Advertisement

ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಮಲತಂದೆಗೆ ಜೈಲು

01:48 AM Feb 08, 2023 | Team Udayavani |

ಉಡುಪಿ : ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ದೈಹಿಕ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಲತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.

Advertisement

ಗಣೇಶ್‌ ನಾಯ್ಕ (49) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ನೊಂದ ಬಾಲಕಿಯ ತಾಯಿಗೆ ಗಣೇಶ್‌ ನಾಯ್ಕೆ ಜತೆ ಎರಡನೇ ಮದುವೆಯಾಗಿದ್ದು, ಅನಂತರ ಆರೋಪಿ ಮತ್ತು ನೊಂದ ಬಾಲಕಿ ಒಟ್ಟಾಗಿ ವಾಸ ಮಾಡಿಕೊಂಡಿದ್ದರು. ಬಾಲಕಿಯ ತಾಯಿ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದ ಸಂದರ್ಭ 2021 ಅಕ್ಟೋಬರ್‌ನಲ್ಲಿ ಆರೋಪಿ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಬಾಲಕಿಗೆ ಕುಡಿಸಿ ಬಲತ್ಕಾರವಾಗಿ ದೈಹಿಕ ದೌರ್ಜನ್ಯ ಎಸಗಿದ್ದನು. ತಾಯಿ ಮೂರು ತಿಂಗಳ ಬಳಿಕ ಮನೆಗೆ ಬಂದು ನೋಡಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ ಬಾಲಕಿ, ತನ್ನ ಸಾಕು ತಂದೆ ದೌರ್ಜನ್ಯ ಎಸಗಿರುವುದಾಗಿ ತಾಯಿಗೆ ತಿಳಿಸಿದ್ದಳು. ಅದರಂತೆ ನೊಂದ ಬಾಲಕಿ ತಾಯಿ 2022ರ ಜ. 22ರಂದು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್‌. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಒಟ್ಟು 33 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ನೊಂದ ಬಾಲಕಿ ಸಾಕ್ಷಿ ಮತ್ತು ಸಾಂದರ್ಭಿಕ ಸಾಕ್ಷಿ ಮತ್ತು ಡಿಎನ್‌ಎ ವರದಿ ಪರಿಗಣಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದೆ.

ಅದರಂತೆ ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಮತ್ತು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಮತ್ತು ಬಾಲಕಿಗೆ ದೌರ್ಜನ್ಯ ಎಸಗಿದಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಒಟ್ಟು 20 ಸಾವಿರ ರೂ. ದಂಡದಲ್ಲಿ 15 ಸಾವಿರ ಬಾಲಕಿಗೆ ಮತ್ತು 5 ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 3ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್‌ ಪರ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next