸಿದರು. ಬೀದಿನಾಯಿ ಸಮಸ್ಯೆ ಬಗ್ಗೆ ಸದಸ್ಯ ವಿಜಯ ಕೊಡವೂರು ಪ್ರಸ್ತಾವಿಸಿದರು. ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.
ಗರಿಷ್ಠ ಶುಲ್ಕದಿಂದ ಹೊರೆ :
ಪೌರಾಡಳಿತ 1964ರ ನಿಯಮ ಪ್ರಕಾರ ಉದ್ಯಮ ಪರವಾನಿಗೆ ಶುಲ್ಕ ಗರಿಷ್ಠ 500 ರೂ., ವಿಧಿಸಲು ಅವಕಾಶವಿದೆ. ಆದರೆ ಪ್ರಸ್ತುತ ಸಾವಿರಗಟ್ಟಲೆ ವಸೂಲಿ ಮಾಡಲಾಗುತ್ತಿದೆ. ಇದರಿಂದ ವ್ಯಾಪಾರಿಗಳಿಗೆ ಹೊರೆಯಾಗಿದೆ ಎಂದು ಸದಸ್ಯ ಕೃಷ್ಣರಾವ್ ಕೊಡಂಚ ಅಭಿಪ್ರಾಯಪಟ್ಟರು. ನಗರಸಭೆ ವ್ಯಾಪ್ತಿ 2014ರ ಕೌನ್ಸಿಲ್ ನಿರ್ಣಯ ಪ್ರಕಾರ ಉದ್ಯಮ ಪರವಾನಿಗೆ ಶುಲ್ಕ ಪರಿಷ್ಕರಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಅಂದಿನಿಂದ ನಗರಸಭೆಯಿಂದಲೇ ಉದ್ಯಮ ಪರವಾನಿಗೆ ಶುಲ್ಕ ಪರಿಷ್ಕರಿಸಿ ಶುಲ್ಕ ವಸೂಲಿ ಮಾಡುತ್ತಿದೆ. ಈ ಹಿಂದಿಗಿಂತ ನಗರ ದೊಡ್ಡದಾಗಿ ಬೆಳೆದಿದ್ದು ದೊಡ್ಡ ಕಂಪೆನಿಗಳು, ಜುವೆಲರಿ ಮಳಿಗೆಗಳು ನಗರದಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು. ಸರಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗದೆ ಹೇಗೆ ನಗರಸಭೆ ಹೇಗೆ ಬದಲಿಸಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಸದಸ್ಯರು ಪ್ರಶ್ನಿಸಿದರು. ಸರಕಾರದ ನೋಟಿಫಿಕೇಶನ್ ಬಳಿಕ ಉದ್ಯಮ ಪರವಾನಿಗೆ ಶುಲ್ಕ ಪರಿಷ್ಕರಣೆ ಇಳಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಸಾಲ್ಯಾನ್ ಉಪಸ್ಥಿತರಿದ್ದರು.
ಪ್ರತಿಧ್ವನಿಸಿದ ಉದಯವಾಣಿ ಸರಣಿ ವರದಿ :
ವಾಣಿಜ್ಯ ಕಟ್ಟಡಕ್ಕೆ ನಗರಸಭೆ ಅನುಮತಿ ನೀಡುತ್ತಾರೆ. ಅನಂತರ ಅವರು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿಯೂ ಮಾಲಕರು ಅಂಗಡಿಗಳನ್ನು ನಿರ್ಮಿಸುತ್ತಾರೆ. ಈ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ಸರಣಿ ವರದಿ ಪ್ರಕಟಗೊಂಡಿತ್ತು. ಫುಟ್‌ಪಾತ್‌ಗಳ ಅತಿಕ್ರಮಣ, ಸಿಟಿಬಸ್ ನಿಲ್ದಾಣ ಸಹಿತ ನಗರದ ಹಲವೆಡೆ ಫುಟ್‌ಪಾತ್‌ಗಳೇ ಇಲ್ಲದಂತಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿನ ಜಾಗಗಳಲ್ಲಿ ಪ್ಲಾಸ್ಟಿಕ್, ಬಟ್ಟೆ ಅಂಗಡಿಗಳನ್ನು ನಿರ್ಮಿಸಲಾಗಿದೆ. ಎಪ್ರಿಲ್ 1 ರ ಅನಂತರ ನಗರಸಭೆಯ ವತಿಯಿಂದ ಇದನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು. ಇದ್ದ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಉಳಿಸಿಕೊಂಡು ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಬೇಕು ಎಂದು ಗಿರೀಶ್ ಎಂ.ಅಂಚನ್ ತಿಳಿಸಿದರು.
ವೆಚ್ಚದ ಬಗ್ಗೆ ಆಕ್ಷೇಪ :
ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ 2.11 ಲ. ರೂ.ವೆಚ್ಚವಾಗಿದೆ. ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ನಗರಭೆಯವರೇಕೆ ಲಕ್ಷಾಂತರ ರೂ. ವಿನಿಯೋಗಿಸಬೇಕು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಎಂ.ಅಂಚನ್ ಪ್ರಶ್ನಿಸಿದರು. ನಿರ್ದಿಷ್ಟ ಮೊತ್ತ ನೀಡಬೇಕೆಂದು ಸಲಹೆ ನೀಡಿದರು. ಇತರ ಸದಸ್ಯರೂ ಸಮ್ಮತಿಸಿದರು.
ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಡಾ|ಆಚಾರ್ಯ ಹೆಸರು :
ಬನ್ನಂಜೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಡಾ|ವಿ.ಎಸ್. ಆಚಾರ್ಯ ಅವರ ಹೆಸರು ಇಡುವಂತೆ ನಗರಸಭೆ ನಿರ್ಣಯ ಸ್ವೀಕರಿಸಿತು. ನಿರ್ಣಯವನ್ನು ಸರಕಾರಕ್ಕೆ ಕಳುಹಿಸುವುದಾಗಿ ಅಧ್ಯಕ್ಷರು ತಿಳಿಸಿದರು.