Advertisement

ಉಡುಪಿ ಜಿಲ್ಲಾಸ್ಪತ್ರೆ 80-90 ಜಂಬೋ ಸಿಲಿಂಡರ್‌ ಮೀಸಲು, 25 ಹೆಚ್ಚುವರಿ ಬೆಡ್‌

01:42 AM May 06, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಿಸುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಬೇಡಿಕೆ ಆಧಾರದ ಮೇಲೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ನ 80-90 ಜಂಬೋ ಸಿಲಿಂಡರ್‌ ದಾಸ್ತಾನು ಇರಿಸಿಕೊಂಡಿದ್ದೇವೆ. ಇದು ಒಂದು ವಾರಕ್ಕೆ ಸಾಕಾಗುತ್ತದೆ ಎಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ತಿಳಿಸಿದ್ದಾರೆ.

Advertisement

ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀಟರ್‌ನ ಆಕ್ಸಿಜನ್‌ ಘಟಕವಿದ್ದು, 2,500 ಲೀ. ಆಕ್ಸಿಜನ್‌ ದಾಸ್ತಾನಿದೆ. ಪ್ರತಿದಿನವೂ 400ರಿಂದ 500 ಲೀ. ಬೇಕಾಗುತ್ತದೆ. ಲಿಕ್ವಿಡ್‌ ಆಕ್ಸಿಜನ್‌ ಘಟಕದಲ್ಲಿ ದಾಸ್ತಾನು ಖಾಲಿಯಾದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ  ಎಂದರು.

ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಬೆಡ್‌ಗಳ ಜತೆಗೆ ಹೆಚ್ಚುವರಿಯಾಗಿ 25 ಬೆಡ್‌ ವ್ಯವಸ್ಥೆ ಆಗಿದ್ದು, ಬಳಕೆಗೆ ಲಭ್ಯವಿವೆ. ಹೆಚ್ಚಿನ ಸೋಂಕಿತರು ಬೆಡ್‌ಗೆ ಬೇಡಿಕೆ ಇಡುತ್ತಿದ್ದಾರೆ. ಮುಂದೆ ಇನ್ನಷ್ಟು ಬೇಕಾಗಬಹುದು ಎಂದು ಮಾಹಿತಿ ನೀಡಿದರು.

ಆಕ್ಸಿಜನ್‌ ಉತ್ಪಾದನಾ ಘಟಕ :

ರಾಜ್ಯವ್ಯಾಪಿ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್‌ನ ಅಭಾವ ಎದುರಾಗುತ್ತಿದ್ದು, ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಥಮ ಆಕ್ಸಿಜನ್‌ ಉತ್ಪನ್ನ ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಬೆಳಪುವಿನಲ್ಲಿರುವ ಘಟಕವು ಆಕ್ಸಿಜನ್‌ ಮರುಪೂರಣ ಕೇಂದ್ರವಾಗಿದ್ದು ಆಕ್ಸಿಜನ್‌ ಅನ್ನು ಬಳ್ಳಾರಿ ಸಹಿತ ಹೊರಗಡೆಯಿಂದ ತರಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಸಮೀಪದಲ್ಲಿ ಶೀಘ್ರವೇ ಆಕ್ಸಿಜನ್‌ ಉತ್ಪಾದನಾ ಘಟಕ ನಿರ್ಮಾಣವಾಗಲಿದೆ ಎಂದರು.ಘಿ

Advertisement

ಕೋವಿಡ್‌ ಕೇರ್‌ ಸೆಂಟರ್‌ ಸಿದ್ಧ :

ಉಡುಪಿ: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.

ಕೇರ್‌ ಸೆಂಟರ್‌ಗಳಲ್ಲಿ ಗಂಭೀರವಲ್ಲದ, ಆದರೆ ಮನೆಗಳಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದ ಸೋಂಕಿತರನ್ನು ಮಾತ್ರ ಸೇರಿಸಲಾಗುತ್ತದೆ. ಪಾಸಿಟಿವ್‌ ಬಂದಲ್ಲಿ ಅವರಿಗೆ ಹೋಂ ಐಸೊಲೇಶನ್‌ ಆಗಬಹುದೋ? ಅಲ್ಲಿ ನಿಗಾ ವಹಿಸಲು ಏನಾದರೂ ಸಮಸ್ಯೆಗಳಿವೆಯೋ ಎಂಬುದನ್ನು ಸ್ಥಳೀಯ ವೈದ್ಯಾಧಿಕಾರಿಗಳು ನೋಡಿ ಇಂತಹವರಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ವ್ಯವಸ್ಥೆಗೊಳಿಸುತ್ತಾರೆ. ಸೆಂಟರ್‌ಗಳಲ್ಲಿ ವೈದ್ಯರು, ನರ್ಸ್‌, ಡಿ ಗ್ರೂಪ್‌ ನೌಕರರು ದಿನದ 24 ಗಂಟೆಯೂ ಇರುತ್ತಾರೆ.

ಕುಂದಾಪುರದಲ್ಲಿ ಹಳೆಯ ಆದರ್ಶ ಆಸ್ಪತ್ರೆ ಮತ್ತು ದೇವರಾಜ ಅರಸು ಹಾಸ್ಟೆಲನ್ನು ವ್ಯವಸ್ಥೆಗೊಳಿಸಲಾಗಿದೆ. ಬ್ರಹ್ಮಾವರ, ಹೆಬ್ರಿ, ನಿಟ್ಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೇರ್‌ ಸೆಂಟರ್‌ ಆಗಿ ಪರಿಗಣಿಸುವ ಚಿಂತನೆ ಇದೆ. ಕಾರ್ಕಳದ ಮಿಯಾರಿನಲ್ಲಿ ಸ್ಥಳ ಗುರುತಿಸಲಾಗಿದೆ. ಬ್ರಹ್ಮಾವರದಲ್ಲಿ ಎಸ್‌ಎಂಎಸ್‌ ಸಂಸ್ಥೆಯ ಹಾಸ್ಟೆಲನ್ನು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ಉಡುಪಿಯಲ್ಲಿ ಅಜ್ಜರಕಾಡಿನ ಎಎನ್‌ಎಂ ಹಾಸ್ಟೆಲ್‌ ಮತ್ತು ಮಣಿಪಾಲದ ಎಂಐಟಿಯ ಹಾಸ್ಟೆಲ್‌ನ್ನು ಕೇರ್‌ ಸೆಂಟರ್‌ ಆಗಿ ಪರಿಗಣಿಸಲು ಚಿಂತನೆ ನಡೆದಿದೆ. ಸೋಂಕಿತರು ಹೆಚ್ಚಾದಂತೆ ಸಿದ್ಧಗೊಂಡ ಈ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next