ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸೊಸೈಟಿ ಹೆಸರಲ್ಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಸೊಸೈಟಿ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣರಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಆರೋಪಿ ಠೇವಣಿದಾರರಿಂದ ಪಡೆದ ಹಣದಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ಜಮೀನು ಖರೀದಿಸಿದ್ದ ವಿಚಾರ ತಿಳಿದುಬಂದಿದೆ.
ಕಿದಿಯೂರು, ಗುಂಡಿಬೈಲು, ಹಿರಿಯಡ್ಕ, ಬ್ರಹ್ಮಾವರ ಸಹಿತ 40ಕ್ಕೂ ಹೆಚ್ಚು ಕಡೆ ಎಕರೆಗಳಷ್ಟು ಜಮೀನು ಖರೀದಿಸಿದ್ದರು. ಆದರೆ ಕೋವಿಡ್ ಬಳಿಕ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 7 ಮಂದಿ ಠೇವಣಿದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಕೋಟ್ಯಂತರ ರೂ. ವ್ಯವಹಾರ ನಡೆಸಿದ ಬಿ.ವಿ. ಲಕ್ಷ್ಮೀನಾರಾಯಣ ಅವರ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಾರಿ ನಿರ್ದೇಶನಾಲಯವೂ ಪ್ರಕರಣದ ಮಾಹಿತಿ ಕಲೆ ಹಾಕಿದೆ. ಪ್ರಸ್ತುತ ಸೊಸೈಟಿ ಹಾಗೂ ಲಕ್ಷ್ಮೀನಾರಾಯಣರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.