Advertisement

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

06:00 PM Dec 05, 2021 | Team Udayavani |

ಉಡುಪಿ : ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತ ರವಿವಾರ ಆಯೋಜಿಸಿದ ಲಸಿಕಾ ಅಭಿಯಾನದಲ್ಲಿ ಶ್ರೀಕೃಷ್ಣಮಠದ ರಾಜಾಂಗಣ, ಬಸ್‌ ನಿಲ್ದಾಣ, ಬೀಡಿನಗುಡ್ಡೆ, ರೈಲ್ವೇ ನಿಲ್ದಾಣದಲ್ಲಿ ನಡೆಯಿತು. ಬನ್ನಂಜೆ ಅಂಬೇಡ್ಕರ್‌ ಸೌಧದಲ್ಲಿ ವಿಶೇಷ ಲಸಿಕಾ ಶಿಬಿರವನ್ನು ನಡೆಸಲಾಯಿತು. ಬೆಳಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಎಂದು ನಿಗದಿಯಾಗಿದ್ದರೂ ಮಧ್ಯಾಹ್ನದವರೆಗೂ ಮುಂದುವರಿಯಿತು.

Advertisement

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ವಿಶೇಷ ಲಸಿಕಾ ಅಭಿಯಾನದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಅವರು, ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ನಿಯಂತ್ರಣ ಕಾರ್ಯಕ್ರಮಗಳಿಗೆ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಹಾಯವಾಗಿದೆ ಎಂದರು.

ಮಠದ ವತಿಯಿಂದ ಕೋವಿಡ್‌ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿರಿಗೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಇದ್ದವರಿಗೆ ಉಚಿತ ಆಹಾರ ಒದಗಿಸಿರುವುದಲ್ಲದೆ ಜಿಲ್ಲಾಡಳಿತಕ್ಕೆ ಸುಸಜ್ಜಿತ ಆಂಬುಲೆನ್ಸ್‌ ನೀಡುವ ಮೂಲಕ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ಕೋವಿಡ್‌ ನಿಯಂತ್ರಣದಲ್ಲಿ ಅತ್ಯುತ್ತಮ ಬೆಂಬಲ ನೀಡಿದ್ದು, ಜಿಲ್ಲೆಯ ಕೋವಿಡ್‌ ಪೀಡಿತರಿಗೆ ಶ್ರೀಕೃಷ್ಣನ ಪ್ರಸಾದ ಹಾಗೂ ಸ್ವಾಮೀಜಿಗಳ ಆಶೀರ್ವಾದ ಒಟ್ಟಿಗೆ ದೊರೆತಿದೆ. ಕೋವಿಡ್‌ ಸಮುಚಿತ ವರ್ತನೆಗಳ ಪಾಲನೆ ಕುರಿತು ಶ್ರೀಗಳು ನೀಡಿದ ವೀಡಿಯೋ ಸಂದೇಶ, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಜಿಲ್ಲೆಯ ಪ್ರತಿ ಮನೆ ಮನೆಗಳಿಗೆ ತಲುಪಿದ್ದು ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಹರಡುವಿಕೆಯ ಹೆಚ್ಚಳ ತಡೆಯಲು ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ : ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ  ಭಾಸ್ಕರ ಕಾರಿಂಜರಿಗೆ ಸನ್ಮಾನ

ಜಿಲ್ಲೆಯ ವಲಸಿಗರು ಮತ್ತು ಕೂಲಿ ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಅಭಿಯಾನವನ್ನು ಆರಂಭಿಸಿದ್ದು ಶ್ರೀಕೃಷ್ಣನ ಆಶೀರ್ವಾದದಿಂದ ಶೀಘ್ರದಲ್ಲಿ ಜಿಲ್ಲೆಯಲ್ಲಿ ಶೇ.100 ಲಸಿಕೆ ಗುರಿ ಸಾಧಿಸಲು ಸಾಧ್ಯವಾಗಲಿದೆ. ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು 2 ಡೋಸ್‌ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್‌ ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಭಗವಂತನ ಸೇವೆಯನ್ನು ಪ್ರತಿಮೆ ಮತ್ತು ಸಮಾಜಸೇವೆಯ ಮೂಲಕ ಮಾಡಬಹುದು ಎಂದು ಹೇಳಿದ್ದಾನೆ. ಸಮಾಜಸೇವೆ ಮೂಲಕ ಭಗವಂತನಿಗೆ ನಾವು ತೆರಿಗೆ ನೀಡಬೇಕು. ಯಾವುದೇ ರೂಪಾಂತರಿ ವೈರಸ್‌ ಬಂದರೂ ಸಹ ಕೋವಿಡ್‌ ಸಮುಚಿತ ವರ್ತನೆಗಳನ್ನು ಪಾಲಿಸುವುದರಿಂದ ರೋಗ ಮುಕ್ತರಾಗಬಹುದು. ಕೋವಿಡ್‌ ಲಸಿಕೆ ಪಡೆಯದವರು ತಪ್ಪದೇ 2 ಡೋಸ್‌ ಲಸಿಕೆ ಪಡೆಯುವದರ ಮೂಲಕ ಜಿಲ್ಲೆಯನ್ನು ಕೋವಿಡ್‌ ಮುಕ್ತಗೊಳಿಸಬೇಕು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ಆಶೀರ್ವಚನದಲ್ಲಿ ತಿಳಿಸಿದರು.

ಪರ್ಯಾಯ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಸಮುಚಿತ ವರ್ತನೆಗಳನ್ನು ಪಾಲಿಸಬೇಕೆಂದರು. ಜಿ.ಪಂ. ಸಿಇಒ ಡಾ| ನವೀನ್‌ ಭಟ್, ಕೋವಿಡ್‌ ಲಸಿಕಾ ಅಧಿಕಾರಿ ಡಾ| ಎಂ.ಜಿ.ರಾಮ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್‌, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಹೇಮಂತ್‌, ಕಿರುತೆರೆ ನಟ ಎಂ.ಎಸ್‌. ಸೇತುರಾಂ ಮತ್ತಿತರರು ಉಪಸ್ಥಿತರಿದ್ದರು.

ಮಠದ ಮೆನೇಜರ್‌ ಗೋವಿಂದರಾಜ್‌ ಸ್ವಾಗತಿಸಿ ಕೃಷ್ಣರಾಜ ಭಟ್‌ ನಿರೂಪಿಸಿದರು. ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಪ್ರಶಾಂತ ಭಟ್ ಪ್ರಸ್ತಾವನೆಗೈದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next