ಉಡುಪಿ: ಹಿಂದೂ ಯುವಕರ ಸ್ಥೈರ್ಯವನ್ನು ಕುಗ್ಗಿಸುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ ಹೇಳಿದರು.
ಅಲ್ಪಸಂಖ್ಯಾಕರ ಆಚರಣೆಗಳಿಗೆ ಸಿಗುವ ರಕ್ಷಣೆ ಹಿಂದೂಗಳ ಹಬ್ಬಗಳಿಗೆ ಸಿಗುತ್ತಿಲ್ಲ. ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾಕರ ಸಂಪ್ರದಾಯಗಳಿಗೆ ಪ್ರತಿ ಹಂತದಲ್ಲೂ ಸಹಕಾರ ನೀಡುತ್ತಿದೆ. ಹಿಂದೂಗಳ ಆಚರಣೆಗಳಿಗೆ ಕಟ್ಟುಪಾಡುಗಳ ಮೂಲಕ ಪಕ್ಷಪಾತ ಮಾಡುತ್ತಿದೆ ಎಂದು ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಂಡ್ಯದ ನಾಗಮಂಗಲದಲ್ಲಿ ಹಿಂದೂ ಯುವಕರ ಮೇಲೆ ಹಾಕಿರುವ ಎಫ್ಐಆರ್‌ಗಳನ್ನು ಸರಕಾರ ಕೂಡಲೇ ರದ್ದು ಮಾಡಬೇಕು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ನೀಡಬೇಕು. ಓಲೈಕೆ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಸಂವಿಧಾನ ಚೌಕಟ್ಟಿನೊಳಗೆ ಆಡಳಿತ ಪಕ್ಷದಲ್ಲಿ ಕೊರತೆ ಇದ್ದರೆ ಅದನ್ನು ಹೇಳುವ ಜವಾಬ್ದಾರಿ ವಿಪಕ್ಷದವರದ್ದು. ಆದರೆ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ಆಧಾರರಹಿತವಾಗಿ ಹೇಳಿಕೆ ನೀಡುತ್ತಾ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ ದಿಲೇಶ್ ಶೆಟ್ಟಿ , ಸಹ ಸಂಚಾಲಕ ಶಂಕರ್ ಅಂಕದಕಟ್ಟೆ ಉಪಸ್ಥಿತರಿದ್ದರು.