Advertisement

11ಇ ನಕ್ಷೆ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಅಭಿಯಾನ: “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’

11:37 PM Jun 18, 2022 | Team Udayavani |

ಬ್ರಹ್ಮಾವರ: ಜಿಲ್ಲೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಆರ್‌ಟಿಸಿ ತಿದ್ದುಪಡಿಯಾಗದೆ 11ಇ ನಕ್ಷೆ ಅರ್ಜಿಗಳು ಸಾಕಷ್ಟು ಸಂಖ್ಯೆ ಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಇದರ ವಿಲೇವಾರಿ ಮಾಡಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ಎಂ. ರಾವ್‌ ತಿಳಿಸಿದರು.

Advertisement

ಚೇರ್ಕಾಡಿ ಗ್ರಾಮ ಪೇತ್ರಿ ಯುವಕ ಮಂಡಲದಲ್ಲಿ ಶನಿವಾರ ಜರಗಿದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

11ಇ ನಕ್ಷೆಯಾಗದೆ ಹಲವಾರು ಕಾರಣಗಳಿಂದ ಸಾರ್ವಜನಿಕರಿಗೆ ಅಗತ್ಯವಾಗಿದೆ. ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಇದರೊಂದಿಗೆ ಪೌತಿ ಖಾತೆ, ಜನನ, ಮರಣ ಪ್ರಮಾಣ ಪತ್ರಗಳ ಸಮಸ್ಯೆಗಳಿದ್ದಲ್ಲಿ ಅದನ್ನೂ ವಿಲೇವಾರಿ ಮಾಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಬೇಕಾದ ಪೂರ್ವ ತಯಾರಿಗಳು ಈಗಾಗಲೆ ನಡೆದಿದೆ ಎಂದರು.

ಅಧಿಕಾರಿಗಳು, ಜನಪ್ರತಿನಿಧಿಗಳು, ಸಿಬಂದಿ ಸಂಕಲ್ಪ ಕೈಗೊಂಡು ಜನರ ಬಾಗಿಲಿಗೆ ಬಂದಿದ್ದೇವೆ. ಯಾವ ಇಲಾಖೆ ಸಂಬಂಧಿಸಿದ್ದ ಸಮಸ್ಯೆಗಳಿದ್ದರೂ ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

Advertisement

ತಂಡವಾಗಿ ಕಾರ್ಯನಿರ್ವಹಿಸಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್‌, ಗ್ರಾಮಗಳ ಅಭಿವೃದ್ಧಿಗೆ ಉತ್ತಮ ರಸ್ತೆಗಳು ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೊಂಡ ರಸ್ತೆಗಳಿಗೆ ತಡೆ ಮಾಡುವುದು, ರಸ್ತೆಯಲ್ಲಿ ಓಡಾಟಕ್ಕೆ ಅಡ್ಡಿಪಡಿಸುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದಕ್ಕೆ ಜಿಲ್ಲಾಡಳಿತ, ಜಿ.ಪಂ. ಸೂಕ್ತ ಕಾನೂನು ರೂಪಿಸಿ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಜನರ ಸಮಸ್ಯೆಗೆ ಸ್ಪಂದಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ತಂಡವಾಗಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಚೇರ್ಕಾಡಿ ಗ್ರಾ.ಪಂ. ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್‌, ಕುಂದಾಪುರ ಎಸಿ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಡಿಎಚ್‌ಒ ಡಾ| ನಾಗಭೂಷಣ ಉಡುಪ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ರವೀಂದ್ರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಕೆಂಪೇಗೌಡ, ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ| ಶಂಕರ್‌ ಶೆಟ್ಟಿ, ಡಿಎಫ್ಒ ಆಶೀಶ್‌ ರೆಡ್ಡಿ, ಆಹಾರ ಇಲಾಖೆ ಉಪ ನಿರ್ದೇಶಕ ಮೊಹಮ್ಮದ್‌ ಇಸಾಕ್‌, ಡಿಡಿಪಿಐ ಗೋವಿಂದ ಮಡಿವಾಳ, ಬ್ರಹ್ಮಾವರ ತಾ.ಪಂ. ಇಒ ಎಚ್‌. ಇಬ್ರಾಹಿಂಪುರ, ಬಿಇ ಒ ಬಿ.ಟಿ. ನಾಯ್ಕ ಉಪಸ್ಥಿತರಿದ್ದರು. ತಹಶೀಲ್ದಾರ್‌ ರಾಜಶೇಖರ ಮೂರ್ತಿ ಸ್ವಾಗತಿಸಿ, ಪ್ರಸ್ತಾವಿಸಿ, ಶಿಕ್ಷಕ ಶಶಿಧರ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು.

77 ಅರ್ಜಿಗಳು ಸಲ್ಲಿಕೆ
ಕಂದಾಯ 31, ಪಂಚಾಯತ್‌ ರಾಜ್‌ 29, ಮೆಸ್ಕಾಂ 3, ಸಣ್ಣ ನೀರಾವರಿ 2 ಮತ್ತು ಆರೋಗ್ಯ, ಸಮಾಜ ಕಲ್ಯಾಣ, ಸಾರಿಗೆ, ಆಹಾರ, ಕೌಶಾಲ್ಯಾಭಿವೃದ್ಧಿ, ಐಟಿಡಿಪಿ, ಧಾರ್ಮಿಕ ದತ್ತಿ, ತೋಟಗಾರಿಕೆ ಸಹಿತ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ತಲಾ ಒಂದೊಂದು ಅರ್ಜಿ ಸಲ್ಲಿಕೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next