ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ತನ್ನ 75 ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ ವೈವಿಧ್ಯಮಯ ವಸ್ತುಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಶುಕ್ರವಾರ (ನ.29) ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ್ದರು.
ಕಾಲೇಜಿನ ಪದವಿ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳು ತಮ್ಮ ವಿಭಾಗದ ವಿಶೇಷತೆಯನ್ನು ಪ್ರದರ್ಶಿಸಿದರು. ಜತೆಗೆ ವಿದ್ಯಾರ್ಥಿಗಳು ವಿವಿಧ ಮಾದರಿಗಳ ವಿಶೇಷತೆಯನ್ನು ತಿಳಿಸಿದರು.
ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಹಲವಾರು ವಿಶೇಷ ವಸ್ತುಗಳ ನಡುವೆ ಕೆಲವೊಂದು ವಿಭಾಗದ ವಸ್ತುಗಳು ನೋಡುಗರ ಗಮನ ಸೆಳೆದವು. ಅವುಗಳಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾದ ಹಲಗೆಗಳ ಮೇಲೆ 75 ವರ್ಷಗಳಿಂದ ರಾಸಾಯನಿಕದಲ್ಲಿ ರಕ್ಷಿಸಲ್ಪಟ್ಟ ಅದೆಷ್ಟೋ ಪ್ರಾಣಿ ಪ್ರಬೇಧಗಳು, ಡೈನೋಸರ್ ಮಾದರಿಗಳು, ಮಾನವ ಶರೀರ ಮಾದರಿಗಳು, ಪ್ರಾಣಿಗಳ ಬೆಳವಣಿಗೆಯ ಪ್ರತೀ ಹಂತಗಳು, ಪ್ರಾಣಿ, ಪಕ್ಷಿಗಳ ಹಾಗೂ ಸಮುದ್ರ ಜೀವಿಗಳ ಪಳೆಯುಳಿಕೆ, ದಶಕಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಕೆಲವು ಅಮೂಲ್ಯ ವಸ್ತುಗಳ ಸಂಗ್ರಹ ಇಲ್ಲಿದೆ.
ಇನ್ನೊಂದು ವನ್ಯಜೀವಿ ಛಾಯಾಚಿತ್ರಗಳು. ಛಾಯಾಚಿತ್ರಗಾರ ಸಂತೋಷ್ ಕುಂದೇಶ್ವರ ಅವರ ಹಲವಾರು ಛಾಯಾಚಿತ್ರಗಳಿಗೆ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಇಂದು ನಡೆದ ವಸ್ತು ಪ್ರದರ್ಶನದಲ್ಲಿ ಎಲ್ಲರ ಕಣ್ಮನ ಸೆಳೆಯಿತು.
ಚಿಟ್ಟೆ ಪಾರ್ಕ್ ನಲ್ಲಿ ಹಲವಾರು ಜಾತಿಯ ಚಿಟ್ಟೆಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ರಸಾಯನ ಶಾಸ್ತ್ರ ವಿಭಾಗ ವಿದ್ಯಾರ್ಥಿಗಳು ಅನೇಕ ಪ್ರಯೋಗಗಳನ್ನು ಪ್ರದರ್ಶಿಸುತ್ತಿದ್ದು ವಿಸ್ಮಯವನ್ನು ಮೂಡಿಸುತ್ತದೆ.
ಸಸ್ಯಶಾಸ್ತ್ರ ವಿಬಾಗವು ಹಲವಾರು ಸ್ಥಳೀಯ ಸಸ್ಯಜಾತಿಗಳು, ಅಲಂಕಾರಿಕ ಸಸ್ಯಜಾತಿಗಳು, ಔಷಧೀಯ ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಕೆಲವೊಂದು ವಿಶೇಷ ಸಸ್ಯ ಪ್ರಭೇದಗಳನ್ನು ಪ್ರಯೋಗಾಲಯದಲ್ಲಿ ಸಂರಕ್ಷಿಸಲಾಗಿದ್ದು, ಹೊರಗಡೆ ಬೊಟೋನಿಕಲ್ ಗಾರ್ಡನ್ ನಿರ್ಮಿಸಿ ಅಲ್ಲಿ ಹಲವಾರು ಬಗೆಯ ಸಸ್ಯಗಳನ್ನು ಪೋಷಿಸಲಾಗಿದೆ.
ಗಣಿತ ವಿಭಾಗದಿಂದ ಹಲವಾರು ಗಣಿತ ಮಾದರಿಗಳು, ಗಣಿತ ಆಟಗಳು ಮುಂತಾದ ಮಾದರಿಗಳನ್ನು ಪ್ರದರ್ಶಿಸಿ ವೀಕ್ಷಕರಿಗೂ ಆಟವಾಡುವ ಅವಕಾಶವನ್ನು ನೀಡಲಾಗಿದೆ.
ಪತ್ರಿಕೋದ್ಯಮ ವಿಭಾಗದಿಂದ ಕೆಮರಾ, ರೇಡಿಯೋ, ದೂರವಾಣಿ, ಮುಂತಾದ ವಸ್ತುಗಳನ್ನು ಪ್ರದರ್ಶಿಸಲಾಗಿದೆ.
ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕನ್ನಡ, ಸಂಸ್ಕೃತ, ಸೇರಿದಂತೆ ವಿವಿಧ ವಿಭಾಗದಿಂದ ಹಲವಾರು ವಿಶೇಷವೆನ್ನಿಸುವಂತಹ ವಸ್ತುಗಳು ಚಿತ್ರಗಳು, ಕೈ ಬರಹಗಳು, ಹಳೇ ಪುಸ್ತಕಗಳು, ಆಧುನಿಕ ಪ್ರಯೋಗಗಳನ್ನು ಪ್ರದರ್ಶಿಸಲಾಗಿದೆ.
ವಿಜ್ಞಾನ ಲ್ಯಾಬ್ಗಳ ಸಂಪೂರ್ಣ ಪರಿಚಯ ವಸ್ತು ಪ್ರದರ್ಶನ ನೋಡಿದವರಿಗೆ ಆಗುತ್ತದೆ.
ವಿಶೇಷವಾಗಿ ತುಳುನಾಡಿನ ವೈಭವವನ್ನು ಪ್ರದರ್ಶಿಸುವ ಹಲವಾರು ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಡಿ. 1ರ ವರೆಗೆ ಸಾರ್ವಜನಿಕರಿಗೆ ಪ್ರವೇಶವಿದೆ.