Advertisement

ಉಡುಪಿ: 3 ವರ್ಷಗಳ ಬಳಿಕ ಮತ್ತೆ ಪ್ರಥಮ

02:21 AM May 12, 2017 | Karthik A |

ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೂರು ವರ್ಷಗಳ ಬಳಿಕ ಮತ್ತೆ ಗತವೈಭವದ ಪ್ರಥಮ ಸ್ಥಾನ ಗಳಿಸಿದೆ. ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ  ಶ್ರೇಷ್ಠ ಸ್ಥಾನವನ್ನು ಗಳಿಸಿದ್ದಾರೆ. ಈ ವರ್ಷ (2016-17) ರೆಗ್ಯುಲರ್‌ ವಿದ್ಯಾರ್ಥಿಗಳಲ್ಲಿ ಶೇ. 90.01 ಫ‌ಲಿತಾಂಶ ಜಿಲ್ಲೆಗೆ ದೊರಕಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಇದಕ್ಕಿಂತ ಹೆಚ್ಚಿನ ಫ‌ಲಿತಾಂಶ ಬಂದಿದ್ದರೂ ದ್ವಿತೀಯ ಸ್ಥಾನಿಯಾಗಿತ್ತು. 2004-5ರಲ್ಲಿ ಶೇ. 75.26 (ದ್ವಿ.), 2005-6ರಲ್ಲಿ ಶೇ.79.96 (ಪ್ರ.), 2006-7ರಲ್ಲಿ ಶೇ.79.65 (ದ್ವಿ), 2007-8ರಲ್ಲಿ ಶೇ. 76.20 (ದ್ವಿ), 2008-9ರಲ್ಲಿ ಶೇ. 80.39 (ದ್ವಿ.), 2009-10ರಲ್ಲಿ ಶೇ. 89.08 (ಪ್ರ.), 2010-11ರಲ್ಲಿ ಶೇ. 87.15 (ಪ್ರ.), 2011-12ರಲ್ಲಿ ಶೇ. 85.32 (ದ್ವಿ.), 2012-13ರಲ್ಲಿ ಶೇ. 92.72 (ಪ್ರ.), 2013-14ರಲ್ಲಿ ಶೇ. 90.93 (ದ್ವಿ.), 2014- 15ರಲ್ಲಿ ಶೇ.92.32 (ದ್ವಿ.), 2015-16ರಲ್ಲಿ ಶೇ. 90.35 (ದ್ವಿ.) ಫ‌ಲಿತಾಂಶ ದೊರಕಿತ್ತು.  ಈ ಫ‌ಲಿತಾಂಶದಲ್ಲಿ ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳ ಫ‌ಲಿತಾಂಶ ಸೇರಿಲ್ಲ.

Advertisement

ಫ‌ಲಿತಾಂಶ ಕುಸಿತ: ರಾಜ್ಯಮಟ್ಟದ ಫ‌ಲಿತಾಂಶದಲ್ಲಿ ಶೇ. 4.82 ಫ‌ಲಿತಾಂಶ ಹೋದ ವರ್ಷಕ್ಕಿಂತ ಇಳಿಕೆಯಾಗಿರುವುದೂ ಜಿಲ್ಲೆಯ ಫ‌ಲಿತಾಂಶದಲ್ಲಿ ಸ್ವಲ್ಪ ಇಳಿಕೆ (ಶೇ. 0.34) ಕಂಡುಬರಲು ಕಾರಣವಾಗಿದೆ ಎನ್ನಬಹುದು.

ವಿದ್ಯಾರ್ಥಿ ಸಂಖ್ಯೆ ಏರಿಕೆ: ಜಿಲ್ಲೆಯಲ್ಲಿ 14,688 ರೆಗ್ಯುಲರ್‌ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆದಿದ್ದಾರೆ. ಪುನರಾವರ್ತಿತರು, ಖಾಸಗಿ ಅಭ್ಯರ್ಥಿಗಳು ಸೇರಿ 16,428 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ರೆಗ್ಯುಲರ್‌ 13,296, ಒಟ್ಟು 14,832 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಅಂಕಿ-ಅಂಶದ ಪ್ರಕಾರ ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ.

13 ವರ್ಷಗಳಲ್ಲಿ ಐದು ವರ್ಷಗಳನ್ನು ಬಿಟ್ಟು ಉಳಿದೆಲ್ಲಾ ವರ್ಷಗಳಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಇದುವರೆಗೆ ಪ್ರಥಮ, ದ್ವಿತೀಯ ಸ್ಥಾನ ಬಿಟ್ಟು ಅದಕ್ಕಿಂತ ಕೆಳಗೆ ಹೋಗದೆ ಇರುವುದೂ ವಿಶೇಷ. ದ್ವಿತೀಯ ಸ್ಥಾನ ಬರುವಾಗಲೂ ದ.ಕ. ಜಿಲ್ಲೆಗಿಂತ ಬಹಳ ಅತ್ಯಲ್ಪ ಅಂತರದಲ್ಲಿ ಕಡಿಮೆ ಫ‌ಲಿತಾಂಶ ಬಂದಿರುವುದು ಗೋಚರವಾಗುತ್ತದೆ. ಅತ್ಯುತ್ತಮ ಫ‌ಲಿತಾಂಶ ದೊರೆಯಬೇಕೆಂಬ ಇರಾದೆಯಿಂದ ಎಲ್ಲ ಕಾಲೇಜುಗಳಿಗೂ ಕಾಲಕಾಲಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದೆ. ಶಿಕ್ಷಕರು, ಜನಪ್ರತಿನಿಧಿಗಳು, ಪ್ರಾಂಶುಪಾಲರು, ವಿದ್ಯಾರ್ಥಿಗಳ ಸಹಕಾರದಿಂದ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಡಿಡಿಪಿಯು ಆರ್‌.ಬಿ. ನಾಯಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಫ‌ಲಿತಾಂಶ ಸಾಧನೆಗಾಗಿ ಜನಪ್ರತಿನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಗತ ಫ‌ಲಿತಾಂಶ- ಹ್ಯಾಟ್ರಿಕ್‌ ವಿಶೇಷ
ಕಳೆದ 13 ವರ್ಷಗಳಲ್ಲಿ ಉಡುಪಿ ಜಿಲ್ಲೆ ಒಂದೋ ಪ್ರಥಮ, ಇಲ್ಲವೇ ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಿತ್ತು. 2005-06, 2009-10, 2010-11, 2012-13ನೇ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಪಡೆದ ಉಡುಪಿ ಜಿಲ್ಲೆ ಈಗ ಮತ್ತೆ ಅದೇ ಕೀರ್ತಿಯ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. 2006-07ರಿಂದ ಸತತ ಮೂರು ವರ್ಷ, 2013-14ರಿಂದ ಸತತ ಮೂರು ವರ್ಷ ದ್ವಿತೀಯ ಸ್ಥಾನ ಪಡೆದಿರುವುದು ಜಿಲ್ಲೆಯ ಹಿರಿಮೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next