Advertisement

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

10:04 PM May 22, 2022 | Team Udayavani |

ಉಡುಪಿ: ಬೈಂದೂರು ತಾಲೂಕು ವ್ಯಾಪ್ತಿಯ ಕೊಲ್ಲೂರು, ಮುದೂರು, ಜಡ್ಕಲ್‌ ಪ್ರದೇಶಗಳ ಹೆಚ್ಚಿರುವ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

Advertisement

2022ರ ಮಾರ್ಚ್‌ನಿಂದ ಈ ಭಾಗದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 120ಕ್ಕೂ ಹೆಚ್ಚು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿಯೇ ಇವೆ. ಡೆಂಗ್ಯೂ ಪೀಡಿತರಿಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್‌ ಸಿದ್ಧಪಡಿಸಲಾಗಿದೆ.

ಮುದೂರು ಮತ್ತು ಜಡ್ಕಲ್‌ನಲ್ಲಿ ನಿರಂತರ ನಿಗಾ ಇರಿಸಲು ಆರೋಗ್ಯಾಧಿಕಾರಿಗಳನ್ನು ಒಳಗೊಂಡ 13 ತಂಡಗಳನ್ನು ರಚಿಸಿದ್ದು, ಈ ತಂಡದ ಸದಸ್ಯರು ಪ್ರತಿದಿನ ಮನೆಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಈ ಎರಡೂ ಗ್ರಾಮಗಳ ಮನೆಗಳಿಗೆ ಉಚಿತವಾಗಿ ಸೊಳ್ಳೆ ಪರದೆ, ತಲಾ 2 ಬಾಟಲ್‌ ಡಿಎಂಪಿ ತೈಲ ವಿತರಿಸಲಾಗಿದೆ.

ಸಾರ್ವಜನಿಕರಿಗೆ ಅರಿವು
ಡೆಂಗ್ಯೂ ಪೀಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ತುರ್ತು ಅಗತ್ಯಕ್ಕಾಗಿ 2 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ಪ್ರತಿದಿನ ಫಾಗಿಂಗ್‌ ಮಾಡಲಾಗುತ್ತಿದೆ. ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ, ಪೋಷಕರ ಮೂಲಕ ಅನುಷ್ಠಾನ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಚರ್ಚ್‌ ವಾರದ ಪ್ರಾರ್ಥನೆ ಸಮಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ, ಸಂಬಂಧಪಟ್ಟ ಗ್ರಾ.ಪಂ.ಗಳ ಅಧ್ಯಕ್ಷರ ಸಹಿತ ಎಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ನಿಯಂತ್ರಣ ಕ್ರಮಗಳ ಪಾಲನೆ ಮತ್ತು ಪ್ರತೀ ದಿನ ಇಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾಡಳಿತ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

Advertisement

ಸೊಳ್ಳೆ ಹೆಚ್ಚಳಕ್ಕೆ ಏನು ಕಾರಣ?
ಆರೋಗ್ಯ ಇಲಾಖೆ ಪ್ರಕಾರ ಈ ಪ್ರದೇಶದಲ್ಲಿ ರಬ್ಬರು ಮತ್ತು ಅನಾನಸು ಗಿಡಗಳು ಅಧಿಕ. ರಬ್ಬರ್‌ ಹಾಲಿನ ಸಂಗ್ರಹಕ್ಕೆ ಇಟ್ಟಿರುವ ಗೆರಟೆಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಸೊಳ್ಳೆಯ ಲಾರ್ವಾ ಹುಟ್ಟುತ್ತಿದೆ. ಇದರೊಂದಿಗೆ ಅನಾನಸು ಎಲೆಗಳ ನಡುವೆ ನಿಂತ ನೀರಿನಲ್ಲಿ ಮತ್ತು ಅಡಿಕೆ ತೋಟದ ಅಡಿಕೆ ಹಾಳೆಗಳಲ್ಲೂ ಸೊಳ್ಳೆಗಳ ಉಗಮವಾಗುತ್ತಿದ್ದು, ಈ ಬಗ್ಗೆ ತೋಟಗಳ ಮಾಲಕರಿಗೆ ಅರಿವು ಮೂಡಿಸಲಾಗಿದೆ.

ಫೀವರ್‌ ಕ್ಲಿನಿಕ್‌ ಆರಂಭ
ಪ್ರಸ್ತುತ ಮಳೆ ಅಧಿಕವಾಗುತ್ತಿದ್ದು, ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ಜ್ವರ ಬಂದರೂ ನಿರ್ಲಕ್ಷ್ಯ ವಹಿಸದೆ ಮುದೂರು ಉಪ ಆರೋಗ್ಯ ಕೇಂದ್ರ, ಕೊಲ್ಲೂರು, ಹಳ್ಳಿಹೊಳೆ ಮತ್ತು ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ತೆರೆದಿರುವ ಫೀವರ್‌ ಕ್ಲಿನಿಕ್‌ನಲ್ಲಿ ಪರೀಕ್ಷಿಸಿಕೊಳ್ಳಬೇಕು.

ಡೆಂಗ್ಯೂ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು, ಸಾರ್ವಜನಿಕರು ಭಯ ಪಡಬೇಕಿಲ್ಲ. ಸಾರ್ವಜನಿಕರು ಮನೆಯಿಂದ ಹೊರ ಹೋಗುವಾಗ ಸೊಳ್ಳೆ ಕಡಿತದಿಂದ ಪಾರಾಗಲು ಸಂಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಬೇಕು. ಮನೆಯಲ್ಲಿ ಸೊಳ್ಳೆ ಪರದೆ ಬಳಸಬೇಕು. ಮನೆಯ ಸಮೀಪದಲ್ಲಿ ತ್ಯಾಜ್ಯ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು.
– ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next