Advertisement

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

06:12 PM Nov 29, 2024 | Team Udayavani |

ಉಡುಪಿ: ಅಮೃತ ನಾಡಿನಲ್ಲಿ ಹುಟ್ಟಿದ ಸಂಸ್ಥೆ ಇದು. ಈ ಸಂಸ್ಥೆಯು ವಿದ್ಯೆಯೆಂಬ ಅಮೃತವನ್ನು ನೀಡುತ್ತಿದೆ ಎಂದು ಶುಕ್ರವಾರ (ನ.29) ನಡೆದ ಮಹಾತ್ಮ ಗಾಂಧಿ ಮೆಮೋರಿಯಲ್‌ (ಎಂಜಿಎಂ) ಕಾಲೇಜಿನ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಮಣ್ಣಿನ ಗುಣ, ಈ ಕಾಲೇಜನ್ನು ಸ್ಥಾಪಿಸಿದ ಕತೃತ್ವ ಶಕ್ತಿ, ಅವರ ಆಡಳಿತ ವೈಖರಿಯನ್ನೆಲ್ಲಾ ನೋಡಿದಾಗ ಈ ಸಂಸ್ಥೆಯು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅಚ್ಚರಿಯೆನಿಸುವುದಿಲ್ಲ ಎಂದರು.

ಸಾಧನೆಗೆ ಎರಡು ಮಾರ್ಗಗಳು. ಒಂದು ಕರ್ಮ ಪಥ ಹಾಗೂ ವಿದ್ಯಾ ಪಥ. ಕರ್ಮ ಮಾರ್ಗದಿಂದ ನಶ್ವರವಾದ ಸ್ವರ್ಗ ಲೋಕವನ್ನು ಪಡೆಯಬಹುದು ಆದರೆ ವಿದ್ಯಾ ಮಾರ್ಗದಿಂದ ಶಾಶ್ವತ ಮೋಕ್ಷವನ್ನು ಪಡೆಯಬಹುದು. ಅಂತಹ ವಿದ್ಯೆಯನ್ನು ಯೋಗ್ಯರಿಗೆ ನಿರಂತರವಾಗಿ ದಾನ ಮಾಡಿದುದರಿಂದ ಈ ಸಂಸ್ಥೆಯು ಕೂಡ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಒಳ್ಳೆಯ ಕಾರ್ಯದಿಂದಾಗಿ ಇದು ಗುಣಮಟ್ಟವಾಗಿ ಬೆಳೆದು ಬಂದ ಈ ಸಂಸ್ಥೆಯು ಶತಮಾನೋತ್ಸವ ಕಾಣಲಿ ಎಂದು ಆಶೀರ್ವಚನ ನೀಡಿದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಉಡುಪಿ ಅಂದಕ್ಕೆ ಚೆಂದ ಕೊಟ್ಟದ್ದು ಮಣಿಪಾಲದ ಸಮೂಹ ಸಂಸ್ಥೆಗಳು. ಉಡುಪಿ ಗೌರವವನ್ನು ಉತ್ತುಂಗಕ್ಕೇರಿಸಿದ ಕಾರ್ಯವನ್ನು ಮಾಡುತ್ತಿರುವುದು ಈ ಸಮೂಹ ಸಂಸ್ಥೆಗಳು. ಸಹಸ್ರಾರು ವಿದ್ಯಾರ್ಥಿಗಳನ್ನು ದೇಶದ ಭವಿಷ್ಯಕ್ಕೆ ಕೊಡುಗೆ ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ, ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ನಿರಂಜನ ವಾನಳ್ಳಿ ಅವರು ಮಾತನಾಡಿ ಶುಭ ಹಾರೈಸಿದರು.

Advertisement

ದಿ.ಟಿ.ಮೋಹನ್‌ದಾಸ್‌ ಪೈ ಅಮೃತ ಸೌಧವನ್ನು ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಉದ್ಘಾಟಿಸಿದರು. ವಸ್ತುಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ನೆರವೇರಿಸಿದರು.

ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ ಹಾಗೂ ಟಿಎಂಪೈ ಸ್ಮರಣೆಯೊಂದಿಗೆ ಅಂಚೆ ಇಲಾಖೆಯು ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಟಿ.ಸತೀಶ್‌ ಯು ಪೈ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಡಾ. ಟಿಎಂ ಪೈ ಅವರ ಕುಟುಂಬಸ್ತರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಅಶೋಕ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ.ಎಸ್.ಪೈ, ಎಂ.ಜಿ.ಎಂ.ಕಾಲೇಜು ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಮಣಿಪಾಲದ ಸಹಕುಲಾಧಿಪತಿ, ಎಜಿಇ ಮಣಿಪಾಲ ಅಧ್ಯಕ್ಷ ಡಾ. ಎಚ್.ಎಸ್. ಬಲ್ಲಾಳ್, ಮಾಹೆ ಮಣಿಪಾಲದ ಉಪಕುಲಪತಿ ಲೇ.ಜ. (ಡಾ.) ಎಂ.ಡಿ. ವೆಂಕಟೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹ ಉಪಕುಲಪತಿಗಳು ಡಾ. ನಾರಾಯಣ ಸಭಾಹಿತ್, ಎಜಿಇ ಕಾರ್ಯದರ್ಶಿ ಸಿ.ಎ. ಬಿ.ಪಿ. ವರದರಾಯ ಪೈ, ಎಂ.ಜಿ.ಎಂ. ಕಾಲೇಜು ಪ್ರಾಂಶುಪಾಲರು ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಎಂ.ಜಿ.ಎಂ. ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮಾಲತಿ ದೇವಿ, ಎಂ.ಜಿ.ಎಂ. ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ ಎಸ್. ನಾಯ್ಕ, ಟಿ. ಮೋಹನದಾಸ ಪೈ ಕೌಶಲ್ಯಾಭಿವೃದ್ಧಿ ಕೇಂದ್ರ ನಿರ್ದೇಶಕ ಟಿ. ರಂಗ ಪೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next