ಉಡುಪಿ: ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಡಾ.ಕೆ. ಅರುಣ್ ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಎಸ್ ಪಿ ಅಕ್ಷಯ್ ಹಾಕೆ ಎಂ. ಅವರು ನೂತನ ಎಸ್.ಪಿಯವರನ್ನು ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಎಸ್ ಪಿ ಡಾ.ಕೆ. ಅರಣ್ ಮಾತನಾಡಿ, ಕೋಮು ಪ್ರಚೋದಿತ ಹಿಂಸಾಚಾರ ಕಡಿವಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಅನೈತಿಕ ಪೊಲೀಸ್ ಗಿರಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಈ ಬಗ್ಗೆಯು ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು.
ಉಡುಪಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಕಾನೂನು ಬಾಹಿರ ಚಟುವಟಿಕೆ ನಿಲ್ಲಬೇಕು. ನಮ್ಮಲ್ಲಿ ಎಲ್ಲವೂ ಕಾನೂನಾತ್ಮಕ ನಡೆಯಬೇಕು. ಕಾನೂನು ವಿರೋಧಿ ಚಟುವಟಿಕೆ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು. ಜನಸ್ನೇಹಿ ಪೊಲೀಸ್ ನನ್ನ ಆದ್ಯತೆಯಾಗಿದೆ ಎಂದರು.
ಇದನ್ನೂ ಓದಿ:Shimoga ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ
2014 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ.ಕೆ. ಅರುಣ್ ಅವರು ಪಾಂಡಿಚೇರಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. 2014 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ಚಿತ್ರದುರ್ಗ, ದಾವಣಗೆರೆ, ವಿಜಯಪುರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಜಿಲ್ಲೆಯಲ್ಲಿ ಪಬ್, ಡ್ರಗ್ಸ್ ಸಹಿತ ಎಲ್ಲಾ ಕಾನೂನು ಬಾಹಿರ ಚಟುವಟಿಕೆಯ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ನಶಾಮುಕ್ತ ಸಮಾಜ ನಿರ್ಮಾಣ ಸರಕಾರದ ಗುರಿಯೂ ಹೌದು. ಹೀಗಾಗಿ ಹಿಂದಿನ ಎಸ್ಪಿ ಮಾಡಿರುವ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದರು.