Advertisement

ಮಾಸ್ತಿ ಉಡುಪಿ ಹೋಟೆಲ್‌ನ ಚಕ್ಕುಲಿ, ವಡೆ ರುಚಿ ತಿಂದವನೇ ಬಲ್ಲ

08:46 PM Jun 16, 2019 | Sriram |

ಚಕ್ಕುಲಿ, ನಿಪ್ಪಟ್ಟು ಇವೆಲ್ಲ ಬೇಕರಿ, ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದು ಹೋಟೆಲ್‌ ಚಕ್ಕುಲಿ, ನಿಪ್ಪಟ್ಟು, ಮಸಾಲೆ ವಡೆಯಿಂದಲೇ ಫೇಮಸ್ಸಾಗಿದೆ. ಇತರೆ ತಿಂಡಿಗಳನ್ನೂ ಮಾಡಲಾಗುತ್ತದೆಯಾದ್ರೂ

Advertisement

ಬಹಳಷ್ಟು ಮಂದಿ ಚಕ್ಕುಲಿ, ಮಸಾಲೆ ವಡೆ ತಿನ್ನುವುದಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ಇಂತಹ ಹೋಟೆಲ್‌ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಮಾಸ್ತಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ಬಂದು ಇಲ್ಲಿ ಉಡುಪಿ ಹೋಟೆಲ್‌ ಎಲ್ಲಿ ಅಂತ ಕೇಳಿದರೆ ತೋರಿಸುತ್ತಾರೆ.


ಮೂಲತಃ ಉಡುಪಿಯವರಾದ ಕೇಶವರಾವ್‌ ಕಾಮತ್‌, ಈ ಹೋಟೆಲ್‌ನ ಸಂಸ್ಥಾಪಕರು. ಮದುವೆಯಾದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು, ನಂತರ ಪತ್ನಿ ಶಾರದಾ ಕಾಮತ್‌ರ ಸಹಕಾರದೊಂದಿಗೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಚಿಕ್ಕದಾಗಿ ಕ್ಯಾಂಟೀನ್‌ ಆರಂಭಿಸಿದ್ದರು. ಕೆಲ ವರ್ಷಗಳ ನಂತರ ಮಾಸ್ತಿಯಲ್ಲಿ ಇದ್ದ ಅಯ್ಯಂಗಾರ್‌ ಬೇಕರಿ ಮಾಲೀಕರ ಪರಿಚಯವಾಗಿ, ಅವರು ಇಲ್ಲೇ ಬಂದು ಹೋಟೆಲ್‌ ಪ್ರಾರಂಭಿಸುವಂತೆ ಹೇಳಿದ್ರಂತೆ. ಅದರಂತೆ 1956ರಲ್ಲಿ ಮಾಸ್ತಿಗೆ ಬಂದ ಕೇಶವರಾವ್‌, ಗ್ರಾಮದ ಸರ್ಕಲ್‌ನಲ್ಲಿ ಹೆಂಚಿನ ಮನೆಯನ್ನು ಬಾಡಿಗೆಗೆ ಪಡೆದು ಹೋಟೆಲ್‌ ಪ್ರಾರಂಭಿಸಿದರು. 25 ವರ್ಷಗಳ ನಂತರ ಬಸ್‌ ನಿಲ್ದಾಣದಲ್ಲಿ ಗುಡಿಸಲು ಹಾಕಿಕೊಂಡು, ಅದಕ್ಕೆ ಗೀತಾ ಹೋಟೆಲ್‌ ಎಂದು ನಾಮಕರಣ ಮಾಡಿದರು. 18 ವರ್ಷ ಗುಡಿಸಲಿನಲ್ಲೇ ಹೋಟೆಲ್‌ ನಡೆಸಿದ ನಂತರ ಪೊಲೀಸ್‌ ಠಾಣೆ ಎದುರು ಸ್ವಂತ ಮನೆ ಕಟ್ಟಿಕೊಂಡು ಅದರಲ್ಲೇ ಹೋಟೆಲ್‌ ಮುಂದುವರಿಸಿದರು. ಸದ್ಯ ಇವರ ಪುತ್ರ ಶಿವಪ್ರಸಾದ್‌ ಕಾಮತ್‌, ಪತ್ನಿ ದಿವ್ಯಾ, ತಾಯಿ ಶಾರದಾ ಕಾಮತ್‌ ಸಹಕಾರದೊಂದಿಗೆ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ವಿಶೇಷ ತಿಂಡಿ ಚಕ್ಕುಲಿ, ಮಸಾಲ್‌ ವಡೆ:
ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಚಕ್ಕುಲಿ, ನಿಪ್ಪಟ್ಟಿಗೂ ಈ ಉಡುಪಿ ಹೋಟೆಲ್‌ನಲ್ಲಿ ಮಾಡುವ ಚಕ್ಕುಲಿಗೂ ವ್ಯತ್ಯಾಸವಿದೆ. ಬೆಣ್ಣೆ, ತುಪ್ಪದಲ್ಲಿ ಹಿಟ್ಟನ್ನು ಕಲಿಸಿ ಸ್ಥಳದಲ್ಲೇ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಮಾಡಿಕೊಡಲಾಗುತ್ತದೆ. ಮಸಾಲೆ ವಡೆಯ ರುಚಿಯೂ ಹೆಚ್ಚಿರುತ್ತದೆ. ಚಕ್ಕುಲಿ 5 ರೂ., ಮಸಾಲೆ ವಡೆಗೆ 10 ರೂ. ನಿಗದಿ ಮಾಡಲಾಗಿದೆ. ಬಿಸಿ ಬಿಸಿ ಚಕ್ಕುಲಿ, ವಡೆಯನ್ನು ಶುಂಠಿ ಟೀ, ಕಾಫಿ ಜೊತೆ ತಿನ್ನೊಂದು ಒಂದು ವಿಶೇಷ.

ಇತರೆ ತಿಂಡಿ:
ಚಕ್ಕುಲಿ, ವಡೆ, ನಿಪ್ಪಟ್ಟಿನಂತೆ ಈ ಹೋಟೆಲ್‌ನ ರವಾ ಇಡ್ಲಿಯನ್ನೂ ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಇಡ್ಲಿ, ವಡೆ, ಪೂರಿ, ದೋಸೆ ಜೊತೆ ಕಡ್ಲೆ ಚಟ್ನಿ ಅಥವಾ ಪುದೀನಾ, ಕೊತ್ತಂಬರಿ ಸೊಪ್ಪಿನ ಚಟ್ನಿ, ಸಾಂಬಾರ್‌, ಸಾಗು ಕೊಡಲಾಗುತ್ತದೆ. ಮಾಸ್ತಿ ಇನ್ನೂ ಹಳ್ಳಿಯಾಗಿಯೇ ಉಳಿದಿರುವ ಕಾರಣ ದರವೂ ಕಡಿಮೆ ಇದೆ. ನಾಲ್ಕು ಇಡ್ಲಿ ಎರಡು ವಡೆಗೆ 30 ರೂ., ರೈಸ್‌ಬಾತ್‌ ಜೊತೆ ಎರಡು ವಡೆಗೆ 30 ರೂ., ಮೂರು ದೋಸೆ(ಸಟ್‌) 2 ವಡೆ ಸೇರಿ 25 ರೂ. ನಿಗದಿ ಮಾಡಲಾಗಿದೆ. ಮಧ್ಯಾಹ್ನ ಅನ್ನ ಸಾಂಬಾರ್‌, ಮೊಸರನ್ನ ಸಿಗುತ್ತದೆ. ಜೊತೆಗೆ ವಡೆ ತೆಗೆದುಕೊಂಡರೆ 30 ರೂ. ತೆಗೆದುಕೊಳ್ಳಲಾಗುತ್ತದೆ.

Advertisement

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ಸಂಜೆ 5 ರವರೆಗೆ, ವಾರಪೂರ್ತಿ ತೆರೆದಿರುತ್ತೆ

ಹೋಟೆಲ್‌ ವಿಳಾಸ:
ದಿನ್ನಹಳ್ಳಿ ಮುಖ್ಯರಸ್ತೆ, ಪೊಲೀಸ್‌ ಸ್ಟೇಷನ್‌ ಎದುರು, ಮಾಸ್ತಿ ಬಸ್‌ ನಿಲ್ದಾಣ ಸಮೀಪ, ಮಾಸ್ತಿ.

– ಭೋಗೇಶ ಆರ್‌. ಮೇಲುಕುಂಟೆ
– ಫೋಟೋ ಕೃಪೆ: ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next