Advertisement

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

01:34 AM Nov 17, 2024 | Team Udayavani |

ಉಡುಪಿ: ಸಂಶೋಧನೆಯೆಂದರೆ ಕೇವಲ ವಿಷಯಾಧಾರಿತ ಸಾಮಗ್ರಿ ಸಂಗ್ರಹವಲ್ಲ. ಒಳಗೊಳ್ಳುವಿಕೆ, ತಾತ್ವಿಕತೆ, ಸಿದ್ಧಾಂತ, ವೈಜ್ಞಾನಿಕತೆ ಎಲ್ಲವನ್ನೂ ಹೊಂದಿರಬೇಕು. ಈ ರೀತಿಯ ಸಂಶೋಧನೆಯನ್ನು ರಾಷ್ಟ್ರಕವಿ ಗೋವಿಂದ ಪೈ ಅವರ ಬರಹಗಳಲ್ಲಿ ಕಾಣಲು ಸಾಧ್ಯ. ಅದು ಎಲ್ಲವನ್ನೂ ಒಳಗೊಂಡಿರುವ ಸಮಗ್ರತೆಯ ಹೂರಣ ಎಂದು ವಿಶ್ರಾಂತ ಕುಲಪತಿ, ಗೋವಿಂದ ಪೈ ಸಂಶೋಧನ ಸಂಪುಟದ ಪ್ರಧಾನ ಸಂಪಾದಕ ಡಾ| ಬಿ.ಎ.ವಿವೇಕ್‌ ರೈ ಹೇಳಿದರು.

Advertisement

ಮಾಹೆ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗೋವಿಂದ ಪೈ ಸಂಶೋಧನ ಸಂಪುಟ-1ರ ಬಿಡುಗಡೆ ಕಾರ್ಯಕ್ರಮ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿದ್ದು, ಅದರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲ ಯಾರಿಗೂ ಕಾಯುವು ದಿಲ್ಲ. ನಾವು ಕಾಲದ ಜತೆಗೆ ಸೆಣಸಾಡಬೇಕು. ಗೋವಿಂದ ಪೈ ಅವರ ಆದರ್ಶ ಸಂಶೋಧನ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಪುಸ್ತಕವನ್ನು ಓದಿದರೆ ಸಾಲದು. ಓದಿ ಅರಿಯಬೇಕು. ಅರಿತಾಗ ನಾವು ಸ್ನಾತರಾಗುತ್ತೇವೆ. ಆಗ ಗ್ರಂಥದ ಶುದ್ಧತ್ವ ತಿಳಿಯುತ್ತದೆ. ಪುಸ್ತಕ ಮನೆಯಲ್ಲಿಡುವುದು ಶೋಭೆಗಲ್ಲ, ಜ್ಞಾನಾರ್ಜನೆಗೆ ಎಂಬುದು ಅಷ್ಟೇ ಮುಖ್ಯ ಎಂದರು.

ಮಾಹೆ ಸಹ ಕುಲಾಧಿಪತಿ ಡಾ| ಎಚ್‌. ಎಸ್‌. ಬಲ್ಲಾಳ್‌ ಕೃತಿಯನ್ನು ಅನಾವರಣಗೊಳಿಸಿ, ಎರಡನೇ ಸಂಪುಟವೂ ಶೀಘ್ರ ಬರುವಂತಾಗಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸಂಪುಟದ ಬಗ್ಗೆ ಮಾತನಾಡಿದರು.

ಕೃತಿಯ ಸಂಪಾದಕರಾದ ಪ್ರೊ| ಮುರುಳೀಧರ ಉಪಾಧ್ಯ ಹಿರಿಯಡಕ, ಡಾ| ಪಾದೇಕಲ್ಲು ವಿಷ್ಣು ಭಟ್ಟ ಸಂಪುಟ ರಚನೆಯಾದ ಬಗೆಯನ್ನು ವಿವರಿಸಿದರು. ಇವರಿಬ್ಬರನ್ನು ಸಮ್ಮಾನಿಸಲಾಯಿತು. ಕೇಂದ್ರದ ಆಡಳಿತಾಧಿಕಾರಿ ಡಾ| ಬಿ.ಜಗದೀಶ್‌ ಶೆಟ್ಟಿ ಸ್ವಾಗತಿಸಿ, ಆರ್‌ಆರ್‌ಸಿ ಸಹಸಂಶೋಧಕ ಡಾ| ಅರುಣ ಕುಮಾರ್‌ ಎಸ್‌. ಆರ್‌. ನಿರೂಪಿಸಿ, ವಂದಿಸಿದರು. ಗೋವಿಂದ ಪೈ ಸಂಶೋಧನ ಸಂಪುಟ ಗ್ರಂಥವನ್ನು ಕಾಲೇಜು ಆವರಣದಲ್ಲಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ತರಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next