Advertisement

Udupi District: ಐದೇ ತಿಂಗಳಲ್ಲಿ 769 ಅಗ್ನಿ ಅವಘಡ

03:08 PM Jun 02, 2023 | Team Udayavani |

ಉಡುಪಿ: ಬಿರುಬಿಸಿಲಿಗೆ ಅಗ್ನಿ ಅವಘಡಗಳೂ ಹೆಚ್ಚಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ಇದುವರೆಗೆ ಒಟ್ಟು 769 ಅಗ್ನಿ ಅವಘಡಗಳು ಸಂಭವಿಸಿವೆ.

Advertisement

ಶಾರ್ಟ್ ಸರ್ಕ್ಯೂಟ್, ಗದ್ದೆಯಲ್ಲಿ ಆಕಸ್ಮಿಕ ಬೆಂಕಿ ಸಹಿತ ಸಣ್ಣಪುಟ್ಟ ಪ್ರಕರಣಗಳು ಅನೇಕ ಘಟಿಸುತ್ತಿವೆ. ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್‌ ಸಕ್ಯೂಟ್‌ ನಡೆದು ಬೆಂಕಿ ಹೊತ್ತಿದ ಘಟನೆಯೂ ನಗರದಲ್ಲಿ ನಡೆದಿತ್ತು. ಆಕಸ್ಮಿಕ ಘಟನೆಗಳಾದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಉಡುಪಿಯಲ್ಲಿ ಅಧಿಕ ಬೆಂಕಿ ಅವಘಡ
ಈ ವರ್ಷದಲ್ಲಿ ಗರಿಷ್ಠ ಅಂದರೆ ಉಡುಪಿ ಭಾಗದಲ್ಲಿ ಒಟ್ಟು 286 ಬೆಂಕಿ ಅವಘಡಗಳು ಉಂಟಾಗಿವೆ. ಉಳಿದಂತೆ ಕಾರ್ಕಳ, ಕುಂದಾಪುರದಲ್ಲಿ ಗರಿಷ್ಠ ಬೆಂಕಿ ಅವಘಡಗಳು ಉಂಟಾಗಿವೆ. ನಗರ ಭಾಗದಲ್ಲಿ ಜನಸಂದಣಿ, ವಾಹನದಟ್ಟಣೆ ಇರುವುದರಿಂದ ಕಾರ್ಯಾಚರಣೆಗೂ ತೊಡಗು ಉಂಟಾಗುತ್ತವೆ. ಇತ್ತೀಚೆಗಷ್ಟೇ ಇಂದ್ರಾಳಿಯ ರೈಲ್ವೇ ಗೋಡೌನ್‌ ಬಳಿ ಬೆಂಕಿ ಅನಾಹುತ ಸಂಭವಿಸಿದಾಗ ಕಲ್ಸಂಕ ಬಳಿ ಉಂಟಾದ ಟ್ರಾಫಿಕ್‌ ದಟ್ಟಣೆಯನ್ನು ದಾಟಿ ಹೋಗುವುದೇ ಅಗ್ನಿಶಾಮಕ ದಳದ ವಾಹನಕ್ಕೆ ಸವಾಲಾಗಿತ್ತು. ಕಾರ್ಕಳದಂತಹ ಗ್ರಾಮೀಣ ಭಾಗದಲ್ಲಿ ಮರಗಿಡಗಳು, ಪೊದೆಗಳು ಇರುವುದರಿಂದ ಸಣ್ಣ ಕಿಡಿ ಬಿದ್ದರೂ ಬೆಂಕಿ ಆವರಿಸುವ ಘಟನೆಗಳು ಸಂಭವಿಸುತ್ತಿವೆ.

ಹೆಚ್ಚುವರಿ ಠಾಣೆ ಬೇಡಿಕೆ
ಮಣಿಪಾಲ ಸೇರಿದಂತೆ, ಕಾಪು, ಬ್ರಹ್ಮಾವರ, ಹೆಬ್ರಿ ಭಾಗಗಳಿಗೆ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದಲೂ ಚಾಲ್ತಿ ಯಲ್ಲಿದೆ. ಬೃಹತ್‌ ಪ್ರಮಾಣದ ಕೈಗಾರಿಕೆಗಳು, ಕಾಡುಗಳು ಇರುವಂತಹ ಪ್ರದೇಶದಲ್ಲಿ ಯಾವಾಗ ಅಗ್ನಿ ಅವಘಡ ಸಂಭವಿಸುತ್ತದೆ ಎಂದು ಹೇಳುವುದು ಕಷ್ಟ. ನಗರದ ಮಧ್ಯಭಾಗ ಹಾಗೂ ಇಕ್ಕಟ್ಟಿನ ಸ್ಥಳಗಳಲ್ಲಿ ಅವಘಡ ಸಂಭವಿಸಿ ದರೆ ಅಗ್ನಿಶಾಮಕ ವಾಹನಗಳು ಬರಲೂ ಕಷ್ಟಕರ ವಾಗುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಬೇಡಿಕೆ ಇರುವಲ್ಲಿ ಅಗ್ನಿಶಾಮಕ ಠಾಣೆ ಒದಗಿ ಸುವ ಬಗ್ಗೆ ಸರಕಾರ ಗಮನಹರಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಎಚ್ಚರ ಅಗತ್ಯ
ಬೀಡಿ, ಸಿಗರೇಟುಗಳನ್ನು ಸೇದಿ ಎಲ್ಲೆಂದರಲ್ಲಿ ಬಿಸಾಡುವುದು ಹಾಗೂ ಬಿಸಿಲಿದೆ ಎಂಬ ಕಾರಣಕ್ಕೆ ಹುಲ್ಲುಗಳಿಗೆ ಬೆಂಕಿ ಹಚ್ಚುವ ಮುನ್ನ ಆಗುವ ಅನಾಹುತಗಳ ಬಗ್ಗೆಯೂ ಗಮನ ಹರಿಸುವ ಅಗತ್ಯವಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಹುಲ್ಲಿಗೆ ಬೆಂಕಿ ಹಚ್ಚಿ ಅದು ವ್ಯಾಪಕವಾಗಿ ಹಬ್ಬುವ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ. ಈ ಬಗ್ಗೆ ಸಾರ್ವಜನಿಕರು ಮತ್ತಷ್ಟು ಎಚ್ಚರ ವಹಿಸಿ ಸೂಕ್ತ ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ಅಗ್ನಿಶಾಮಕ ದಳದ ಸಿಬಂದಿ.

Advertisement

ಕ್ಷಣಾರ್ಧದಲ್ಲಿ ನೆರವು
ಅಗ್ನಿ ಅವಘಡಗಳ ಬಗ್ಗೆ ದೂರುಗಳು ಬಂದಲ್ಲಿ ಕ್ಷಣಾರ್ಧದಲ್ಲಿ ಸಿಬಂದಿ ರಕ್ಷಣ ಸಾಧನಗಳೊಂದಿಗೆ ತೆರಳಿ ಬೆಂಕಿ ನಂದಿಸಲು ಸಹಕರಿಸುತ್ತಾರೆ. ಹೆಚ್ಚುವರಿ ಅಗ್ನಿಶಾಮಕ ಠಾಣೆ ಅಗತ್ಯತೆಯ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
-ವಸಂತ ಕುಮಾರ್‌,
ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next