ಉಡುಪಿ: ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಉಡುಪಿ ಜಿಲ್ಲೆ ಒಂದು ಹಂತದ ವಿಜಯವನ್ನು ಸಾಧಿಸಿದೆ. ಜಿಲ್ಲೆಯಲ್ಲಿ ಕೊನೆಯ ಕೋವಿಡ್ ವೈರಸ್ ಸೋಂಕು ಪ್ರಕರಣ ದಾಖಲಾಗಿ 28 ದಿನಗಳು ಕಳೆದಿರುವ ಕಾರಣ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಕೇಂದ್ರ ಸರಕಾರ ತನ್ನ ಮುಂದಿನ ವಿಭಾಗೀಕರಣದಲ್ಲಿ ಈ ಘೋಷಣೆ ಮಾಡಲಿದೆ, ಆಗ ಉಡುಪಿ ಜಿಲ್ಲೆ ಅಧಿಕೃತವಾಗಿ ಗ್ರೀನ್ ಝೋನ್ ಎಂದು ಪರಿಗಣನೆಗೆ ಒಳಗಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.
ಆದರೆ ಒಂದು ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಯೊಳಗೆ ಬಂದಲ್ಲಿ ಯಾವೆಲ್ಲಾ ಚಟುವಟಿಕೆಗಳನ್ನು ಪುನರಾರಂಭ ಮಾಡಬಹುದೋ ಅವೆಲ್ಲವನ್ನೂ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದೂ ಸಹ ಜಿಲ್ಲಾಧಿಕಾರಿಯವರು ಹೇಳಿದ್ದಾರೆ.
ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಸ್ ನಲ್ಲಿ ಏನೆಲ್ಲಾ ಶಾಪ್ ಗಳನ್ನು ನಡೆಸ್ತಾ ಇದ್ದಾರೋ ಅವೆಲ್ಲಾ ಶಾಪ್ ಗಳು ಸಹ ಈಗ ಪ್ರಾರಂಭವಾಗುತ್ತವೆ. ಆದರೆ ಚಿನ್ನದ ಅಂಗಡಿ, ಮಲ್ಟಿ ಬ್ರ್ಯಾಂಡ್ ಹಾಗೂ ಸಿಂಗಲ್ ಬ್ರ್ಯಾಂಡ್ ಶಾಪ್ ಗಳು, ಬ್ಯೂಟಿ ಪಾರ್ಲರ್, ಸೆಲೂನ್ ಗಳು, ಸ್ಪಾಗಳು ತೆರೆಯುವಂತಿಲ್ಲ. ಇನ್ನು ಹೊಟೇಲ್ ಗಳನ್ನು ತೆರೆಯಬಹುದಾಗಿದ್ದರೂ ಗ್ರಾಹಕರಿಗೆ ಟೇಬಲ್ ಸರ್ವಿಸ್ ಕೊಡುವಂತಿಲ್ಲ, ಪಾರ್ಸೆಲ್ ಸರ್ವಿಸ್ ಗಳನ್ನು ಮಾತ್ರವೇ ನೀಡಬೇಕಾಗಿರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ಫ್ಯಾಕ್ಟರಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಕಟ್ಟಡ, ಮನೆ ನಿರ್ಮಾಣ ಚಟುವಟಿಕೆಗಳಿಗೂ ಸಹ ಅವಕಾಶ ನೀಡಲಾಗಿದೆ. ಇನ್ನು ಕೃಷಿ, ಹೈನುಗಾರಿಕೆ ಚಟುವಟಿಕೆಗಳಿಗೆ ಅವಕಾಶವನ್ನು ನೀಡಲಾಗಿದೆ. ಹಾಗೆಯೇ ಜಿಲ್ಲೆಯಲ್ಲಿ ಮರಳುಗಾರಿಕೆ ಹಾಗೂ ಕ್ರಷರ್ ಚಟುವಟಿಕೆಗಳನ್ನು ಸಹ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
ಆದರೆ ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಮೇ 3ನೇ ತಾರೀಖಿನವರೆಗೆ ಕಟ್ಟುನಿಟ್ಟಾಗಿಯೇ ಜಾರಿಯಲ್ಲಿರಲಿದೆ. ಕೆಲಸ ಕಾರ್ಯಗಳಿಗೆ ಓಡಾಟ ನಡೆಸುವವರು ತಮಗೆ ಸಂಬಂಧಿಸಿದ ಸಂಸ್ಥೆಗಳಿಂದ ಪಾಸ್ ಪಡೆದುಕೊಂಡು ಓಡಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.
ಮತ್ತೆ ಈಗಾಗಲೇ ತಿಳಿಸಿರುವ ಅಂಗಡಿಗಳು ಬೆಳಿಗ್ಗೆ 7ರಿಂದ 11 ಗಂಟೆಯವರಗೆ ಮಾತ್ರವೇ ತೆರೆದಿರುವುದು ಈ ಮೊದಲಿನ ಸೂಚನೆಯಂತೆಯೇ ಮುಂದುವರಿಯಲಿದೆ. ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಗೊಳಿಸಲಾಗಿಲ್ಲ ಹಾಗಾಗಿ ಆಟೋ ರಿಕ್ಷಾ ಸಹಿತ ಯಾವುದೇ ರೀತಿಯ ಸಾರ್ವಜನಿಕ ವಾಹನಗಳ ಓಡಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದ್ದಾರೆ.