ಉಡುಪಿ/ಮಂಗಳೂರು: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೊಟ್ಟಾರ ಚೌಕಿ ಬಳಿಯ ಮಾಲೇಮಾರ್ ನಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಕೆಲವೊಂದು ಮನೆಗಳಿಗೆ ನೀರು ನುಗ್ಗಿದೆ. ಇದೇ ಪ್ರದೇಶದಲ್ಲಿ ತಡೆಗೋಡೆಯೊಂದು ಕುಸಿದು ಬಿದ್ದಿದೆ ಎಂದು ವರದಿಯಾಗಿದೆ
ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಬೆಳಗ್ಗಿನಿಂದಲೇ ಮಳೆ ಆರಂಭಗೊಂಡು ದಿನವಿಡೀ ಸುರಿಯುತ್ತಿತ್ತು. ಮಂಗಳೂರು ನಗರದ ಪಡೀಲ್, ಕೊಟ್ಟಾರ, ಪಂಪ್‌ವೆಲ್, ನಂತೂರು,ಉರ್ವಸ್ಟೋರ್ ಸೇರಿದಂತೆ ಸುತ್ತಮುತ್ತ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಪಡೀಲ್ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿತ್ತು.
ನೀರುಮಾರ್ಗದ ಸಮೀಪ ರಾಮರಬೈಲ್ ಹಾಗೂ ಕೊಟ್ಟಾರದಲ್ಲೂ ತಡರಾತ್ರಿ ಸುರಿದ ಮಳೆಗೆ ತೋಟಗಳಿಗೆ ನೀರು ನುಗ್ಗಿದ್ದು, ಕೆಲವೊಂದೆಡೆ ಗುಡ್ಡ ಕುಸಿತ ಸಂಭವಿಸಿದೆ.
ಉಡುಪಿ ಜಿಲ್ಲೆಯ ಪರ್ಕಳದಲ್ಲಿ ಮರ ಬಿದ್ದಿದ್ದು ಉಡುಪಿ-ಕಾರ್ಕಳ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ಉಡುಪಿ,ಕುಂದಾಪುರ, ಬೈಂದೂರು, ಕಾಪು, ಹೆಬ್ರಿ, ಪಡುಬಿದ್ರಿ, ಕಾರ್ಕಳ, ಬ್ರಹ್ಮಾವರದಲ್ಲಿ ಉತ್ತಮ ಮಳೆಯಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಬುಧವಾರದ ವೇಳೆಗೆ ಅಲ್ಪ ಬಿಡುವು ನೀಡಿದೆ. ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರಿನ ಮಟ್ಟ ಇಳಿಕೆಯಾಗಿದೆ. ವ್ಯಾಪಕ ಮಳೆಯ ಕಾರಣ ಕೆಲವೆಡೆ ಭತ್ತದ ಬೆಳೆಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.