Advertisement

ಉಡುಪಿ ಜಿಲ್ಲಾ ಭಾಗದ ಅಪರಾಧ ಸುದ್ದಿಗಳು

12:55 AM Jul 30, 2022 | Team Udayavani |

ಅಪಘಾತ: ವಿದ್ಯಾರ್ಥಿ ಸಾವು
ಕಾರ್ಕಳ: ಕಾರ್ಕಳ ತಾ|ನ ಸಾಣೂರು ಸಮೀಪದ ಮುರತ್ತಂಗಡಿ ಎನ್ನುವಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಸಾಣೂರಿನ ಮೆನನ್‌ (19) ಮೃತಪಟ್ಟಿದ್ದಾನೆ.

Advertisement

ಸಂಜೆ ಕಾಲೇಜಿನಿಂದ ಪರೀಕ್ಷೆ ಮುಗಿಸಿ ಕಾರ್ಕಳ ಕಡೆಯಿಂದ ಬೆಳುವಾಯಿ ಕಡೆಯ ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಾಲಿನ ಪಿಕಪ್‌ ವಾಹನ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೆನನ್‌ ರಸ್ತೆಗೆ ಎಸೆಯಲ್ಪಟ್ಟಿದ್ದು, ಆತನ ಮೇಲೆ ಟಿಪ್ಪರ್‌ ಹರಿದಿದೆ. ಈತನ ತಂದೆ 4 ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಅಗ್ನಿಪಥ್‌ಗೆ ಅರ್ಜಿ ಸಲ್ಲಿಸಿದ್ದ
ಮೆನನ್‌ ಪಠ್ಯದ ಜತೆಗೆ ಪಠ್ಯೇತರ ಚಟುವಟಕೆಯಲ್ಲೂ ಮುಂದಿದ್ದ. ಎನ್‌ಸಿಸಿ ಘಟಕದಲ್ಲಿ ಗುರುತಿಸಿಕೊಂಡಿದ್ದ. ಹವ್ಯಾಸಿ ಛಾಯಾಚಿತ್ರಗ್ರಾಹಕ ಕೂಡ ಆಗಿದ್ದ. ಸೈನಿಕನಾಗುವ ಆಸೆ ಹೊಂದಿದ್ದ ಆತ ಅಗ್ನಿಪಥ್‌ ಯೋಜನೆಯ ಹುದ್ದೆಗೆ ಅರ್ಜಿ ಸಲ್ಲಿಸಿದ್ದ.

ಸಾಸ್ತಾನ: ಯುವಕ ಆತ್ಮಹತ್ಯೆ
ಕೋಟ: ಬ್ರಹ್ಮಾವರ ಸಮೀಪ ಚಾಂತಾರು ನಿವಾಸಿ ರಂಜನ್‌ ಜಿ. (33) ಸಾಸ್ತಾನ ಸಮೀಪದ ಚೆಲ್ಲೆಮಕ್ಕಿ ಮನೆಯಲ್ಲಿ ಜು. 29ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಫ್ಟ್ವೇರ್‌ ಇನ್‌ಸ್ಟಾಲ್‌ ಮಾಡುವ ಕೆಲಸ ಮಾಡಿಕೊಂಡಿದ್ದ ಅವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ತಾಯಿ, ಪತ್ನಿ ಮತ್ತು ಹತ್ತು ದಿನದ ಪುಟ್ಟ ಪುತ್ರನನ್ನು ಅಗಲಿದ್ದಾರೆ.

ನಿದ್ದೆ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಸಿದ್ದಾಪುರ: ಮಾನಸಿಕ ಅಸ್ವಸ್ಥತೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕೊಡ್ಲಾಡಿ ಗ್ರಾಮದ ಕೆಳ ಬಾಂಡ್ಯ ಸಸಿಹಿತ್ಲು ನಿವಾಸಿ ಗುಂಡು ಪೂಜಾರಿ (51) ಅವರು ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚಿಕಿತ್ಸೆ ಫಲಕಾರಿಯಾಗದೆ ಜು. 28ರಂದು ಮೃತಪಟ್ಟರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೆಡಿಕಲ್‌ ವಿದ್ಯಾರ್ಥಿ ನಾಪತ್ತೆ
ಉಡುಪಿ: ಮಣಿಪಾಲದಲ್ಲಿ ವ್ಯಾಸಂಗ ಮಾಡಿಕೊಂಡಿದ್ದ ಬಿಹಾರ ಮೂಲದ ಮೆಡಿಕಲ್‌ ವಿದ್ಯಾರ್ಥಿ ಅಭಯ್‌ ಕುಮಾರ್‌ (26) ನಾಪತ್ತೆಯಾಗಿದ್ದಾರೆ. ಆತ ಜು. 27ರಂದು ಹಾಸ್ಟೆಲ್‌ನಿಂದ ಹೊರಗಡೆ ಹೋದಾತ ವಾಪಸು ಬಂದಿಲ್ಲ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಬಾಲಕ ಗಂಭೀರ
ಬ್ರಹ್ಮಾವರ: ಕರ್ಜೆ ಶಾಲೆ ಬಳಿ ಗುರುವಾರ ಸಂಭವಿಸಿದ ಅಪಘಾತದಲ್ಲಿ 2ನೇ ತರಗತಿ ವಿದ್ಯಾರ್ಥಿ ಕೌಶಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಆಟವಾಡಿಸಲು ಶಾಲೆ ಎದುರಿನ ಮೈದಾನಕ್ಕೆ ಕರೆದೊಯ್ಯುವಾಗ ಬ್ರಹ್ಮಾವರ ಹೆಬ್ರಿ ರಸ್ತೆ ದಾಟಲು ನಿಂತಿದ್ದ ಸಂದರ್ಭ ಬೈಕ್‌ ಢಿಕ್ಕಿ ಹೊಡೆದಿದೆ. ಬಾಲಕನತಲೆ ಹಾಗೂ ಮೈಗೆ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ ಕಳವು
ಉಡುಪಿ: ಕುಂಜಿಬೆಟ್ಟುವಿನ ಅರುಣ್‌ ಪ್ರಭು ಅವರು ತನ್ನ ಮನೆಯ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಟಿವಿಎಸ್‌ ಜುಪಿಟರ್‌ಸ್ಕೂಟರ್‌ ನಿಲ್ಲಿಸಿದ್ದರು. ಜು. 27ರಿಂದ 28ರ ನಡುವೆ ಕಳ್ಳರು ಸ್ಕೂಟರ್‌ ಕಳವು ಮಾಡಿದ್ದಾರೆ. ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ 35,000 ರೂ. ಆಗಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉರಗತಜ್ಞನಿಗೆ ನಾಗರ ಹಾವು ಕಡಿತ
ಕಾರ್ಕಳ: ಗುಡ್ಡೆಯಂಗಡಿಯ ಉರಗತಜ್ಞ ಅನಿಲ್‌ ಪ್ರಭು ಅವರಿಗೆ ನಾಗರ ಹಾವು ಕಡಿದಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜು. 27ರಂದು ಮನೆಯಲ್ಲಿ ಹಾವಿನ ಆರೈಕೆ ಮಾಡುತ್ತಿದ್ದಾಗ ಅವರಿಗೆ ನಾಗರ ಹಾವು ಕಡಿದಿತ್ತು. ಈ ಹಿಂದೆ ಅವರಿಗೆ 6 ಬಾರಿ ಹಾವು ಕಡಿದಿತ್ತು. ಆ ಸಂದರ್ಭ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಹಂಪ್ಸ್‌ ದಾಟುವಾಗ ಬಿದ್ದ ಸ್ಕೂಟರ್‌: ಸಾವು
ಮಂಗಳೂರು: ರಸ್ತೆಯ ಉಬ್ಬು (ಹಂಪ್ಸ್‌) ದಾಟುವ ವೇಳೆಯಲ್ಲಿ ಸ್ಕೂಟರ್‌ ಹಾರಿ ಬಿದ್ದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ಫ‌ಳ್ನೀರ್‌ನಲ್ಲಿ ಸಂಭವಿಸಿದೆ.

ಶಕ್ತಿನಗರ ನಿವಾಸಿ ಮುತ್ತುರಾಜ್‌ (20) ಮೃತಪಟ್ಟವರು. ಅವರು ತನ್ನ ಗೆಳೆಯ ಶಂಕರಪ್ಪ ಅವರೊಂದಿಗೆ ಸ್ಕೂಟರ್‌ನಲ್ಲಿ ಪಂಪ್‌ವೆಲ್‌ ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.

ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಮುತ್ತುರಾಜ್‌ ಮೃತಪಟ್ಟಿದ್ದಾರೆ. ಶಂಕರಪ್ಪ ಗಾಯಗೊಂಡಿದ್ದಾರೆ. ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next