Advertisement

“2 ವಾರದಲ್ಲಿ ಶೇ. 1ಕ್ಕಿಂತ ಕಡಿಮೆ ಪಾಸಿಟಿವ್‌ ಗುರಿ’

08:02 PM Sep 04, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ಪ್ರಮಾಣವನ್ನು ಎರಡು ವಾರಗಳ ಒಳಗೆ ಶೇ. 1ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕೋವಿಡ್‌ ನಿಯಂತ್ರಣಕ್ಕಾಗಿ  ರಚಿಸಲಾಗಿರುವ  ವಿವಿಧ ಕಾರ್ಯಪಡೆ ತಂಡಗಳ ಮುಖ್ಯಸ್ಥರಿಗೆ  ಜಿಲ್ಲಾಧಿಕಾರಿ  ಕೂರ್ಮಾ ರಾವ್‌ ಎಂ. ಸೂಚಿಸಿದರು.

Advertisement

ಅವರು ಶುಕ್ರವಾರ ಜಿ.ಪಂ. ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣ  ಕ್ರಮಗಳ ಅನುಷ್ಠಾನಕ್ಕೆ ರಚಿಸಿರುವ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್‌ನಿಂದ ಅಪಾಯವಿಲ್ಲ, ಇದರ ಹರಡುವಿಕೆ ಕಡಿಮೆಯಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಕಂಡುಬರುತ್ತಿದೆ. ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದಿರುವುದು ಹಾಗೂ ಮಾಸ್ಕ್ ಧರಿಸದೆ ಇರುವುದು ಎಲ್ಲೆಡೆ ಕಂಡುಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಪಾಲನೆಯಾಗದ ಸ್ಥಳಗಳಲ್ಲಿ, ಸಂಬಂಧಪಟ್ಟವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಂಡ ವಿಧಿಸಿ.  ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಗರಸಭೆ, ಪುರಸಭೆ, ಗ್ರಾ.ಪಂ. ವ್ಯಾಪ್ತಿಯಲ್ಲಿ  ಮಾಸ್ಕ್ ಜಾಗೃತಿ ಮೂಡಿಸಲು ಅಭಿಯಾನ ಆಯೋಜಿಸಿ, ದಂಡ ವಿಧಿಸಿ, ಜಿಲ್ಲೆಯಲ್ಲಿ ಕೋವಿಡ್‌ ಶೂನ್ಯ  ಪ್ರಕರಣ ಬರುವವರೆಗೂ ಎಲ್ಲ ಅಧಿಕಾರಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಯಾವುದೇ ಲೋಪಗಳಿಗೆ ಆಸ್ಪದವಾಗದಂತೆ ನಿರ್ವಹಿಸಬೇಕು ಎಂದು ಸೂಚಿಸಿದರು.

ಕೋವಿಡ್‌ ನಿಯಂತ್ರಣ ಉದ್ದೇಶದಿಂದ ವಿವಿಧ ದಾನಿಗಳು ಜಿಲ್ಲಾಡಳಿತಕ್ಕೆ ನೀಡಿರುವ ಆ್ಯಂಬುಲೆನ್ಸ್‌ ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪತ್ರಗಳಿಗೆ ಶೀಘ್ರದಲ್ಲಿ ಅನುಮತಿ  ನೀಡಿ ವಾಹನಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರುವ ಬಗ್ಗೆ ಪರಿಶೀಲಿಸಿ. ಕೇರಳದಿಂದ ಬರುವವರನ್ನು 7 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದರು.

Advertisement

ಕೊಲ್ಲೂರಿನಲ್ಲಿ ತಪಾಸಣೆ ಕೇಂದ್ರ :

ಕೊಲ್ಲೂರು ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳದಿಂದ ಪ್ರವಾಸಿಗರು ಆಗಮಿಸಲಿದ್ದು, ಅಲ್ಲಿ ಪ್ರತ್ಯೇಕ  ಕೋವಿಡ್‌ ತಪಾಸಣ  ಕೇಂದ್ರ ಆರಂಭಿಸಿ ಪರಿಶೀಲನೆ  ನಡೆಸಬೇಕು ಮತ್ತು  ಅಗತ್ಯಬಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ ತೆರೆಯಬೇಕು.  ಕೊಲ್ಲೂರು ಪ್ರವೇಶದ್ವಾರದಲ್ಲಿ ಮತ್ತು ದೇವಸ್ಥಾನದ ವೆಬ್‌ಸೈಟ್‌ನಲ್ಲಿ ಕನ್ನಡ, ಮಲಯಾಳಂ, ಇಂಗ್ಲಿಷ್‌ ಭಾಷೆಯಲ್ಲಿ ಕೇರಳದಿಂದ ಬರುವವರಿಗೆ ಆರ್‌. ಟಿ.ಪಿ.ಸಿ.ಆರ್‌.  ನೆಗೆಟಿವ್‌ ವರದಿ ಹೊಂದಿರುವ ಬಗ್ಗೆ ಮತ್ತು ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಿರುವ ಬಗ್ಗೆ  ಮಾಹಿತಿ  ಅಳವಡಿಸಿ ಎಂದರು.

ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 9,000ಕ್ಕೂ ಅಧಿಕ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕು.  ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ವರ್ಗಾಯಿಸುವ ಪ್ರಮಾಣವನ್ನು ಹೆಚ್ಚು ಮಾಡಿ  ಈ ಕಾರ್ಯಕ್ಕೆ ಅಗತ್ಯವಿದ್ದಲ್ಲಿ ಪೊಲೀಸ್‌ ಸಹಕಾರ ಪಡೆಯುವಂತೆ ತಿಳಿಸಿದ ಜಿ.ಪಂ. ಸಿಇಒ ಡಾ| ವೈ. ನವೀನ್‌ ಭಟ್‌ ಕಂಟೈನ್ಮೆಂಟ್‌ ಝೋನ್‌ ರಚಿಸುವಂತೆ ಹೇಳಿದರು.

ಎಸ್ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಕೋವಿಡ್‌ ನಿಯಂತ್ರಣ ಅನುಷ್ಠಾನದ ವಿವಿಧ ಅಧಿಕಾರಿಗಳ ತಂಡದ ಮುಖ್ಯಸ್ಥರು ಉಪಸ್ಥಿತರಿದ್ದರು.

 ಶೇ. 100 ಲಸಿಕೀಕರಣ ಗುರಿ :

ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮ ಉತ್ತಮವಾಗಿದ್ದು,ಈಗಾಗಲೇ ಒಟ್ಟು  ಶೇ. 79 ರಷ್ಟು ಲಸಿಕೆ ನೀಡಿದ್ದು, ಈ   ಕಾರ್ಯಕ್ರಮಕ್ಕೆ ಇನ್ನಷ್ಟು ವೇಗ ನೀಡಿ ಜಿಲ್ಲೆಯಲ್ಲಿ ಶೇ. 100 ಗುರಿ ಸಾಧಿಸಬೇಕು. ಜನಪ್ರತಿನಿಧಿಗಳು,  ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಪಡೆದು, ಲಸಿಕೆ  ಮಹಾಮೇಳ ಕಾರ್ಯಕ್ರಮದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಲಸಿಕೆ ನೀಡಲು ಕ್ರಮ ಕೈಗೊಳ್ಳಿ. ಪುರಸಭೆ ,  ನಗರಸಭೆ ವ್ಯಾಪ್ತಿಗಳಲ್ಲಿ ವಾರ್ಡ್‌ ಟಾಸ್ಕ್ ಫೋರ್ಸ್‌ ಮೂಲಕ ಸಾರ್ವಜನಿಕರಿಗೆ ಲಸಿಕೆ ವಿತರಿಸಿ, 100ಕ್ಕಿಂತ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರಿಗೆ ಅವರು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಶಿಬಿರ ಆಯೋಜಿಸಿ ಲಸಿಕೆ ನೀಡಬೇಕು. ಮೀನುಗಾರರಿಗೆ ವಿಶೇಷ ಅಭಿಯಾನದ ಮೂಲಕ ಲಸಿಕೆ ನೀಡಿ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next