ಉಡುಪಿ: ಕಳೆದ 9 ವರ್ಷದಲ್ಲಿ ಕೇಂದ್ರ ಸರಕಾರ ಎಲ್ಲ ರಂಗದಲ್ಲೂ ವಿಶೇಷ ಸಾಧನೆ ಮಾಡಿದೆ. ರಸಗೊಬ್ಬರ, ಖಾದ್ಯತೈಲ ಹಾಗೂ ಸಶಸ್ತ್ರ ವಿಭಾಗಗಳಲ್ಲೂ ದೇಶ ಆತ್ಮನಿರ್ಭರತೆಯತ್ತ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ತಯಾರಿಕೆಯಲ್ಲೂ ನ್ಯಾನೋ ತಂತ್ರಜ್ಞಾನ ಸಂಶೋಧಿಸಲಾಗುತ್ತಿದೆ. 9 ವರ್ಷದಲ್ಲಿ 74 ವಿಮಾನ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಿದ್ದೇವೆ. 53,868 ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದೇವೆ. ಉಡುಪಿ ಜಿಲ್ಲೆಯಲ್ಲೂ ಕೆಲವು ಜಲ ಮಾರ್ಗದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಹೇಶ್ ಠಾಕೂರ್, ವೀಣಾ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ರಾಘವೇಂದ್ರ ಕಿಣಿ, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.
ವ್ಯವಸ್ಥಿತ ಷಡ್ಯಂತ್ರ
ವಿಶ್ವಮಟ್ಟದಲ್ಲಿ ಭಾರತವನ್ನು ಅಸ್ಥಿರಗೊಳಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಜಾರ್ಜ್ ಸರೋಸ್ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಸರಕಾರದ ವಿರುದ್ಧ ನಡೆಯುವ ಎಲ್ಲ ಪ್ರತಿಭಟನೆಗಳಿಗೂ ಜಾರ್ಜ್ ಸರೋಸ್ ಅವರ ಎನ್‌ಇಒಗಳಿಂದ ನಿಧಿ ಪೂರೈಕೆ ಮಾಡಲಾಗುತ್ತಿದೆ. ರಾಹುಲ್ ಗಾಂಧಿಯವರು ವಿದೇಶದಲ್ಲಿ ಇವರು ಆಯೋಜಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು ಶೋಭಾ ಹೇಳಿದರು.
Related Articles
ಕಾಮಗಾರಿ ಪರಿಶೀಲನೆ
ಕಲ್ಯಾಣಪುರ ಓವರ್ ಪಾಸ್ ನಿರ್ಮಾಣ ಕಾಮಗಾರಿಯು ವೇಗವಾಗಿ ಸಾಗುತ್ತಿದೆ. ಇಂದ್ರಾಳಿ ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಗರ್ಡರ್ ನಿರ್ಮಾಣವಾಗುತ್ತಿದೆ. ಎಲ್ಲವನ್ನು ಪರಿಶೀಲಿಸುತ್ತಿದ್ದೇವೆ. ಜಲ ಜೀವನ್ ಮಿಷನ್ ಅಡಿಯಲ್ಲೂ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ರಾಜ್ಯ ಸರಕಾರ ಕೆಲವೊಂದು ಕಾಮಗಾರಿಯನ್ನು ತಡೆ ಹಿಡಿದಿರುವುದರಿಂದ ಸ್ವಲ್ಪ ತೊಡಕಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕೊಂಕಣ ರೈಲ್ವೇ ಕೇಂದ್ರದ ಅಧೀನಕ್ಕೆ ಬರಬೇಕು
ದೇಶಾದ್ಯಂತ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿಸುವುದು, ರೈಲು ಮಾರ್ಗಗಳ ಡಬ್ಲಿಂಗ್ ಸೇರಿದಂತೆ ಆಧುನಿಕ ಸ್ಪರ್ಶ ನೀಡುವ ಕಾರ್ಯ ನಡೆಯುತ್ತಿದೆ. ಆದರೆ, ಕೊಂಕಣ ರೈಲು ವಿಭಾಗದಲ್ಲಿ ಯಾವುದೇ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ. ಹೀಗಾಗಿ ಕೊಂಕಣ ರೈಲು ವಿಭಾಗವನ್ನು ಕೇಂದ್ರ ರೈಲ್ವೇ ಇಲಾಖೆಯೊಂದಿಗೆ ವಿಲೀನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ವಿಲೀನ ಆದಲ್ಲಿ ಕೊಂಕಣ ರೈಲು ವಿಭಾಗವೂ ಅಭಿವೃದ್ಧಿಯಾಗಲಿದೆ ಎಂದರು ಶೋಭಾ.
ಉಚಿತ ಸವಲತ್ತು ನೀಡಿದ ಆಂಧ್ರ ಯಾವ ಸ್ಥಿತಿಗೆ ತಲುಪಿದೆ ಎಂಬುದು ಎಲ್ಲರಿಗೂ ತಿಳಿಸಿದೆ. ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಅನಂತರದಲ್ಲಿ ಬಿಜೆಪಿ ವಿರುದ್ಧ ಮಾಡಿದ್ದ ಟ್ವೀಟ್ ಅವರ ಅಹಂಕಾರವನ್ನು ತೋರಿಸುತ್ತದೆ. ಉಚಿತ ಯೋಜನೆಗೆ ಹಣ ಹೇಗೆ ಹೊಂದಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ