Advertisement

ಉಡುಪಿ: ದ್ವೀಪ ಯಾನಕ್ಕೆ ಶೀಘ್ರ ಅನುಮತಿ: ಉಡುಪಿ ಡಿಸಿ ಕೂರ್ಮಾರಾವ್‌

11:08 PM Sep 29, 2022 | Team Udayavani |

ಉಡುಪಿ: ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದಲ್ಲಿ ಹಲವು ಸುರಕ್ಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೂರಕ ಕೆಲಸಗಳು ನಡೆಯುತ್ತಿದ್ದು, ಶೀಘ್ರ ಪ್ರವಾಸಿಗರಿಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

Advertisement

ಗುರುವಾರ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಸಂವಾದದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಸೆಲ್ಫಿ ಪಾಯಿಂಟ್‌, ತಡೆಬೇಲಿ, ಸ್ವತ್ಛತೆ ಮೊದಲಾದ ಕೆಲಸಗಳು ನಡೆಯುತ್ತಿವೆ. ಪ್ರಸ್ತುತ ಸಮುದ್ರ ಪ್ರಕ್ಷುಬ್ಧವಾಗಿದ್ದು, ವಾತಾವರಣವನ್ನು ಗಮನಿಸಿಕೊಂಡು ಅನುಮತಿ ನೀಡಬೇಕಿದೆ ಎಂದರು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಾತನಾಡಿ, ಈ ಹಿಂದಿನ ಜಿಲ್ಲಾಧಿಕಾರಿಗಳು ಯೋಜಿಸಿ ಅರ್ಧಕ್ಕೆ ನಿಂತ ಯೋಜನೆಗಳ ಬಗ್ಗೆ ವಿಮರ್ಶಿಸಲಾಗುವುದು. ಪ್ರವಾಸಿ ತಾಣಗಳನ್ನು ಹೆಚ್ಚು ಪ್ರವರ್ಧಮಾನಕ್ಕೆ ತರುವ ಬಗ್ಗೆ ಬ್ಲಾಗರ್ಸ್‌ ಗಳಿಂದ ಸಲಹೆ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು. ಇದಕ್ಕಾಗಿ ಇನ್‌ಸ್ಟಾಗ್ರಾಂನಲ್ಲಿಯೂ ಖಾತೆ ತೆರೆಯಲಾಗಿದೆ ಎಂದರು.

ಅಕ್ಟೋಬರ್‌ ಅಂತ್ಯಕ್ಕೆ ಮರಳು ಲಭ್ಯ

ಜಿಲ್ಲೆಯಲ್ಲಿ ಕಲ್ಲು, ಮರಳು ಸಹಿತ ಇತರ ಯಾವುದೇ ಖನಿಜಗಳ ಅಕ್ರಮ ವ್ಯವಹಾರ ನಡೆಯದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ, ದಾಳಿ ನಡೆಸುತ್ತಿದ್ದಾರೆ. ದಂಡ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಕಂದಾಯ, ಪೊಲೀಸ್‌ ಇಲಾಖೆ ಮತ್ತು ಆರ್‌ಟಿಒ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸುವಂತೆ ಆನ್‌ಲೈನ್‌ ಎಂಟ್ರಿ ಪೋರ್ಟಲ್‌ ಜಾರಿಗೆ ತರಲಾಗುವುದು. ಈ ವರ್ಷ ಗ್ರಾ.ಪಂ. ಮಟ್ಟದಲ್ಲಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಸಾಂಪ್ರದಾಯಿಕವಾಗಿ ಮರಳು ತೆಗೆಯಬಹುದಾದ ದಿಬ್ಬಗಳನ್ನೂ ಗುರುತಿಸಿದ್ದೇವೆ. ಅಕ್ಟೋಬರ್‌ ಅಂತ್ಯಕ್ಕೆ ಜನರಿಗೆ ಮರಳು ಲಭ್ಯವಾಗಲಿದೆ ಎಂದು ಡಿಸಿ ತಿಳಿಸಿದರು.

Advertisement

ವಾರ್ತಾಧಿಕಾರಿ ಮಂಜುನಾಥ್‌, ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್‌ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಜೀರ್‌ ಪೊಲ್ಯ, ಕೋಶಾಧಿಕಾರಿ ಉಮೇಶ್‌ ಮಾರ್ಪಳ್ಳಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಿರಣ್‌ ಮಂಜನಬೈಲು ಉಪಸ್ಥಿತರಿದ್ದರು. ಚೇತನ್‌ ಮಟಪಾಡಿ ನಿರೂಪಿಸಿ, ವಂದಿಸಿದರು.

ಪ್ರಮುಖ ಅಂಶಗಳು :

  • ಹಿಂದಿನ ವರ್ಷಗಳಲ್ಲಿ ರಸ್ತೆ ವಿಸ್ತರಣೆಗಾಗಿ ಕಡಿದಿರುವ ಮರಗಳ ಸಂಖ್ಯೆ ಮತ್ತು ಎಷ್ಟು ಪ್ರಮಾಣದಲ್ಲಿ ಅರಣ್ಯವ್ನು ಬೆಳೆಸಲಾಗಿದೆ ಎಂಬ ವಾಸ್ತವ ಚಿತ್ರಣವನ್ನು ತಿಳಿಸಲಾಗುವುದು.
  • ಹೆದ್ದಾರಿಗಳಲ್ಲಿ ಮೀನಿನ ನೀರು ಚೆಲ್ಲಿಕೊಂಡು ಸಾಗುವ ಲಾರಿಗಳ ವಿರುದ್ಧ ಕಠಿನ ಕ್ರಮಕ್ಕೆ ಪೊಲೀಸ್‌, ಆರ್‌ಟಿಒಗೆ ಸೂಚನೆ.
  • ಹದಗೆಟ್ಟಿರುವ ಇಂದ್ರಾಳಿ ಸೇತುವೆ ಕಾಮಗಾರಿ ಅ. 1ರಿಂದ ನಡೆಯಲಿದೆ.
  • ಇಂದ್ರಾಳಿ ರೈಲ್ವೇ ಸೇತುವೆ ಯೋಜನೆಯ ವಿನ್ಯಾಸ ಬದಲಾವಣೆಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಅನುಮೋದನೆಗೆ ಬಾಕಿ ಇದೆ. ನಮ್ಮ ಎಂಜಿನಿಯರ್‌ಗಳು ದಿಲ್ಲಿಯಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ.
  • ಉಡುಪಿ ನಗರದ ಒಳಚರಂಡಿ ವ್ಯವಸ್ಥೆ ಹಂತಹಂತವಾಗಿ ಸುಧಾರಣೆಯತ್ತ ಸಾಗುತ್ತಿದೆ. ಮಳೆ ನೀರು ಹರಿಯುವ ನದಿ, ಕಾಲುವೆಗಳನ್ನು ಒತ್ತುವರಿ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next