Advertisement
ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರಾದ ಬಿಆರ್‌ಕೆ ಆ್ಯಂಡ್ ಸನ್ಸ್ ಆಡಳಿತ ಪಾಲುದಾರ ಬೋಳ ರಾಮನಾಥ ಕಾಮತ್ ಕಾರ್ಕಳ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಹಿಂದೆ ಮನೆಯಲ್ಲೊಂದು ಕಾರಿದ್ದರೆ ಅದು ಅವರ ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆವಶ್ಯಕತೆ ಪೂರೈಸಿಕೊಳ್ಳಲು ಒಂದು ಮನೆಯಲ್ಲಿ ಕನಿಷ್ಠ ಎರಡು – ಮೂರು ಕಾರುಗಳಿದ್ದರೂ ಸಾಕಾಗದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾಹನ ಮೇಳವು ಕಾರುಗಳನ್ನು ಖರೀದಿಸುವ ಮುನ್ನ ಸೂಕ್ತ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಬ್ಯಾಂಕ್ ವಲಯ ಕಚೇರಿಯ ಮಹಾ ಪ್ರಬಂಧಕ ಸತೀಶ್ ಕಾಮತ್ ಮಾತನಾಡಿ, ಗ್ರಾಹಕರಿಗೆ ಸೇವೆಯೊಂದಿಗೆ ಅವರ ಆವಶ್ಯಕತೆಗೆ ಬೇಕಾದ ವಸ್ತು, ವಾಹನಾದಿಗಳ ಖರೀದಿಗೆ ಅನುಕೂಲವಾಗುವಂತಹ ಸಾಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯಿಂದ ಮತ್ತು ಬ್ಯಾಂಕಿನ ವ್ಯವಹಾರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಜನತೆಗೆ ಒಂದೇ ಸೂರಿನಡಿ ವಿವಿಧ ಕಂಪೆನಿಗಳ ವಾಹನಗಳ ಕುರಿತಾದ ಸ್ಥೂಲ ಮಾಹಿತಿ ಲಭ್ಯವಾಗಲಿದೆ ಎಂದರು. ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಮಧು ಪಿ. ಹೆಗ್ಡೆ, ವಲಯ ಕಚೇರಿಯ ಡಿಜಿಎಂ ಬಿ.ಆರ್. ಹಿರೇಮಠ ಅವರು ಶುಭ ಹಾರೈಸಿದರು. ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕ ಎಸ್.ಎಸ್. ಹೆಗ್ಡೆ ಸ್ವಾಗತಿಸಿದರು. ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಅಧಿಕಾರಿ ರಾಮಚಂದ್ರ ಎನ್. ಮಧ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ಕಚೇರಿಯ ಮುಖ್ಯ ಅಧಿಕಾರಿ ಡೈಸಿ ಎಂ. ಡಿ’ಸೋಜಾ ವಂದಿಸಿದರು.