Advertisement

ಉಡುಪಿ: ದೀಪಾವಳಿ, ಗೋಪೂಜೆ ಸಂಭ್ರಮ; ದೇಗುಲಗಳಲ್ಲಿ ವಿಶೇಷ ಅಲಂಕಾರ ಪೂಜೆ 

09:31 PM Nov 15, 2020 | mahesh |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಜನ ಸಂಭ್ರಮ – ಸಡಗರದಿಂದ ಆಚರಿಸಲಾಯಿತು. ಕೊರೊನಾದಿಂದ ಕಳೆಗುಂದಿದ್ದ ಜನರಲ್ಲಿ ದೀಪಾವಳಿ ನವೋಲ್ಲಾಸ ತಂದಿದ್ದು, ನಗರದೆಲ್ಲೆಡೆ ರವಿವಾರ ಲಕ್ಷ್ಮೀ ಪೂಜೆ ಆಚರಿಸಿದರು.

Advertisement

ಹಬ್ಬದ ಪ್ರಯುಕ್ತ ವಿವಿಧ ದೇವಸ್ಥಾನ ಗಳಲ್ಲಿಯೂ ದೇವರಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸ ಲಾಯಿತು. ಇದಲ್ಲದೆ ಹಲವೆಡೆಗಳಲ್ಲಿ ರವಿವಾರವೂ ಅಂಗಡಿ, ವ್ಯಾಪಾರ ಮಳಿಗೆ, ಕಚೇರಿಗಳಲ್ಲಿ ಲಕ್ಷ್ಮೀಪೂಜೆ, ವಾಹನಗಳಿಗೆ ಪೂಜೆ ನೆರವೇರಿತು.

ಖರೀದಿ ಭರಾಟೆ ಮುಂದುವರಿಕೆ
ರವಿವಾರ ರಜಾದಿನವಾದ ಕಾರಣ ಹಾಗೂ ಸೋಮವಾರ ಸಂಕ್ರಮಣ ಇರುವುದರಿಂದ ನಗರದೆಲ್ಲೆಡೆ ಹೂ- ಹಣ್ಣುಗಳ ಮಾರಾಟ ಜೋರಾಗಿತ್ತು. ಪಟಾಕಿ ಅಂಗಡಿಗಳಲ್ಲಿಯೂ ಶನಿವಾರ ಉತ್ತಮ ವ್ಯಾಪಾರವಿತ್ತು. ದ.ಕ.ದಲ್ಲಿ ರವಿವಾರ ದೀಪಾವಳಿ ಹಬ್ಬವಿರುವುದರಿಂದ ಹೆಚ್ಚಿನ ವ್ಯಾಪಾರಿಗಳು ನೆರೆಜಿಲ್ಲೆಗೆ ತೆರಳಿದ್ದರು.

ಗೋಪೂಜೆ ಆಚರಣೆ
ನಾಡಿನ ವಿವಿಧ ಮಠ ಮಂದಿರ, ಮನೆಗಳು, ಗೋಶಾಲೆಗಳಲ್ಲಿ ರವಿವಾರ ಗೋಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ಸ್ನಾನ ಮಾಡಿಸಿ ಮುದ್ರೆಗಳೊಂದಿಗೆ ಅಲಂಕಾರ ಮಾಡಿ ತಿನಿಸುಗಳನ್ನು ನೀಡಿದರು. ಗ್ರಾಮೀಣ ಭಾಗದಲ್ಲಿ ಕೆರೆಯಲ್ಲಿ ಬೆಳೆಯುವ ಹೂವಿನ ಹಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಶ್ರೀಕೃಷ್ಣಮಠ
ಶ್ರೀಕೃಷ್ಣಮಠದಲ್ಲಿ ಗೋಪೂಜೆ ನಿಮಿತ್ತ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಗೋಪಾಲಕೃಷ್ಣ ಅಲಂಕಾರವನ್ನು ನಡೆಸಿದ ಬಳಿಕ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾ ಪೂಜೆ ಸಲ್ಲಿಸಿದರು. ಗೋಶಾಲೆಯ ದನಗಳನ್ನು ವಾದ್ಯ ಘೋಷ, ಸಹಿತ ರಥಬೀದಿಯಲ್ಲಿ ಮೆರ ವಣಿಗೆ ಮಾಡಿದ ಬಳಿಕ ಕನಕನ ಕಿಂಡಿಯ ಹೊರಗೆ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Advertisement

ಅದಮಾರು ಮಠ
ಅದಮಾರು ಮಠದ ಗೋಶಾಲೆಯಲ್ಲಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ದನಗಳಿಗೆ ತಿನಿಸು ನೀಡಿದ ಶ್ರೀಪಾದರು ಮಂಗಳಾರತಿ ಬೆಳಗಿದರು. ಮಠದ ವ್ಯವಸ್ಥಾಪಕ ರಾಘವೇಂದ್ರ ಭಟ್‌, ವಿದ್ವಾಂಸ ವಂಶಿ ಕೃಷ್ಣಾಚಾರ್ಯ, ಜನಾರ್ದನ ಕೊಟ್ಟಾರಿ ಪಾಲ್ಗೊಂಡಿದ್ದರು.

ಪಲಿಮಾರು ಮಠ
ಪಲಿಮಾರು ಮಠದಲ್ಲಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಗೋವುಗಳಿಗೆ ಪೂಜೆ ಸಲ್ಲಿಸಿದರು.

ನೀಲಾವರ ಗೋಶಾಲೆ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನಡೆಸುತ್ತಿರುವ ನೀಲಾವರದ ಗೋಶಾಲೆಯಲ್ಲಿ ಅನಾಥ ಗೋವುಗಳಿಗೆ ಶ್ರೀಪಾದರು ಪೂಜೆ ಸಲ್ಲಿಸಿದರು.

ಕೆ.ರಘುಪತಿ ಭಟ್‌
ಉಡುಪಿ: ಶಾಸಕ ಕೆ. ರಘುಪತಿ ಭಟ್‌ ಅವರಿಂದ ಕರಂಬಳ್ಳಿಯಲ್ಲಿರುವ ಮನೆಯಲ್ಲಿ ಗೋಪೂಜೆ ನಡೆಯಿತು. ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಪ್ರಮೋದ್‌ ಮಧ್ವರಾಜ್‌
ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮನೆಯ ಗೋಶಾಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಪೂಜೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next