Advertisement

Udupi: ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

01:00 AM Jul 06, 2024 | Team Udayavani |

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿನ ಖಾಸಗಿ ಕಾಲೇಜೊಂದರ ಆವರಣದಲ್ಲಿ ಕಾರ್ಯಕ್ರಮ ನಡೆಸಿ “ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಕ್ಕಳಿಗೆ ಹಲವು ಉಚಿತ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದರು.ಈ ಆರೋಪದ ಮೇಲೆ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಮತ್ತು ಇತರ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣ ಪ್ರಕ್ರಿಯೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಖಾಸಗಿ ದೂರು ಮತ್ತು ಆ ಕುರಿತ ಬೆಂಗಳೂರಿನ 42ನೇ ಎಸಿಎಂಎಂ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ) ವಿಚಾರಣ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹಾಗೂ ಖಾಸಗಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಸ್‌. ಗೋಪಾಲಕೃಷ್ಣ ಸಲ್ಲಿಸಿದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿದಾರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರಕರಣದಲ್ಲಿ ದೂರುದಾರರಾಗಿರುವ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣ ಸಂಚಾರ ವಿಚಕ್ಷಣ ಅಧಿಕಾರಿಯಾಗಿದ್ದ ವಿಶ್ವನಾಥ್‌ ಶೆಟ್ಟಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌ ಹಾಜರಾಗಿ, ಪ್ರಕರಣ ಸಂಬಂಧ ಚುನಾವಣ ಸಂಚಾರ ವಿಚಕ್ಷಣ ಅಧಿಕಾರಿಯು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 188 ದೂರು ದಾಖಲಿಸಿದ್ದರು. ಈ ವಿಚಾರವಾಗಿ ದೂರು ದಾಖಲಿಸುವ ಅಧಿಕಾರ ವ್ಯಾಪ್ತಿಯನ್ನು ವಿಚಕ್ಷಣ ಅಧಿಕಾರಿ ಹೊಂದಿಲ್ಲ. ದೂರು ದಾಖಲಿಸುವಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಖಾಸಗಿ ದೂರನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಈ ವಾದ ಒಪ್ಪಿದ ನ್ಯಾಯಪೀಠ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next