ಉಡುಪಿ: ಜಿಲ್ಲೆಯಲ್ಲಿರುವ ಮರಾಠಿ, ಕುಡುಬಿ ಸಮುದಾಯವು ಸಾಂಪ್ರದಾಯಿಕವಾಗಿ ಆಚರಿಸುವ ಹೋಳಿ ಹುಣ್ಣಿಮೆಯ ದಿನ ಉಡುಪಿ ಜಿಲ್ಲೆಯಲ್ಲಿ ಮಾ.7ರಂದು ವಿಶೇಷ ಸ್ಥಳೀಯ ರಜೆ ಘೋಷಿಸಲಾಗಿದೆ.
ಶಾಸಕ ರಘುಪತಿ ಭಟ್ ಅವರು ನೀಡಿರುವ ಮನವಿಯನ್ನು ಪುರಸ್ಕರಿಸಿ ಹೋಳಿ ಹುಣ್ಣಿಮೆ ಹಬ್ಬದ ದಿನ ಒಂದು ದಿನದ ವಿಶೇಷ ಸ್ಥಳೀಯ ರಜೆಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಆದೇಶ ಹೊರಡಿಸಿರುತ್ತಾರೆ.
ಹೋಳಿ ಹಬ್ಬವನ್ನು ಮಾರ್ಚ್ ತಿಂಗಳಲ್ಲಿ ಬರುವ ಹೋಳಿ ಹುಣ್ಣಿಮೆಯ ದಿನ ಆಚರಿಸುತ್ತಾರೆ. ಈ ಬಗ್ಗೆ ವಿಶೇಷ ಸ್ಥಳೀಯ ರಜೆಯನ್ನು ಘೋಷಿಸುವ ಬಗ್ಗೆ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಉಡುಪಿ ಇವರ ಮನವಿಯಂತೆ ಶಾಸಕರು ಜಿಲ್ಲಾಧಿಕಾರಿಯವರಿಗೆ ಹೋಳಿ ಹುಣ್ಣಿಮೆ ಹಬ್ಬದ ದಿನ ಸ್ಥಳೀಯವಾಗಿ ವಿಶೇಷ ರಜೆ ಘೋಷಿಸುವ ಬಗ್ಗೆ ಪತ್ರ ಮುಖೇನ ಮನವಿ ಮಾಡಿದ್ದರು.
ಅದರಂತೆ ಜಿಲ್ಲಾಧಿಕಾರಿಯವರು ವಿದ್ಯಾಂಗ ಉಪ ನಿರ್ದೇಶಕರಿಗೆ ಈ ಕುರಿತು ಸಲ್ಲಿಸಿರುವ ವರದಿಯಂತೆ ಹೋಳಿ ಹುಣ್ಣಿಮೆ ಹಬ್ಬವನ್ನು ವಿಶೇಷವಾಗಿ ಆಚರಿಸುವ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಸ್ಥಳೀಯ ರಜೆಯನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ.