ಉಡುಪಿ: ಮಣಿಪಾಲದ ಮಾಹೆ ವಿ.ವಿ., ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್, ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್, ರೋಟರಿ ಕ್ಲಬ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸಲು ಫೆ. 12ರಂದು 5ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ ನಡೆಯಲಿದೆ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಭಾರತ ಮಾತ್ರವಲ್ಲದೆ ವಿದೇಶದಿಂದಲೂ ಮ್ಯಾರ ಥಾನ್‌ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 42 ಕಿ.ಮೀ. ಪೂರ್ಣ ಮ್ಯಾರಥಾನ್, 21 ಕಿ.ಮೀ. ಅರ್ಧ ಮ್ಯಾರಥಾನ್, 10 ಕಿ.ಮೀ. ಓಟ, 5 ಕಿ.ಮೀ. ಓಟ, 3 ಕಿ.ಮೀ. ರೋಟರಿ ಮನೋರಂಜನ ಓಟದ ಜತೆಗೆ ಈ ವರ್ಷ ವಿಕಲಚೇತನರಿಗೆ ವೀಲ್‌ಚೇರ್ ಓಟ ಕೂಡ ಇರಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಣಿಪಾಲ ಮ್ಯಾರಥಾನ್ ಪ್ರಯುಕ್ತ ಅಂದು ಮಧ್ಯಾಹ್ನದ ವರೆಗೂ ಗ್ರೀನ್ಸ್‌ನಲ್ಲಿ ವಿವಿಧ ಕಾರ್ಯಕ್ರಮ ಗಳು ನಡೆಯಲಿದೆ. ಮಾಹಿತಿಗಾಗಿ //manipal marathon@manipal.edu.in ಸಂಪ ರ್ಕಿಸಬಹುದು.
ಮಣಿಪಾಲ ಮ್ಯಾರಥಾನ್ ಸುಮಾರು 16.5 ಲಕ್ಷದಷ್ಟು ಬಹುಮಾನವನ್ನು ವಿವಿಧ ವಿಭಾಗದಲ್ಲಿ ನೀಡಲಿದೆ. ಮ್ಯಾರಥಾನ್‌ನಿಂದ ಸಂಗ್ರಹವಾದ ನಿಧಿಯನ್ನು ಮಕ್ಕಳ ಕ್ಯಾನ್ಸರ್ ಬಗ್ಗೆ ಅರಿವು ಮತ್ತು ಅದರ ಚಿಕಿತ್ಸೆಗೆ ಸದ್ಭಳಕೆ ಮಾಡಿಕೊಳ್ಳಲಾಗುವುದು ಎಂದರು.
Related Articles
ಸಾರ್ವಜನಿಕರಿಗೂ ಅವಕಾಶ
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಮ್ಯಾರಥಾನ್ ಓಟವು ಮಾಹೆ ಕ್ಯಾಂಪಸ್‌ನ ಫುಡ್‌ಕೋರ್ಟ್‌ನಿಂದ ಆರಂಭಗೊಂಡು, ಸಿಂಡಿಕೇಟ್ ವೃತ್ತ, ಕಾಯಿನ್ ವೃತ್ತ, ಪೆರಂಪಳ್ಳಿ ಚರ್ಚ್, ಅಂಬಾಗಿಲು, ಕಲ್ಸಂಕ ವೃತ್ತ, ಎಂಜಿಎಂ ಕಾಲೇಜಿನ ವರೆಗೂ ಬಂದು ವಾಪಸ್ ಅದೇ ಮಾರ್ಗದಲ್ಲಿ ಫುಡ್‌ಕೋರ್ಟ್ ತಲುಪಿದರೆ 21 ಕಿ.ಮೀ. ಆಗಲಿದೆ. ಫುಲ್ ಮ್ಯಾರಥಾನ್‌ಗೆ ಇದೇ ಮಾರ್ಗದಲ್ಲಿ ಎರಡು ಸುತ್ತು ಓಡಬೇಕಾಗುತ್ತದೆ. ಬಹುಮಾನ ವಿತರಣೆ ಬೆಳಗ್ಗೆ 9 ಗಂಟೆಯ ಅನಂತರ ನಡೆಯಲಿದೆ. ಫುಲ್ ಮ್ಯಾರಥಾನ್‌ಗೆ 200ಕ್ಕೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಪೊಲೀಸರು ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. 3 ಕಿ.ಮೀ. ಓಟದಲ್ಲಿ ಸಾರ್ವಜನಿಕರೆಲ್ಲರೂ ಪಾಲ್ಗೊಳ್ಳಲು ಅವಕಾಶವಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿ ಯಿಂದ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ 3 ಕಿ.ಮೀ. ಓಟ ನಡೆಸಲಾಗುವುದು. ಎಲ್ಲ ವಿಭಾಗದಲ್ಲೂ ಪ್ರಥಮ ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಇರಲಿದೆ. ವಿದೇಶದಿಂದಲೂ ಸಾಕಷ್ಟು ಸಂಖ್ಯೆಯ ಆ್ಯತ್ಲೀಟ್‌ಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಮಣಿಪಾಲ ಮ್ಯಾರಥಾನ್ ಅಂತಾರಾಷ್ಟ್ರೀಯ ಆ್ಯತ್ಲೆಟಿಕ್ ಅಸೋಸಿಯೇಶನ್ ಹಾಗೂ ಅಂತಾರಾಷ್ಟ್ರೀಯ ಮ್ಯಾರಥಾನ್ ಅಸೋಸಿಯೇಶನ್(ಎಎಂಐಎಸ್) ಮಾನ್ಯತೆಯನ್ನು ಪಡೆದುಕೊಂಡಿದೆ.
ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಸೋಸಿಯೇಶನ್ ಅಧ್ಯಕ್ಷ ಡಾ| ಕೆಂಪರಾಜ್ ಎಚ್.ಬಿ., ಬೆಂಗಳೂರಿನ ಎನ್‌ಇಬಿ ಸ್ಪೋರ್ಟ್ಸ್ ನಿರ್ದೇಶಕ ನಾಗರಾಜ ಅಡಿಗ, ಮಾಹೆ ಸ್ಪೋರ್ಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿ ಡಾ| ವಿನೋದ್ ನಾಯಕ್, ಐಸಿಐಸಿಐ ಬ್ಯಾಂಕ್‌ನ ಮಧು ದೀಕ್ಷಿತ್ ಸುದ್ದಿಗೋಷ್ಠಿಯಲ್ಲಿದ್ದರು.