Advertisement

Udupi: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ

11:04 PM Aug 05, 2023 | Team Udayavani |

ಉಡುಪಿ: ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

Advertisement

ಕೋಟದ ನಿವಾಸಿ ವಿಘ್ನೇಶ್‌ ನಾಯ್ಕ (30) ಶಿಕ್ಷೆಗೆ ಗುರಿಯಾದ ಆರೋಪಿ. ಈತ ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ 17ರ ಹರೆಯದ ನೊಂದ ಬಾಲಕಿಯ ಮನೆಗೆ ಬಾವಿ ಕೆಲಸಕ್ಕೆ ಬಂದಿದ್ದು, ಈ ವೇಳೆ ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಬಾಲಕಿಗೆ ಫೋನ್‌ ಮೂಲಕ ಸಂದೇಶ ಕಳುಹಿಸಿ ಪ್ರೀತಿ ಮಾಡುವಂತೆ ಒತ್ತಾಯಿಸಿ ಹಿಂಬಾಲಿಸುತ್ತಿದ್ದ.

2018ರ ಡಿಸೆಂಬರ್‌ನಲ್ಲಿ ಶಾಲೆ ಬಿಟ್ಟು ಮನೆಗೆ ಒಬ್ಬಳೇ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿಯು ದಾರಿ ಮಧ್ಯೆ ಸರಕಾರಿ ಹಾಡಿಗೆ ಎಳೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ತಾಯಿ, ತಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅದರಂತೆ ನೊಂದ ಬಾಲಕಿ ಈ ವಿಚಾರವನ್ನು ಯಾರ ಬಳಿ ಕೂಡ ಹೇಳಿರಲಿಲ್ಲ. ಬಳಿಕ ತನ್ನ ಶಾಲೆಯಲ್ಲಿ 1098 ಮಕ್ಕಳ ಸಹಾಯವಾಣಿಯ ನಂಬರ್‌ ತಿಳಿದುಕೊಂಡು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಳು.

ಆಗಿನ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ನೊಂದ ಬಾಲಕಿಯನ್ನು ರಕ್ಷಿಸಿ ಆರೋಪಿ ವಿರುದ್ಧ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಆಗಿನ ಪೊಲೀಸ್‌ ನಿರೀಕ್ಷಕ ಜಯಂತ್‌ ಎಂ. ಆರೋಪಿ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಿದ್ದರು.

ಅದರಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಆರೋಪಿಗೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 21,500 ರೂ. ದಂಡ ವಿಧಿಸಿದ್ದಾರೆ.

Advertisement

ದಂಡದ ಹಣದಲ್ಲಿ 5 ಸಾವಿರ ರೂ. ಸರಕಾರಕ್ಕೆ ಮತ್ತು 16,500 ರೂ. ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು. ಸಂತ್ರಸ್ತೆಗೆ 2 ಲ.ರೂ. ಪರಿಹಾರವಾಗಿ ನೀಡುವಂತೆ ನಿರ್ದೇಶನ ನೀಡಿ ಸರಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next